Advertisement

ಅಮೆರಿಕದಲ್ಲಿ ಕಾರುಕಳ್ಳನಿಂದ ತೆಲಂಗಾಣದ ವಿದ್ಯಾರ್ಥಿಯ ಗುಂಡಿಕ್ಕಿಹತ್ಯೆ

11:03 AM Feb 13, 2017 | udayavani editorial |

ವಾರಂಗಲ್‌ : ತೆಲಂಗಾಣದ ವಾರಂಗಲ್‌ ಜಿಲ್ಲೆಯ ನಿವಾಸಿಯಾಗಿರುವ 26ರ ಹರೆಯದ ವಂಶಿ ಚಂದರ್‌ ರೆಡ್ಡಿ ಯನ್ನು  ಅಮೆರಿಕದ ಕ್ಯಾಲಿಫೋರ್ನಿಯದ ಸಾಂತಾ ಕ್ಲಾರಾದ ಮಿಲ್‌ಪಿಟಾಸ್‌ ಎಂಬಲ್ಲಿ ಕಾರುಕಳ್ಳನೋರ್ವ ಗುಂಡಿಕ್ಕಿ ಸಾಯಿಸಿರುವುದಾಗಿ ತಿಳಿದು ಬಂದಿದೆ.

Advertisement

ಈ ಘಟನೆ ಕಳೆದ ಶನಿವಾರ ಸಂಭವಿಸಿರುವುದಾಗಿ ವಂಶಿ ರೆಡ್ಡಿಯ ತಂದೆ ನಿನ್ನೆ ಭಾನುವಾರ ತಿಳಿಸಿದ್ದಾರೆ. ಮಿಲ್‌ಪಿಟಾಸ್‌ನಲ್ಲಿ ನ ಸ್ಟೋರ್‌ ಒಂದರಲ್ಲಿ ತನ್ನ ಅಂಶಕಾಲಿಕ ಕೆಲಸವನ್ನು ಪೂರೈಸಿ ಮನೆಗೆ ಮರಳುತ್ತಿದ್ದ ವೇಳೆ ತನ್ನ ಪುತ್ರ ವಂಶಿ ರೆಡ್ಡಿಯನ್ನು  ಕಾರು ಕಳ್ಳ ಹಂತಕನು ಗುಂಡಿಕ್ಕಿ ಕೊಂದಿರುವುದಾಗಿ ಅವರು ಹೇಳಿದರು. 

ವಂಶಿ ಚಂದರ್‌ ರೆಡ್ಡಿ 2013ರಲ್ಲಿ ಕ್ಯಾಲಿಫೋರ್ನಿಯಕ್ಕೆ ತೆರಳಿ ಸಿಲಿಕಾನ್‌ ವ್ಯಾಲಿ ಯುನಿವರ್ಸಿಟಿಯಲ್ಲಿ ತನ್ನ ಎಂಎಸ್‌ ಶಿಕ್ಷಣವನ್ನು ಪೂರೈಸಿ ಅಲ್ಲಿನ ಐಟಿ ರಂಗದಲ್ಲಿ ಉದ್ಯೋಗದಲ್ಲಿ ತೊಡಗಿಕೊಳ್ಳಲು ಬಯಸಿದ್ದರು. 

ವಂಶಿ ನಾಪತ್ತೆಯಾಗಿರುವುದಾಗಿ ಮೊದಲು ಆತನ ಸ್ನೇಹಿತರು ನನಗೆ ಫೋನ್‌ ಮಾಡಿ ತಿಳಿಸಿದ್ದರು. ಅನಂತರದಲ್ಲಿ ಅವರು ವಂಶಿಯನ್ನು ಕಾರುಕಳ್ಳ ಹಂತಕನೋರ್ವ ಗುಂಡಿಕ್ಕಿ ಕೊಂದಿರುವುದಾಗಿ ತಿಳಿಸಿದರು ಎಂದು ವಂಶಿ ಚಂದರ್‌ ರೆಡ್ಡಿಯ ತಂದೆ  ಸಂಜೀವ್‌ ರೆಡ್ಡಿ ಅವರು ನಿನ್ನೆ ಭಾನುವಾರ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. ಎರಡು ದಿನಗಳ ಹಿಂದಷ್ಟೇ ತಮ್ಮ ಮಗ ತಮ್ಮೊಂದಿಗೆ ಫೋನಿನಲ್ಲಿ ಮಾತನಾಡಿರುವುದಾಗಿ ಅವರ ದುಃಖತಪ್ತರಾಗಿ ಹೇಳಿದರು. 

ಈ ನಡುವೆ ವಿಷಯ ತಿಳಿದ ವಾರಂಗಲ್‌ ಶಾಸಕ ಅರೂರಿ ರಮೇಶ್‌ ಅವರು ಸಂಜೀವ್‌ ರೆಡ್ಡಿ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು. 

Advertisement

ತನ್ನ ಹತ ಪುತ್ರನ ಶವವನ್ನು ಆದಷ್ಟು ಬೇಗನೆ ಸ್ವದೇಶಕ್ಕೆ ತರಿಸುವಲ್ಲಿ ನರವಾಗಬೇಕೆಂದು ಸಂಜೀವ್‌ ರೆಡ್ಡಿ ಅವರು ತೆಲಂಗಾಣ ಮತ್ತು ಕೇಂದ್ರ ಸರಕಾರವನ್ನು ಕೋರಿದ್ದಾರೆ. ಶಾಸಕ ಅರೂರಿ ಅವರು ಈ ನಿಟ್ಟಿನಲ್ಲಿ ತಮ್ಮಿಂದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next