ಹೈದರಬಾದ್: ಜಾಗವನ್ನು ಅಗೆಯುವ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ಇದ್ದ ಪುರಾತನ ಕಾಲದ ನಿಧಿ ಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದು ದೇವರ ಮೂರ್ತಿಗೆ ಅಲಂಕರಿಸಲು ಬಳಸುವ ಆಭರಣವಾಗಿದೆ ಎಂದು ವರದಿ ತಿಳಿಸಿದೆ.
ವಾರಂಗಲ್-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಜನ್ಗಾಂವ್ ಜಿಲ್ಲೆಯ ಪೆಂಬರ್ಥಿ ಗ್ರಾಮದಲ್ಲಿ ತನ್ನ 11 ಎಕರೆ ಜಾಗವನ್ನು ಸಮತಟ್ಟುಗೊಳಿಸುವ ಸಂದರ್ಭದಲ್ಲಿ ತಾಮ್ರದ ಮಡಕೆ ದೊರಕಿರುವುದಾಗಿ ವರದಿ ವಿವರಿಸಿದೆ.
ಜೆಸಿಬಿ ಮೂಲಕ ಜಾಗವನ್ನು ಸಮತಟ್ಟುಗೊಳಿಸುತ್ತಿದ್ದಾಗ ಚಿನ್ನ ಮತ್ತು ಬೆಳ್ಳಿ ಆಭರಣಗಳಿದ್ದ ಮಡಕೆ ಪತ್ತೆಯಾಗಿತ್ತು. ತಾಮ್ರದ ಮಡಕೆಯಲ್ಲಿ 1.727 ಕೆಜಿ ಬೆಳ್ಳಿ ಆಭರಣ ಹಾಗೂ 187.45 ಗ್ರಾಮ್ಸ್ ಚಿನ್ನದ ಆಭರಣ ಇದ್ದಿರುವುದಾಗಿ ವರದಿ ತಿಳಿಸಿದೆ.
ಚಿನ್ನದ ನಿಧಿ ಸಿಕ್ಕಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಗ್ರಾಮಸ್ಥರು ಸೇರತೊಡಗಿದ್ದು, ನಿಧಿ ದೊರೆತ ಸ್ಥಳದಲ್ಲಿ ಸಂಪ್ರದಾಯದ ಪ್ರಕಾರ ತೆಂಗಿನ ಕಾಯಿ ಒಡೆದು, ಊದುಬತ್ತಿ ಹಚ್ಚಿ, ಹೂ ಹಾಕಿ ಪೂಜೆ ಸಲ್ಲಿಸಿದ್ದರು. ಈ ಹಿಂದೆ ಇಲ್ಲಿರುವ ದೇವಾಲಯದ ದೇವರ ಆಭರಣ ಇದಾಗಿತ್ತು ಎಂಬ ನಂಬಿಕೆ ಸ್ಥಳೀಯರದ್ದು ಎಂದು ವರದಿ ತಿಳಿಸಿದೆ.
ಜಾಗದ ಮಾಲೀಕ ನರಸಿಂಹಲು ಅವರು ಪುರಾತನ ಚಿನ್ನಾಭರಣ ತನ್ನ ಬಳಿ ಇಟ್ಟುಕೊಳ್ಳದೆ, ನಿಧಿ ದೊರೆತ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದರು. ಭಾರತೀಯ ಗುಪ್ತ ನಿಧಿ ಕಾಯ್ದೆ 1878 ಪ್ರಕಾರ, ಈ ಪುರಾತನ ಆಭರಣಗಳನ್ನು ವಾರಂಗಲ್ ನಗರದ ಖಜಾನೆಯಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.
ಈ ಪುರಾತನ ಆಭರಣ ಮತ್ತು ಸ್ಥಳದ ಬಗ್ಗೆ ಪುರಾತತ್ವ ಇಲಾಖೆಯ ತಜ್ಞರು ಅಧ್ಯಯನ ನಡೆಸುವ ಮೂಲಕ ಇದು ಎಷ್ಟು ವರ್ಷ ಹಳೆಯ ಚಿನ್ನಾಭರಣ ಎಂಬುದನ್ನು ಪತ್ತೆ ಹಚ್ಚಲಿದ್ದಾರೆ ಎಂದು ವರದಿ ವಿವರಿಸಿದೆ.