ರಾಯಚೂರು: ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಖನಿಜ ಸಂಪನ್ಮೂಲ, ಅರಣ್ಯ ಸಚಿವ ಸಿ.ಸಿ.ಪಾಟೀಲ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಗಣಿ ಇಲಾಖೆಯಲ್ಲಿ ಮರಳಿನ ಸಮಸ್ಯೆ ಇದೆ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ವಾತಂತ್ರ ನೀಡಿದ್ದಾರೆ.
ಹೀಗಾಗಿ ಯಾರ ಹಿತಾಸಕ್ತಿ, ಒತ್ತಡ ಲೆಕ್ಕಿಸದೆ ಗಣಿಗಾರಿಕೆ ತಡೆಯಲಾಗುವುದು ಎಂದರು. ತೆಲಂಗಾಣಕ್ಕೆ ಮರಳು ನೀತಿ ಹಾಗೂ ರಾಜಸ್ಥಾನಕ್ಕೆ ಗ್ರಾನೈಟ್ ಸಂಬಂಧ ಅಧ್ಯಯನ ಮಾಡಲು ತಂಡ ಕಳುಹಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಗುಜರಾತ್‌ಗೆ ತಂಡ ತೆರಳಿ ಕರಾವಳಿ ಪ್ರದೇಶದಲ್ಲಿ ಸದಾ ಹರಿಯುವ ನದಿಗಳಿಂದ ಹೇಗೆ ಮರುಳುಗಾರಿಕೆ ಮಾಡಬಹುದು ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಿದೆ ಎಂದರು.
ತೆಲಂಗಾಣದಲ್ಲಿ ಸುಲಭಕ್ಕೆ ಮರಳು ಸಿಗುವ ವ್ಯವಸ್ಥೆಯಿದ್ದು, ಅದರ ಕುರಿತು ಇಲ್ಲಿಂದ ಅ ಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಲಾಗುವುದು. ಅಲ್ಲಿನ ಮಾದರಿಯಲ್ಲಿಯೇ ಮರಳು ನೀತಿ ಜಾರಿಗೊಳಿಸಿ ಅಕ್ರಮ ತಡೆಗಟ್ಟಲಾಗುವುದು. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ತಂಡ ರಚಿಸಲಾಗುವುದು. ಅಕ್ರಮ ನಡೆದಲ್ಲಿ ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಇದಕ್ಕಾಗಿ ಕಂದಾಯ, ಪೊಲೀಸ್ ಇಲಾಖೆಗೂ ಅಧಿಕಾರ ನೀಡಲಾಗಿದೆ ಎಂದರು.
ಖನಿಜ ಸಂಪನ್ಮೂಲಗಳಿಂದ ರಾಜ್ಯದಲ್ಲಿ 3500 ಕೋಟಿಗಿಂತ ಅಧಿಕ ರಾಜಧನ ಸಂಗ್ರಹವಾಗುತ್ತಿದೆ. ಅದನ್ನು ಹೇಗೆ ವಿನಿಯೋಗಿಸಬೇಕೆಂಬ ಕುರಿತು ಸಿಎಂ, ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಲಾಗುವುದು. ಅರಣ್ಯ ಪ್ರದೇಶ ಹೊರತುಪಡಿಸಿದ ಸ್ಥಳಗಳಲ್ಲಿ ಅರಣ್ಯವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸಚಿವ ಸ್ಥಾನದ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಹಾಗೂ ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತದೆ ಎಂದರು.