Advertisement
ಈ ನಡುವೆ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಅವಕಾಶ ತಪ್ಪಿರುವುದಕ್ಕೆ ಬೇಸರಗೊಂಡಿದ್ದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿ ಮನವೊಲಿಸಿದರು. ನಂತರ ಪ್ರಚಾರಕ್ಕೆ ತೆರಳುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಎನ್ನಲಾಗಿದೆ.
Related Articles
Advertisement
ಈ ಸಂದರ್ಭದಲ್ಲಿ ತೇಜಸ್ವಿನಿ ಅವರು ತಮಗೆ ಸ್ಪರ್ಧೆ ಅವಕಾಶ ನೀಡದಿರುವುದಕ್ಕೆ ಕಾರಣವೇನೆಂದು ತಿಳಿಸಬೇಕು ಎಂದು ಹೇಳಿದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಅಂತಿಮವಾಗಿ ಪ್ರಚಾರದಲ್ಲಿ ಪಾಲ್ಗೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಮುಖಂಡರು ಮನವಿ ಮಾಡಿದರು. ಈ ಬಗ್ಗೆ ತೇಜಸ್ವಿನಿ ಅವರು ಸ್ಪಷ್ಟ ನಿರ್ಧಾರ ತಿಳಿಸಿದಂತಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್, “ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅವರ ಹೆಸರನ್ನಷ್ಟೇ ಶಿಫಾರಸು ಮಾಡಲಾಗಿತ್ತು. ಆದರೆ, ಅಭ್ಯರ್ಥಿ ಬದಲಾಗಿದ್ದಾರೆ. ನಮಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ರಾಜ್ಯದ ಎಲ್ಲ 28 ಕ್ಷೇತ್ರಗಳಿಗೂ ಪ್ರಧಾನಿ ನರೇಂದ್ರ ಮೋದಿಯವರೇ ಅಭ್ಯರ್ಥಿ. ಅವರಿಗಾಗಿ ನಾವೆಲ್ಲಾ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
ಸೋಮಣ್ಣ ಜತೆಯೂ ಮಾತುಕತೆ: “ತೇಜಸ್ವಿನಿ ಅನಂತ ಕುಮಾರ್ ಅವರ ಮನೆಗೆ ಹೋಗಿ ಮನವೊಲಿಸುವ ಕೆಲಸ ಮಾಡಿದ್ದೇನೆ. ರಾಜ್ಯ ಬಿಜೆಪಿ ಚುನಾವಣಾ ಪ್ರಭಾರಿ ಮುರಳೀಧರರಾವ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅಭ್ಯರ್ಥಿ ತೇಜಸ್ವಿ ಸೂರ್ಯ ಕೂಡ ಭೇಟಿಯಾಗಿದ್ದಾರೆ. ಯಾವುದೇ ಗೊಂದಲಗಳಿಲ್ಲ.
ಚುನಾವಣಾ ಪ್ರಚಾರಕ್ಕಾಗಿ ಈಗಾಗಲೇ ಸಭೆ ನಡೆಸಿದ್ದೇನೆ. ಪದ್ಮನಾಭನಗರ, ಜಯನಗರ ಕ್ಷೇತ್ರದಲ್ಲಿ ವಾರ್ಡ್ ಮಟ್ಟದ ಸಭೆಯನ್ನೂ ಕರೆದಿದ್ದೇನೆ. ಮಾಜಿ ಸಚಿವ ವಿ.ಸೋಮಣ್ಣ ಅವರ ಮನಸ್ಸಿಗೂ ನೋವಾಗಿದ್ದು, ಅವರೊಂದಿಗೂ ಮಾತುಕತೆ ನಡೆಸುತ್ತೇನೆ. ಪಕ್ಷದ ದೊಡ್ಡದು. ಎಲ್ಲರೂ ಪಕ್ಷ ನಿಷ್ಠರಾಗಿರಬೇಕು. ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು,’ ಎಂದು ತಿಳಿಸಿದರು.
ಸಂಘ ಪರಿವಾರದಲ್ಲೂ ಅಸಮಾಧಾನ: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಯುವಜನತೆಯಲ್ಲಿ ಸಂತಸವಿದ್ದರೂ ಸಂಘ ಪರಿವಾರದ ಕೆಲವರಲ್ಲಿ ಅಸಮಾಧಾನವಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಭಿಪ್ರಾಯ ಹಂಚಿಕೊಂಡಿದ್ದು, ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದವರನ್ನು ಗುರುತಿಸದೆ ಕೇವಲ ವಾಕ್ ಚಾತುರ್ಯ ಹಾಗೂ ಇತರ ಅಂಶಗಳನ್ನು ಪರಿಗಣಿಸಿ ಅವಕಾಶ ನೀಡಿರುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ನಾನಾ ಕಡೆ ಪ್ರಚಾರ: ಈ ನಡುವೆ ಅಭ್ಯರ್ಥಿ ತೇಜಸ್ವಿ ಸೂರ್ಯ ಶುಕ್ರವಾರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ದೇವಾಂಗ ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಬೆಂಬಲ ಕೋರಿದರು. ಜಯನಗರದಲ್ಲೂ ಪಾಲಿಕೆ ಸದಸ್ಯ ಕೆಂಪೇಗೌಡ ಅವರೊಂದಿಗೆ ಯುವಕರ ತಂಡದೊಂದಿಗೆ ಚರ್ಚಿಸಿದರು.
ಆರ್‌ಎಸ್‌ಎಸ್ ಪ್ರಾರ್ಥನೆ ಸಾಲುಗಳನ್ನೇ ಟ್ವೀಟ್ ಮಾಡಿದ ತೇಜಸ್ವಿನಿ: ಆರ್‌ಎಸ್‌ಎಸ್ ಪಾರ್ಥನೆಯ ಕೊನೆಯ ಸಾಲನ್ನು ಟ್ವೀಟ್ ಮಾಡುವ ಮೂಲಕ ತೇಜಸ್ವಿನಿ ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೈತಪ್ಪಲು ಆರ್‌ಎಸ್‌ಎಸ್ ಮುಖಂಡರೇ ನೇರ ಕಾರಣ ಎಂದು ಹೇಳಲಾಗುತ್ತಿದೆ. ಅದನ್ನು ಎಲ್ಲಿಯೂ ಹೇಳಿಕೊಳ್ಳದ ತೇಜಸ್ವಿನಿ ಅವರು, ಟ್ವೀಟ್‌ನಲ್ಲಿ ಆರ್‌ಎಸ್‌ಎಸ್ ಪಾರ್ಥನೆಯ ಕೊನೆಯ ಸಾಲವನ್ನು ಯಥಾವತ್ತಾಗಿ ಬರೆದು, ದೇಶವೇ ಮೊದಲು ಎಂದು ಹೇಳಿದ್ದಾರೆ.
“ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಡಾಕ್ಟರ್ ಜೀ ಹಾಗೂ ನಂತರದಲ್ಲಿ ಸಂಘವನ್ನು ಕಟ್ಟಿ ಬೆಳೆಸಿದ ಗುರೂಜಿಯವರ ದಿನದಲ್ಲಿ ರಚಿಸಿರುವ ಸಂಘದ ಪಾರ್ಥನೆಯ ಶಕ್ತಿಯುತ ಪದಗಳು- “ಪರಂ ವೈಭವಂ ನೇತುಮೇ ತತ್ ಸ್ವರಾಷ್ಟ್ರಂ ಸಮರ್ಥಾ ಭವತ್ವಾಶಿಷಾ ತೇ ಭೃಶಮ್’ (ಸ್ವಹಿತಾಸಕ್ತಿ ಇಲ್ಲದೆ ಪ್ರತಿಯೊಬ್ಬರ ಕಾರ್ಯಬದ್ಧತೆ ಹಾಗೂ ಸೇವೆಯನ್ನು ಸೇರಿಸಿಕೊಂಡು ದೇಶವನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯುವುದು.) ಭಾರತ್ ಮಾತಾಕೀ ಜೈ, ಆರ್‌ಎಸ್‌ಎಸ್ ಪ್ರಾರ್ಥನೆ, ರಾಷ್ಟ್ರವೇ ಮೊದಲು ಎಂದು ಟ್ವೀಟ್ ಮಾಡಿದ್ದಾರೆ.