ನವದೆಹಲಿ:ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ನಂತರ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅವರನ್ನು ಶ್ಲಾಘಿಸಿರುವ ಬಿಜೆಪಿ ನಾಯಕಿ ಉಮಾ ಭಾರತಿ, ತೇಜಸ್ವಿ ಇನ್ನೂ ಯುವಕ, ಆದರೆ ರಾಜ್ಯದ ಆಡಳಿತ ನಡೆಸುವಷ್ಟು ಪರಿಪಕ್ವವಾಗಿಲ್ಲ. ಒಂದು ವೇಳೆ ಆರ್ ಜೆಡಿ ಅಧಿಕಾರಕ್ಕೇರಿದ್ದರೆ ಕೊನೆಗೂ ಲಾಲೂ ಪ್ರಸಾದ್ ಬಿಹಾರದ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದರು ಎಂದು ವಿಶ್ಲೇಷಿಸಿದರು.
ತೇಜಸ್ವಿ ತುಂಬಾ ಒಳ್ಳೆಯ ಹುಡುಗ. ಆದರೆ ಇವರ ಕಪಿಮುಷ್ಠಿಯಿಂದ ಬಿಹಾರ ಹೊರಬಂದಂತಾಗಿದೆ. ಯಾಕೆಂದರೆ ತೇಜಸ್ವಿಗೆ ರಾಜ್ಯ ಮುನ್ನಡೆಸುವಷ್ಟು ಅನುಭವವಿಲ್ಲ. ಆರ್ ಜೆಡಿ ಅಧಿಕಾರಕ್ಕೆ ಬಂದಿದ್ದರೆ ಲಾಲೂ ಪ್ರಸಾದ್ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಮೂಲಕ ಬಿಹಾರವನ್ನು ಜಂಗಲ್ ರಾಜ್ ಮಾಡುತ್ತಿದ್ದರು. ತೇಜಸ್ವಿ ರಾಜ್ಯದ ಅಧಿಕಾರ ಹಿಡಿಯಬಹುದು, ಆದರೆ ಅದಕ್ಕೆ ಇನ್ನೂ ಸಮಯವಿದೆ ಎಂದು ಉಮಾಭಾರತಿ ಭೋಪಾಲ್ ನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.
ಏತನ್ಮಧ್ಯೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಉಮಾ ಭಾರತಿ, ಅವರು ನನ್ನ ಹಿರಿಯಣ್ಣ ಇದ್ದಂತೆ. ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ತಂತ್ರಗಾರಿಕೆಯಿಂದ ಎದುರಿಸಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಜವಾಹರಲಾಲ್ ವಿವಿ ಆವರಣದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ಅನಾವರಣ
ಕಮಲ್ ನಾಥ್ ಶಿಸ್ತಿನ ವ್ಯಕ್ತಿಯಾಗಿದ್ದು, ಅವರು ನನ್ನ ಹಿರಿಯಣ್ಣ ಇದ್ದಂತೆ. ರಾಜಕೀಯ ಸಮಸ್ಯೆಗಳು ಎದುರಾಗದೇ ಇದ್ದಿದ್ದರೆ ಕಮಲ್ ನಾಥ್ ಸರ್ಕಾರವನ್ನು ಉತ್ತಮವಾಗಿ ಮುನ್ನಡೆಸಬಹುದಾಗಿತ್ತು ಎಂದು ಹೇಳಿದರು.