Advertisement

ಅಶಕ್ತರಿಗೆ ಆನ್‌ಲೈನ್‌ನಲ್ಲಿ ನೆರವಾಗುವ ಟೆಕ್ಕಿ

09:58 AM Feb 21, 2020 | mahesh |

ಮಹಾನಗರ: ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌; ಪ್ರವೃತ್ತಿಯಲ್ಲಿ ರೋಗಿಗಳು ಸಹಿತ ಅಶಕ್ತರಿಗೆ ಸಹಾಯಹಸ್ತ ಚಾಚುವ ಹೃದಯವಂತ. ಕೇವಲ ಐದು ತಿಂಗಳುಗಳಲ್ಲಿ 30 ಕುಟುಂಬಗಳಿಗೆ ಒಟ್ಟು 40 ಲಕ್ಷ ರೂ. ಆರ್ಥಿಕ ನೆರವು ಒದಗಿಸಿಕೊಟ್ಟ ಈ ಟೆಕ್ಕಿಯ ಯಶೋಗಾಥೆ ಮಾದರಿ ಎನಿಸಿಕೊಂಡಿದೆ.

Advertisement

ಅವರು ಮಂಗಳೂರಿನ ಎಂರಿಸಲ್ಟ್ ಸರ್ವಿಸಸ್‌ ಪ್ರೈ. ಸಂಸ್ಥೆಯ ಉದ್ಯೋಗಿ ಬಂಟ್ವಾಳ ಮೂಲದ ಅರ್ಜುನ್‌ ಭಂಡಾರ್ಕರ್‌. ತಂದೆಯ ಅನಾರೋಗ್ಯದ ಸಂದರ್ಭ ಹಣ ಹೊಂದಿಸಲು ಅನುಭವಿಸಿದ ಕಷ್ಟವೇ ಬಡ ರೋಗಿಗಳಿಗೆ ನೆರವಾಗುವತ್ತ ಅವರನ್ನು ಮುನ್ನುಗ್ಗುವಂತೆ ಮಾಡಿತು. ಪರಿಚಿತರಿಂದ ತಲಾ 100 ರೂ.ಗಳಂತೆ ಸಂಗ್ರಹಿಸಿ ವರ್ಷಕ್ಕೆ ಆರು ಮಂದಿ ಬಡ ರೋಗಿ ಗಳಿಗೆ ನೆರವಾಗುವ ಯೋಜ ನೆಯನ್ನು ಮೊದಲಿಗೆ ಹಾಕಿ  ಕೊಂಡಿ ದ್ದರು. ಬಳಿಕ ಆನ್‌ಲೈನ್‌ ಫಂಡ್‌ ರೈಸಿಂಗ್‌ ತಾಣಗಳ ಮೊರೆ ಹೊಕ್ಕರು. ಮೊದಲ ಪ್ರಕರಣದಲ್ಲೇ ರೋಗಿಗೆ 2.5 ಲಕ್ಷ ರೂ.ಗಳನ್ನು ಸಂಗ್ರಹಿಸಿ ಕೊಡಲು ಸಾಧ್ಯವಾಯಿತು.

ಅರ್ಜುನ್‌ ಅನಂತರ ತಿರುಗಿ ನೋಡಿದ್ದೇ ಇಲ್ಲ. ಇಲ್ಲಿವರೆಗೆ 29 ಆನ್‌ಲೈನ್‌ ಫಂಡ್‌ ರೈಸರ್‌ಗಳ ಮೂಲಕ 1,500 ಮಂದಿ ದಾನಿಗಳಿಂದ 40 ಲಕ್ಷ ರೂ. ನೆರವನ್ನು 30 ಕುಟುಂಬಗಳಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರ್ಹತೆ ಪರಿಶೀಲಿಸಿ ನೆರವು
ಅನಾರೋಗ್ಯದ ಗಂಭೀರತೆ, ಮನೆಯ ಪರಿಸ್ಥಿತಿ, ವೈದ್ಯರ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ಬಳಿಕ ಮಾಹಿತಿಯನ್ನು ಫಂಡ್‌ ರೈಸರ್‌ಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಗತ್ಯವಿರುವಷ್ಟು ನೆರವು ಸಂಗ್ರಹವಾದ ಕೂಡಲೇ ಸ್ಥಗಿತಗೊಳಿಸಲಾಗುತ್ತದೆ.

ನೆರವು ನೀಡುವವರ ಸಂಖ್ಯೆ ಹೆಚ್ಚಳ
ಒಂದೂವರೆ ವರ್ಷದ ಹಿಂದೆ ತಂದೆ ಆಸ್ಪತ್ರೆಗೆ ದಾಖಲಾದಾಗ ನಮ್ಮಲ್ಲಿ ಆರೋಗ್ಯ ವಿಮಾ ಪಾಲಿಸಿ ಇದ್ದರೂ ತತ್‌ಕ್ಷಣ ಹಣ ಪಾವತಿಗೆ ಪರದಾಡಬೇಕಾಯಿತು. ಇದೇ ನೋವು ರೋಗಿಗಳಿಗೆ ನೆರವು ನೀಡಬೇಕೆಂಬ ಪ್ರೇರಣೆ ನೀಡಿತು. ಸ್ನೇಹಿತರ ವಲಯದಲ್ಲಿ ಚರ್ಚಿಸಿ ಸಣ್ಣ ಮೊತ್ತದ ಗುರಿಯೊಂದಿಗೆ ಆರಂಭಿಸಿದ ಈ ಯೋಜನೆಗೆ ನೆರವು ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಅವರೆಲ್ಲರಿಗೂ ನಾನು ಆಭಾರಿ.
 - ಅರ್ಜುನ್‌ ಭಂಡಾರ್ಕರ್‌

Advertisement

ಫೇಸ್ಬುಕ್‌ ಪೇಜ್‌
“ಹೆಲ್ಪ್ ಟು ಸೇವ್‌ ಎ ಲೈಫ್‌: ಲೆಂಡ್‌ ಎ ಹೆಲ್ಪಿಂಗ್‌ ಹ್ಯಾಂಡ್‌’ ಎಂಬ ಫೇಸ್ಬುಕ್‌ ಪೇಜ್‌ ತೆರೆದು ಅಲ್ಲಿಯೂ ರೋಗಿಗಳಿಗೆ ನೆರವಾಗುವಂತೆ ಕೋರಿಕೊಳ್ಳಲಾಗುತ್ತದೆ. ಫಂಡ್‌ ರೈಸಿಂಗ್‌ ತಾಣವು ನೆರವಿನ ಹಣವನ್ನು ಕಳುಹಿಸಿಕೊಡುತ್ತದೆ. ಆ ಹಣವನ್ನು ಚೆಕ್‌ ಮುಖಾಂತರ ರೋಗಿಯ ಕುಟುಂಬಕ್ಕೆ ನೀಡಲಾಗುತ್ತದೆ. ಚೆಕ್‌ನ ಫೋಟೋ ಕಾಪಿಯಲ್ಲಿ ನೆರವು ಸ್ವೀಕರಿಸಿದ ದಾಖಲೆಗಾಗಿ ಮನೆಯವರ ಸಹಿ ಹಾಕಿಸಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗುತ್ತದೆ. ನೆರವು ಹಸ್ತಾಂತರಿಸಿದ ಫೋಟೋವನ್ನೂ ಅಪ್ಲೋಡ್‌ ಮಾಡಲಾಗುತ್ತದೆ. ದಾನಿಗಳನ್ನೇ ಕರೆಸಿ ಹಸ್ತಾಂತರವೂ ನಡೆಯುತ್ತಿದೆ. ಎಲ್ಲವನ್ನೂ ಫೇಸ್ಬುಕ್‌ನಲ್ಲಿ ದಾಖಲಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next