Advertisement

ತಾವರೆಕೆರೆಯಲ್ಲಿ ತಹಶೀಲ್ದಾರ್‌ ಗ್ರಾಮವಾಸ್ತವ್ಯ

05:22 PM Mar 20, 2021 | Team Udayavani |

ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ತಾಲೂಕಿನ ನುಗ್ಗೇ ಹಳ್ಳಿ ಹೋಬಳಿ ತಾವರೆಕೆರೆ ಗ್ರಾಮದಲ್ಲಿ ಮಾ.20ರಂದು ನಡೆಯಲಿರುವ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದಡಿ ತಹಶೀಲ್ದಾರ್‌ ಗ್ರಾಮ ವಾಸ್ತವ್ಯ ಮಾಡ ಲಿದ್ದು, ತರಾತುರಿಯಲ್ಲಿ ಗ್ರಾಮ ಸ್ವತ್ಛಗೊಳಿಸಲಾಗಿದೆ.

Advertisement

ಸರ್ಕಾರಿ ಶಾಲೆ ಸಮೀಪ ಆದು ಹೋಗಿರುವ ಚರಂಡಿ ಹಲವು ದಿನಗಳಿಂದ ಕಸ, ಹೂಳು, ಗಿಡಗಂಟಿ, ಹುಲ್ಲು ಬೆಳೆದು ಕೊಳಚೆ ನೀರು ಹರಿಯದೇ ದುರ್ವಾಸನೆ ಬರುತ್ತಿತ್ತು. ತಾಲೂಕು ಆಡಳಿತವು ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಹೂಡುವುದರಿಂದ, ಮುಜುಗರದಿಂದ ತಪ್ಪಿಸಿಕೊಳ್ಳಲು ಸ್ಥಳೀಯ ಗ್ರಾಪಂ ಚರಂಡಿ ಹಾಗೂ ರಸ್ತೆ ಅಕ್ಕಪಕ್ಕದಲ್ಲಿ ಬೆಳೆದಿದ್ದ ಗಡಿಗಂಟಿ ಸ್ವತ್ಛ ಮಾಡಿಸಿದೆ.

ಬರಿಗಾಲಿನಲ್ಲೇ ಸ್ವತ್ಛತೆ: ಚರಂಡಿ ಒಳಗೆ ಸಾಕಷ್ಟು ಮಣ್ಣು ತುಂಬಿಕೊಂಡು ದುರ್ನಾತ ಬೀರುತ್ತಿದೆ. ಇದನ್ನು ಸ್ವತ್ಛ ಮಾಡಲು ಕಾರ್ಮಿಕರಿಗೆ ಅಗತ್ಯ ಪರಿಕರ ನೀಡಿಲ್ಲ, ಬರಿಗಾಲಿನಲ್ಲಿ ಚರಂಡಿಗೆ ಇಳಿಸಲಾಗಿದೆ. ಅಲ್ಲದೆ, ಕೈಗೆ ಗೌಸ್‌, ಮುಖಕ್ಕೆ ಮಾಸ್ಕ್ ನೀಡದೆ, ಪಿಡಿಒ ಅವರೇ ಮುಂದೆ ನಿಂತು ಚರಂಡಿ ಸ್ವತ್ಛ ಮಾಡಿಸಿದರು. ಕೊಳಚೆ ನೀರಿನಲ್ಲಿ ನಿಂತು ಕಾರ್ಮಿಕರು ಕೆಲಸ ಮಾಡುವುದರಿಂದ ಅವರಿಗೆ ಚರ್ಮ ರೋಗಗಳು ಬರುವ ಸಂಭವವಿರುತ್ತದೆ ಎಂಬ ಪರಿವಿಲ್ಲದೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ ಬೇಕು: ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, 500 ಆಸು ಪಾಸಿನಷ್ಟು ಮಂದಿ ವಾಸವಾಗಿರುವ ತಾವರೆಕೆರೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯವಿದೆ. ಗ್ರಾಮಕ್ಕೆ ಕೂಗಳತೆ ದೂರದಲ್ಲಿನ ನೆಟ್ಟೇಕರೆ ಗ್ರಾಮಸ್ಥರಿಗೂ ಇದರಿಂದ ಸಹಕಾರಿ ಆಗಲಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ, ಗ್ರಾಮ ವಾಸ್ತವ್ಯದಲ್ಲಾದರೂ ಇದು ನೆರವೇರಲಿದೆ ಎಂದು ಗ್ರಾಮಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸಕಾಲಕ್ಕೆ ಬಸ್‌ ಇಲ್ಲ: ಗ್ರಾಮದಿಂದ ನುಗ್ಗೇಹಳ್ಳಿ ಹೋಬಳಿ ಕೇಂದ್ರ ಹಾಗೂ ಚನ್ನರಾಯಪಟ್ಟಣ ಸೇರಿ ವಿವಿಧ ಕಡೆಗಳಿಗೆ 50ಕ್ಕೂ ಹೆಚ್ಚು ಮಂದಿ ಶಾಲಾ ಕಾಲೇಜಿಗೆ ತೆರಳುತ್ತಾರೆ. ಅವರಿಗೆ ಸಕಾಲಕ್ಕೆ ಬಸ್‌ ಬರುತ್ತಿಲ್ಲ, ಗ್ರಾಮಕ್ಕೆ 9.30 ಗಂಟೆಗೆ ಆಗಮಿಸುವುದರಿಂದ ವಿದ್ಯಾರ್ಥಿಗಳ ಸಮಯಕ್ಕೆ ಇದು ಹೊಂದಾಣಿಕೆ ಆಗುತ್ತಿಲ್ಲ, ಕನಿಷ್ಠ ಎಂಟು ಗಂಟೆಗೆ ಬಸ್‌ ಬಂದರೆ ಎಲ್ಲರಿಗೂ ಅನುಕೂಲ ಆಗುತ್ತದೆ. ಇಲ್ಲದೆ ಹೋದರೆ ಗ್ರಾಮದಿಂದ ನಾಲ್ಕೈದು ಕಿ.ಮೀ.ವರೆಗೆ ಪಾದಯಾತ್ರೆ ಮಾಡಿ ನಂತರ ಬಸ್‌ ಏರಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ.

Advertisement

ಅಂಗನವಾಡಿ, ಶಾಲಾ ಕೊಠಡಿ ಅವಶ್ಯಕ: ಗ್ರಾಮಕ್ಕೆ 30 ವರ್ಷದ ಹಿಂದೆ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದು ಅದು ಶಿಥಿಲವಾಗಿದೆ. ಮಳೆ ಬಂದರೆ ನೀರು ಸೋರುತ್ತಿದೆ. ಎರಡು ಕೊಠಡಿಯಲ್ಲಿ ಒಂದರಿಂದ 5ನೇ ತರಗತಿವರೆಗೆ 20 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ಒಂದು ಕೊಠಡಿ ಒಳಗೆ ನೀರಿನ ಟ್ಯಾಂಕ್‌ ಇರಿಸಿದ್ದು, ಜಿಡ್ಡುಗಟ್ಟಿದೆ. ಮೊತ್ತೂಂದು ಕೊಠಡಿ ಶಿಥಿಲವಾಗಿದೆ. ಗೋಡೆ ಬಿರುಕು ಬಿಟ್ಟು ಬೀಳುವ ಹಂತದಲ್ಲಿದೆ. ನೂತನ ಕೊಠಡಿ ನಿರ್ಮಿಸುವತ್ತ ತಾಲೂಕು ಆಡಳಿತ ಗಮನ ಹರಿಸಬೇಕಾಗಿದೆ. ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುವ ಟಿ.ಎಂ.ತನುಜಾ, ಟಿ.ಎಸ್‌.ದಿವ್ಯಾ, ಟಿ.ಎಂ.ಪೂಜಾ ಉದಯವಾಣಿ ಜೊತೆ ಮಾತನಾಡಿ, ಗ್ರಾಮಕ್ಕೆ ಬಸ್‌ ಇಲ್ಲದೆ ಇರುವುದರಿಂದ ನಾಲ್ಕೈದು ಕಿ.ಮೀ.ವರೆಗೆ ನಡೆದು ಕಾಲೇಜಿಗೆ ತೆರಳಬೇಕಿದೆ. ದಾರಿ ಮಧ್ಯದಲ್ಲಿ ಜಂಬೂರು ವನ ಇದೆ. ಚಿರತೆ ನೆಲೆಸಿದ್ದು ಜೀವ ಕೈನಲ್ಲಿ ಹಿಡಿದು ಸಾಗಬೇಕಾಗಿದೆ. ಇನ್ನು ನಿರಂತರ ಜ್ಯೋತಿ ಇದೆ. ಆದರೆ, ರಾತ್ರಿ ಎಂಟು ಗಂಟೆಗೆ ವಿದ್ಯುತ್‌ ಕಡಿತ ಮಾಡುವುದರಿಂದ ಓದಲು ಸಮಸ್ಯೆ ಆಗಿದೆ ಎಂದರು.

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next