Advertisement

ಮೊದಲ ದಿನವೇ ಸೂರ್ಯ-ಪ್ರಜ್ವಲ

09:09 AM Jun 27, 2019 | mahesh |

ನವದೆಹಲಿ: ಸಂಸತ್‌ನ ಮಂಗಳವಾರದ ಕಲಾಪವು ಕರ್ನಾಟಕದ ಇಬ್ಬರು ಯುವ ಸಂಸದರ ವಾಗ್ವಾದ ಹಾಗೂ ಮಾತಿನ ಸಮರಕ್ಕೆ ಸಾಕ್ಷಿಯಾಯಿತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಕಲಾಪದ ವೇಳೆ ತಮ್ಮ ವಾಕ್ಚಾತುರ್ಯ ಪ್ರದರ್ಶಿಸಿದ್ದು ಮಾತ್ರವಲ್ಲದೆ, ಪರಸ್ಪರರ ಕಾಲೆಳೆದುಕೊಂಡಿದ್ದೂ ಕಂಡುಬಂತು.

Advertisement

ಇವರು ಮಾತ್ರವಲ್ಲದೆ, ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿರುವ ಅನೇಕ ಯುವ ನಾಯಕರು ಸದನದಲ್ಲಿ ನಿರರ್ಗಳವಾಗಿ ಮಾತನಾಡಿದ್ದು, ಪ್ರಧಾನಿ ಮೋದಿ ಅವರ ಮೆಚ್ಚುಗೆಗೂ ಪಾತ್ರವಾಯಿತು. ರಾಷ್ಟ್ರಪತಿ ಕೋವಿಂದ್‌ ಅವರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ಪ್ರಧಾನಿ ಮೋದಿ ಅವರು, ಸಂಸತ್‌ನಲ್ಲಿ ಮಾತನಾಡಿದ ನೂತನ ಸಂಸದರನ್ನು ಅಭಿನಂದಿಸಿದರು.

ತೇಜಸ್ವಿ ವರ್ಸಸ್‌ ಪ್ರಜ್ವಲ್: ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಐಎಂಎ ಹಗರಣ ಕುರಿತು ಸಂಸತ್‌ನಲ್ಲಿ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ, ‘ಐಎಂಎ ಹಗರಣದ ಕಿಂಗ್‌ಪಿನ್‌ ವಿರುದ್ಧ 10 ಸಾವಿರಕ್ಕೂ ಹೆಚ್ಚು ಎಫ್ಐಆರ್‌ ದಾಖಲಾಗಿವೆ. ಸಾವಿರಾರು ಮಂದಿಗೆ ವಂಚಿಸಲಾಗಿದೆ’ ಎಂದು ಹೇಳಿದ್ದು, ಸದ್ಯ ಕರ್ನಾಟಕದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವು ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಸದನದಲ್ಲೇ ತಿರುಗೇಟು ನೀಡಿದ ಪ್ರಜ್ವಲ್ ರೇವಣ್ಣ, ‘ಐಎಂಎ ಹಗರಣದ ತನಿಖೆಗೆಂದೇ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ತನಿಖೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ವಿಚಾರದಲ್ಲಿ ನನ್ನ ಸಹೋದರನಾದ ತೇಜಸ್ವಿ ಸೂರ್ಯ ಅವರು ಸಂಸತ್‌ನ ಹಾದಿ ತಪ್ಪಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದರು. ಜತೆಗೆ, ‘ಕರ್ನಾಟಕವು ಅತ್ಯಂತ ಭ್ರಷ್ಟ ರಾಜ್ಯ ಎಂದೆಲ್ಲ ಹೇಳುತ್ತಾ ಕೊಳಕು ರಾಜಕೀಯ ಮಾಡುವ ಬದಲು ರಾಜ್ಯದಲ್ಲಿನ ನೀರಿನ ಸಮಸ್ಯೆ, ರೈತರ ಸಮಸ್ಯೆಗಳ ಪರಿಹಾರದತ್ತ ಮುಖ ಮಾಡಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಕಾಲೆಳೆದ ತೇಜಸ್ವಿ ಸೂರ್ಯ: ದೀರ್ಘಾವಧಿಯಿಂದಲೂ ರಾಜಕೀಯ ಎನ್ನುವುದು ಒಂದು ಕುಟುಂಬದ ಬ್ಯುಸಿನೆಸ್‌ನಂತಾಗಿತ್ತು. ಆದರೆ, ಈ ಬಾರಿ ಪ್ರಧಾನಮಂತ್ರಿಯವರ ಗೆಲುವು ನವಭಾರತದ ಗೆಲುವಿದ್ದಂತೆ ಎಂದು ಭಾವಿಸಿ ಪ್ರತಿಯೊಬ್ಬ ಜನಸಾಮಾನ್ಯನೂ ಚುನಾವಣೆಯಲ್ಲಿ ಹೋರಾಡಿದ್ದಾನೆ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಪಕ್ಷ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ. ಜತೆಗೆ, ಪ್ರತಿಪಕ್ಷಗಳು ಈಗಲೂ ಪಾಠ ಕಲಿತಿದೆ ಎಂದು ನನಗೆ ಅನಿಸುತ್ತಿಲ್ಲ. ಅವರಲ್ಲಿ ಒಂದು ರೀತಿಯ ಅಹಂ ಇದೆ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಹಗರಣಗಳೇ ತುಂಬಿ ತುಳುಕಿವೆ ಎಂದೂ ಆರೋಪಿಸಿದ್ದಾರೆ. ಚಾಯ್‌ವಾಲಾವೊಬ್ಬರು ಸತತ 2ನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದುರುವುದು ದೇಶದ ಪ್ರಜಾತಂತ್ರವು ಬಲಿಷ್ಠವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದ ಅವರು, 2014ರಲ್ಲಿ ನವಭಾರತದ ಉದಯವಾಯಿತು. ಕಾನೂನಿನ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಆಗಿರದಿದ್ದರೂ, ಒಬ್ಬ ಉತ್ತಮ ನಾಯಕನು ಉತ್ತಮ ಆಡಳಿತವನ್ನು ಒದಗಿಸಿರುವುದು ನಿಜ ಎಂದಿದ್ದಾರೆ. ಇದೇ ವೇಳೆ, ಭಾರತದ ಹೊರಗೆ ಭಾರತೀಯರು ಅದ್ಭುತ ಸಾಧನೆ ಮಾಡುತ್ತಾರೆ ಎಂದರೆ, ಭಾರತದೊಳಗೆ ಏಕೆ ಅದು ಸಾಧ್ಯವಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.

Advertisement

ಮಂಡ್ಯ ರೈತರನ್ನು ನೆನೆದ ಪ್ರಜ್ವಲ್ ರೇವಣ್ಣ
ರಾಜ್ಯದಲ್ಲಿನ ನೀರಿನ ಸಮಸ್ಯೆ ಹಾಗೂ ರೈತರ ಸಂಕಷ್ಟಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿಯೆತ್ತಿರುವ ಸಂಸದ ಪ್ರಜ್ವಲ್ ರೇವಣ್ಣ, ಈ ವಿಚಾರದಲ್ಲಿ ರಾಜಕೀಯ ಬಿಟ್ಟು ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸಬೇಕು ಎಂದು ಕೋರಿಕೊಂಡಿದ್ದಾರೆ. ಸಾಲದ ಸುಳಿಗೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾತನಾಡುವ ವೇಳೆ ಪ್ರಜ್ವಲ್ ಅವರು ವಿಶೇಷವಾಗಿ ಮಂಡ್ಯ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ನೀರಿನ ಸಮಸ್ಯೆ, ರೈತರ ಆತ್ಮಹತ್ಯೆ, ಅನ್ನದಾತರ ಸಂಕಷ್ಟಗಳನ್ನು ದಯವಿಟ್ಟು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕೋರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next