ತೆಕ್ಕಟ್ಟೆ : ಗ್ರಾಮೀಣ ಭಾಗದಲ್ಲಿ ಜಾನುವಾರು ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆದಾಗ ಹೈನುಗಾರರು ಹಾಗೂ ಕೃಷಿಕರಿಗೆ ಪ್ರೋತ್ಸಾಹ ಸಿಗುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯಗಳನ್ನು ಕೃಷಿ ಚಟುವಟಿಕೆಯತ್ತ ಆಕರ್ಷಿಸುವ ಮಹತ್ವದ ಕಾರ್ಯವಾಗಬೇಕಾಗಿದೆ. ಹೈನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಹೆಚ್ಚಿನ ಲಾಭದಾಯಕ ಉದ್ಯಮವನ್ನಾಗಿಸಲು ಮಾಹಿತಿ ಹಾಗೂ ಅರಿವಿನ ಅಗತ್ಯವಿದೆ ಎಂದು ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಅವರು ಹೇಳಿದರು.
ಅವರು ಜ.2 ಬುಧವಾರದಂದು ಕೆದೂರು ಗ್ರಾಮ ಪಂಚಾಯತ್ ಆವರಣದಲ್ಲಿ ಉಡುಪಿ ಜಿ.ಪಂ., ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕೆದೂರು, ಗ್ರಾ.ಪಂ. ಕೆದೂರು, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ, ಲಕ್ಷ್ಮೀ ಫೀಡ್ಸ್ ಮಂದಾರ್ತಿ, ಸರ್ವೋದಯ ಏಜನ್ಸೀಸ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನುವಾರು ಪ್ರದರ್ಶನ 2019ನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ತಾ.ಪಂ. ಸದಸ್ಯ ಕೆದೂರು ಸದಾನಂದ ಶೆಟ್ಟಿ ಮಾತನಾಡಿದರು. ಕೆದೂರು ಗ್ರಾ.ಪಂ.ಅಧ್ಯಕ್ಷ ಭುಜಂಗ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೊರ್ಗಿ ಗ್ರಾ.ಪಂ.ಅಧ್ಯಕ್ಷೆ ಗಂಗೆ ಕುಲಾಲ್ತಿ, ಉಡುಪಿ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ| ಸರ್ವೋತ್ತಮ ಉಡುಪ, ದಕ್ಷಿಣ ಕನ್ನಡ ಹಾಲು ಒಕ್ಕೂಟ, ಕುಂದಾಪುರ ಘಟಕದ ಉಪ ವ್ಯವಸ್ಥಾಪಕ ಡಾ| ಮನೋಹರ, ಕೆದೂರು ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಅಧ್ಯಕ್ಷ ಕರುಣಾಕರ ಶೆಟ್ಟಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಕೆದೂರು ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಶೆಟ್ಟಿ ಉಳ್ತೂರು, ಸಂಪಾವತಿ, ವಿನೋದ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿ ಕೆದೂರು, ಬೇಳೂರು, ಉಳ್ತೂರು, ದೇಲಟ್ಟು, ಗುಳ್ಳಾಡಿ, ಮೊಗೆಬೆಟ್ಟು, ಚಾರುಕೊಟ್ಟಿಗೆ, ಕೊರ್ಗಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಟ್ಟು 80ಕ್ಕೂ ಅಧಿಕ ಜಾನುವಾರುಗಳು ಭಾಗವಹಿಸಿದ್ದವು. ಕುಂದಾಪುರ ತಾಲೂಕು ಪಶು ಪಾಲನಾ ಇಲಾಖೆಯ ಸಹ ನಿರ್ದೇಶಕ ಡಾ| ಸೂರ್ಯನಾರಾಯಣ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಸಿದರು. ಉಳ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘ ಕಾರ್ಯನಿರ್ವಾಹಕ ಪ್ರತಾಪ್ ಶೆಟ್ಟಿ ಉಳ್ತೂರು, ಕೆದೂರು ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ| ನಿರಂಜನ್ ಮೂರ್ತಿ ವಂದಿಸಿದರು.