ಆಡಳಿತಾರೂಢ ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ)ಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆಸೆ, ಕಾಂಗ್ರೆಸ್‌ಗೆ ಕೆಸಿಆರ್‌ರನ್ನು ಮಣಿಸಿ ರಾಜ್ಯವನ್ನು ತೆಕ್ಕೆಗೆ ಪಡೆಯುವ ಹವಣಿಕೆ, ಬಿಜೆಪಿಗೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಬೇಕೆಂಬ ನಿರೀಕ್ಷೆ…
ಇದು ನ.30ರಂದು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿನ ರಾಜಕೀಯ ಸ್ಥಿತಿ. ಇಲ್ಲಿ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಬಿಜೆಪಿ ಕೂಡ ಕಣದಲ್ಲಿದ್ದು, ನಟ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಆಡಳಿತ ವಿರೋಧಿ ಅಲೆಯ ಹೊರೆಯು ತಲೆಯ ಮೇಲಿದ್ದರೂ, ಬಿಆರ್‌ಎಸ್ ತನ್ನ ಸಂಘಟನಾ ಚತುರತೆಯನ್ನು ಸದ್ಬಳಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ತೆಲಂಗಾಣದಲ್ಲಿ ಮರುಹುಟ್ಟು ಪಡೆದುಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು, ಬಿಆರ್‌ಎಸ್ ಅನ್ನು ಗದ್ದುಗೆಯಿಂದ ಕೆಳಗಿಳಿಸಲು ಎಲ್ಲ ತಯಾರಿಯನ್ನೂ ಮಾಡಿಕೊಂಡಿದೆ.
ಇನ್ನು, 2019ರ ಲೋಕಸಭೆ ಚುನಾವಣೆ ಮತ್ತು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರೀ ಯಶಸ್ಸು ಗಳಿಸುವ ಮೂಲಕ ಬಿಜೆಪಿಯು ಬಿಆರ್‌ಎಸ್‌ಗೆ ಪ್ರಮುಖ ಚಾಲೆಂಜರ್ ಎಂದೇ ಪರಿಗಣಿಸಲ್ಪಟ್ಟಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಲಕ್ಷಣ ಕಾಣಿಸಿದೆ. ಆದರೂ, ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ತನಗೇನಾದರೂ ಲಾಭವಾಗಬಹುದೇ ಎಂಬ ನಿರೀಕ್ಷೆಯಲ್ಲೂ ಬಿಜೆಪಿ ನಾಯಕರಿದ್ದಾರೆ.