Advertisement

Telangana: ನಮ್ಮ ತೆಲಂಗಾಣ ಮಿಷನ್‌ ಯಶಸ್ವಿ- ಡಿ.ಕೆ. ಶಿವಕುಮಾರ್‌

12:59 AM Dec 04, 2023 | Team Udayavani |

ತೆಲಂಗಾಣ ಫ‌ಲಿತಾಂಶ ಹಲವು ಸಂದೇಶಗಳನ್ನು ನೀಡಿದೆ. ಇದು ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಜಯ ಹಾಗೆಯೇ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಜನ ಮತ ನೀಡಿದ್ದಾರೆ. ಇದು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮುಂದುವರಿದಿರುವುದರ ಸಂಕೇತ. ನಮ್ಮ ಕಾರ್ಯಕರ್ತರು ಹಾಗೂ ಮತದಾರರು ಬದಲಾವಣೆ ತರಲು ತೀರ್ಮಾನ ಮಾಡಿದ್ದರು. ಹೀಗಾಗಿ ತೆಲಂಗಾಣದಲ್ಲಿ ನಿಚ್ಚಳ ಬಹುಮತ ಸಿಕ್ಕಿದೆ.ಅಲ್ಲಿನ ಟಿಪಿಸಿಸಿ ಅಧ್ಯಕ್ಷರಾದ ರೇವಂತ್‌ ರೆಡ್ಡಿ ಅವರು ತಂಡದ ನಾಯಕರಾಗಿದ್ದರು.

Advertisement

ನಮ್ಮ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ ಮಾಡಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳ ನಮ್ಮ ನಾಯಕರು ಪ್ರತಿ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಿದ್ದೇವೆ. ಎಐಐಸಿ, ಟಿಪಿಸಿಸಿ ನಾಯಕರು, ಕಾರ್ಯಕರ್ತರಂತೆ ಕೆಪಿಸಿಸಿ ನಾಯಕರು, ಕಾರ್ಯಕರ್ತರೂ ಕೆಲಸ ಮಾಡಿದ್ದೇವೆ. ನಮ್ಮ ಸರಕಾರದ ಏಳೆಂಟು ಸಚಿವರು ತೆಲಂಗಾಣಕ್ಕೆ ಹೆಚ್ಚಿನ ಸಮಯ ಕೊಟ್ಟಿದ್ದಾರೆ.

ನಮ್ಮ ಮಿಶನ್‌ ಯಶಸ್ವಿಯಾಗಿದೆ. ಇದು ತೆಲಂಗಾಣ ರಾಜ್ಯದ ಜನರ ಗೆಲುವು. ತೆಲಂಗಾಣ ರಾಜ್ಯ ರಚನೆ ಮಾಡಿದ ಸೋನಿಯಾ ಗಾಂಧಿ ಅವರಿಗೆ ಆ ನಾಡಿನ ಜನರು ಈ ರೀತಿ ಧನ್ಯವಾದ ಅರ್ಪಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿರುವ ತೆಲಂಗಾಣ ರಾಜ್ಯದ ಜನರಿಗೆ ಕಾಂಗ್ರೆಸ್‌ ಪಕ್ಷದ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಮೇಲೆ ನಂಬಿಕೆ ಇಟ್ಟ ಜನರಿಗೆ ಧನ್ಯವಾದಗಳು. ನಾವು ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಕಳೆದ ಹತ್ತು ವರ್ಷಗಳ ಆಡಳಿತ ನೋಡಿ ಅಲ್ಲಿನ ಜನ ಬೇಸತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ಹಾಗೂ ಪ್ರಗತಿಯ ಬದಲಾವಣೆ ಬಯಸಿದ್ದಾರೆ. ಅದ ಕ್ಕಾಗಿಯೇ ಕಾಂಗ್ರೆಸ್‌ಗೆ ಮತದಾನ ಮಾಡಿದ್ದಾರೆ. ಜನರಿಟ್ಟ ನಂಬಿಕೆಯನ್ನು ಕಾಂಗ್ರೆಸ್‌ ಎಂದಿಗೂ ಹುಸಿಗೊಳಿಸುವುದಿಲ್ಲ.

ಫ‌ಲಿತಾಂಶದ ನಂತರ ಎಚ್ಚರಿಕೆಯ ಹೆಜ್ಜೆ: ತೆಲಂಗಾಣ ಸಿಎಂ ಕೆ.ಚಂದ್ರಶೇಖರರಾವ್‌ ಹಾಗೂ ಅವರ ಪುತ್ರ ಕೆ.ಟಿ. ರಾಮರಾವ್‌ ನಮ್ಮ ವಿರುದ್ಧ ಅವರು ಮಾಡಿದ ಟ್ವೀಟ್‌ ಹಾಗೂ ಅಪಪ್ರಚಾರಗಳಿಗೆ ತೆಲಂಗಾಣದ ಜನರು ಉತ್ತರ ನೀಡಿದ್ದಾರೆ. ಚುನಾವಣೆ ಫ‌ಲಿತಾಂಶದ ನಂತರ ಮುಂದಿನ ಕ್ರಮಗಳಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೇವೆ. ಪ್ರತಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಗಳನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿದಂತೆ ಅನುಷ್ಠಾನ ಮಾಡುತ್ತಿದ್ದೇವೆ. ಅದೇ ರೀತಿ ತೆಲಂಗಾಣದಲ್ಲಿ ಘೋಷಿಸಿರುವ 6 ಗ್ಯಾರಂಟಿಗಳನ್ನೂ ಜಾರಿಗೆ ತಂದೇ ತರುತ್ತೇವೆ. ಇದನ್ನು ಮತದಾರರಿಗೂ ಸ್ಪಷ್ಟನುಡಿಗಳಲ್ಲಿ ಹೇಳಿದ್ದೇವೆ.

ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next