Advertisement

ಕ್ಯಾನ್ಸರ್‌ ಬಾಧಿತ ಧ್ವನಿಪೆಟ್ಟಿಗೆ ತೆಗೆಯಲ್ಪಟ್ಟರೂ,ನೀವು ಮಾತಾಡಬಹುದು

02:59 PM Apr 16, 2017 | |

ಕ್ಯಾನ್ಸರ್‌ ಬಾಧಿತ ಧ್ವನಿಪೆಟ್ಟಿಗೆ (ಲಾರಿಂಕ್ಸ್‌) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲ್ಪಟ್ಟಾಗ ಇನ್ನು ಮುಂದೆ ಮಾತನಾಡಲಾಗದು ಎಂಬ ನೋವು ನಿಮ್ಮನ್ನು ಕಾಡಿರಬಹುದು. ಆದರೆ ಈ ನೋವು ಶಾಶ್ವತವಲ್ಲ. ನೀವೂ ಮತ್ತೆ ಮಾತನಾಡುವಂತಾಗಲು ವೈದ್ಯಕೀಯ ವಿಜ್ಞಾನವು ವೈಜ್ಞಾನಿಕವಾಗಿ ದೃಢಪಟ್ಟ ಉಪಕ್ರಮಗಳನ್ನು ಹೊಂದಿದೆ. ಈ ಬಗ್ಗೆ ಇಲ್ಲಿ ಪರಿಚಯಾತ್ಮಕ ವಿವರಣೆ ನೀಡಲಾಗಿದೆ. ಜತೆಗೆ ಧ್ವನಿ ಪೆಟ್ಟಿಗೆಯ ಕ್ಯಾನ್ಸರ್‌ಗೆ ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗಿದೆ. 

Advertisement

ಮನುಷ್ಯನ ಭಾವನೆಗಳ ಆಭಿವ್ಯಕ್ತಿ ಮಾಧ್ಯಮವಾದ ಧ್ವನಿಯನ್ನು ಉಂಟು ಮಾಡುವ ಅಂಗವೇ ಧ್ವನಿಪೆಟ್ಟಿಗೆ. ಫ್ಯಾರಿಂಕ್ಸ್‌ (ಗಂಟಲು) ಮತ್ತು ಟ್ರೇಕಿಯಾ (ಶ್ವಾಸ ನಾಳ) ನಡುವಿನ ಅಂಗ ಧ್ವನಿಪೆಟ್ಟಿಗೆ ಅಥವಾ ಲಾರಿಂಕ್ಸ್‌. ಶ್ವಾಸಕೋಶದಿಂದ ಗಾಳಿ ಒಳಹೊರಗೆ ಹೋಗುವುದಕ್ಕೆ ಧ್ವನಿಪೆಟ್ಟಿಗೆ ಅನುವು ಮಾಡಿಕೊಡುತ್ತದೆ. ನಾವು ಸೇವಿಸುವ ಆಹಾರ  ಶ್ವಾಸನಾಳ ಪ್ರವೇಶಿಸದಂತೆ ಧ್ವನಿಪೆಟ್ಟಿಗೆ ತಡೆಯುತ್ತದೆ. ಧ್ವನಿಪೆಟ್ಟಿಗೆಯಲ್ಲಿ ಬೆಳೆಯುವ ದುರ್ಮಾಂಸವೇ ಲಾರಿಂಜಿಯಲ್‌ ಕ್ಯಾನ್ಸರ್‌.

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ನಿಖರವಾದ ಕಾರಣವನ್ನು ಕಂಡುಕೊಳ್ಳಲು ಈ ವರೆಗೆ ಸಾಧ್ಯವಾಗಿಲ್ಲ. ಧೂಮಪಾನ ಮತ್ತು ಮದ್ಯಪಾನ ಧ್ವನಿಪೆಟ್ಟಿಗೆ ಕ್ಯಾನ್ಸರ್‌ಗೆ ಉಂಟುಮಾಡಬಲ್ಲ ಅಪಾಯಕಾರಿ ಅಂಶಗಳು ಎನ್ನಲಾಗಿದೆ. ಇದರೊಂದಿಗೆ ಮರದ ಹುಡಿ (ವುಡ್‌ ಡಸ್ಟ್‌), ಪೇಂಟ್‌, ರಾಸಾಯನಿಕಗಳಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು, ಸೋಂಕು ಹಾಗೂ ಕಡಿಮೆ ರೋಗ ನಿರೋಧಕ ಶಕ್ತಿ ಧ್ವನಿಪೆಟ್ಟಿಗೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಇತರ ಅಂಶಗಳು. ಧ್ವನಿ ಕರ್ಕಶವಾಗುವುದು, ನುಂಗುವಾಗ ತೊಂದರೆ, ಕುತ್ತಿಗೆ ಉರಿಯೂತ, ವಾಸಿಯಾಗದ ಕಫ‌, ಗಂಟಲು ಉರಿಯೂತ, ಕಿವಿ ನೋವು, ಉಸಿರಾಟದಲ್ಲಿ ತೊಂದರೆ, ಉಸಿರಾಡುವಾಗ ಸದ್ದಾಗುವುದು, ತೂಕದಲ್ಲಿ ಅತಿಯಾದ ಇಳಿಕೆ ಮತ್ತು ಅತಿಯಾದ ಆಯಾಸ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. 

ಟೋಟಲ್‌ ಲಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣ ಧ್ವನಿಪೆಟ್ಟಿಗೆಯನ್ನು ತೆಗೆಯುವುದು ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ಇರುವ ಚಿಕಿತ್ಸಾತ್ಮಕ ಆಯ್ಕೆಯಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ಕುತ್ತಿಗೆಯಲ್ಲಿ ಒಂದು ರಂಧ‌Å (ಸ್ಟೋಮ) ಇರುತ್ತದೆ. ರೋಗಿ ಅದರ ಮೂಲಕವೇ ಉಸಿರಾಡಬೇಕಾಗುತ್ತದೆ. ಧ್ವನಿಪೆಟ್ಟಿಗೆಯನ್ನು ತೆಗೆದ ಬಳಿಕ ಸಹಜವಾಗಿ ವ್ಯಕ್ತಿ ತನ್ನ ಧ್ವನಿಯನ್ನು ಕಳೆದುಕೊಳ್ಳುತ್ತಾನೆ. ಇದು ಸಾಮಾಜಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಆತನ ಮೇಲೆ ಪರಿಣಾಮ ಬೀರುತ್ತದೆ.

ಹಾಗಾದರೆ ಮಾತನಾಡುವುದು 
ಹೇಗೆ?

ಕ್ಯಾನ್ಸರ್‌ ಬಾಧಿತ ಧ್ವನಿಪೆಟ್ಟಿಗೆಯನ್ನು ತೆಗೆದ ಬಳಿಕ ರೋಗಿ ಮಾತನಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಹಾಗಾದರೆ ಈ ಸ್ಥಿತಿ ಶಾಶ್ವತವೇ? ಅಲ್ಲ. ಆತ ಮತ್ತೆ ಮಾತನಾಡುವಂತಾಗಲು ಹಲವು ರೀತಿಯ ಉಪಕ್ರಮಗಳಿವೆ. ಅವೆಂದರೆ, ಈಸೋಫೇಜಿಯಲ್‌ ಸ್ಪೀಚ್‌, ಎಲೆಕ್ಟ್ರೋ ಲಾರಿಂಕ್ಸ್‌, ಟ್ರೇಕಿಯೋ-ಈಸೋಫೇಜಿಯಲ್‌ (ಟಿಇ) ವಾಯ್ಸ  ಪ್ರಾಸೆಸಿನ್‌. 

Advertisement

ಈಸೋಫೇಜಿಯಲ್‌ ಸ್ಪೀಚ್‌ ಅಂದರೆ ಅನ್ನನಾಳದಿಂದ ಗಾಳಿಯನ್ನು ಹೊರಗೆಡಹುವ ಮೂಲಕ ಧ್ವನಿಯನ್ನುಂಟುಮಾಡುವುದು.  ಈ ವಿಧಾನದಲ್ಲಿ ಗಾಳಿಯನ್ನು ಹೊರಸೂಸುವಾಗ ಅದನ್ನು ಗಂಟಲು ಭಾಗದ ಅನ್ನನಾಳದಲ್ಲಿ  ನಿಲ್ಲಿಸಿ, ಬಾಯಿಯಿಂದ ಹೊರಸೂಸುವಾಗ ಶಬ್ದವನ್ನುಂಟುಮಾಡಲಾಗುತ್ತದೆ. ಎಲೆಕ್ಟ್ರೋ ಲ್ಯಾರಿಂಕ್ಸ್‌ ಎಂಬುದು ಬ್ಯಾಟರಿ ಚಾಲಿತ, ಕೈಯಲ್ಲಿ ಹಿಡಿದುಕೊಳ್ಳಬಹುದಾದ ಒಂದು ಉಪಕರಣವಾಗಿದೆ. ಈ ಉಪಕರಣವನ್ನು ಗಂಟಲು ಭಾಗದಲ್ಲಿ ಹಿಡಿದುಕೊಂಡು ಬಾಯಿಯಿಂದ ಉಚ್ಚರಿಸಿದರೆ ರೋಬೊಟಿಕ್‌ ಸ್ವರ ಹೊರಬರುತ್ತದೆ. 

ವಾಯ್ಸ ಪ್ರಾಸ್ತೆಸಿಸ್‌ ಒಂದು ಉತ್ತಮ ಉಪಕ್ರಮ
ಸಂಪೂರ್ಣ ಲಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯ ವೇಳೆ ಮಾಡಲಾದ ರಂಧ್ರದ ಒಳಗೆ ಮತ್ತೂಂದು ಸಣ್ಣ ರಂಧ‌Åವನ್ನು ಮಾಡಲಾಗುತ್ತದೆ. ಇದನ್ನು ಟ್ರೇಕಿಯಾ-ಈಸೋಫಾಜಿಯಲ್‌ ಪಂಕ್ಚರ್‌ ಎಂದು ಕರೆಯಲಾಗುತ್ತದೆ. ಈ ರಂಧ್ರದೊಳಗೆ ಕವಾಟದ ರಚನೆಯಿರುವ ಸಿಲಿಕಾನ್‌ ಉಪಕರಣವೊಂದನ್ನು ಇರಿಸಲಾಗುತ್ತದೆ. ಇದನ್ನು ಇರಿಸಿದಾಕ್ಷಣ ಧ್ವನಿ ಹೊರಡುವುದಿಲ್ಲ. ಉಪಕರಣವು ಗಾಳಿಯನ್ನು ಶ್ವಾಸಕೋಶದಿಂದ ಅನ್ನನಾಳಕ್ಕೆ ಹೋಗಲು ಅನುವು ಮಾಡಿಕೊಡುತ್ತದೆ. ಇದರಿಂದ ಗಂಟಲು ಭಾಗದ ಅನ್ನನಾಳದಲ್ಲಿ ಕಂಪನ ಉಂಟಾಗಿ ಧ್ವನಿ ಉಂಟಾಗುತ್ತದೆ. 

ಟಿಇ  ಪ್ರಾಸ್ತೆಸಿಸ್‌ನಲ್ಲಿ ಎರಡು ವಿಧಗಳಿವೆ; ಇನ್‌ಡ್ವೆಲ್ಲಿಂಗ್‌ ಮತ್ತು ನಾನ್‌ ಇನ್‌ಡ್ವೆಲ್ಲಿಂಗ್‌. ನಾನ್‌ ಇನ್‌ಡ್ವೆಲ್ಲಿಂಗ್‌ಉಪಕರಣವನ್ನು ರೋಗಿ ಅಥವಾ ಆತನ ಕಡೆಯವರು ಹೊರತೆಗೆದು, ಸ್ವತ್ಛಗೊಳಿಸಿ ಮತ್ತೆ ಇರಿಸಬಹುದಾಗಿದೆ. ಇದನ್ನು ಅವರೇ ಮಾಡಿಕೊಳ್ಳಬಹುದಾಗಿದ್ದು ವಾಕ್‌ ತಜ್ಞರ ಆವಶ್ಯಕತೆ ಇರುವುದಿಲ್ಲ. ಯಾರಿಗೆ ಈ ಉಪಕರಣವನ್ನು ಆಗಾಗ್ಗೆ ಶುಚಿಗೊಳಿಸಿ ಹಾಕುವುದು ತೊಂದರೆ ಎನಿಸುತ್ತದೆಯೋ ಅವರು ದೀರ್ಘ‌ ಕಾಲ ಅಳವಡಿಸಿಕೊಳ್ಳಬಹುದಾದ ಇನ್‌ಡ್ವೆಲ್ಲಿಂಗ್‌ ಟಿಇ ಪ್ರಾಸ್ತೆಸಿಸ್‌ ಹಾಕಿಸಿಕೊಳ್ಳಬಹುದು.  ಆದರೆ ಇದನ್ನು ಅಳವಡಿಸಲು ಅಥವಾ ಒಂದೊಮ್ಮೆ ಹೊರ ತೆಗೆಯಬೇಕಾದರೆ ವಾಕ್‌ ತಜ್ಞರ ಅಗತ್ಯವಿದೆ. ಈ ಉಪಕರಣ ಅಳವಡಿಸಿದ ರೋಗಿಗಳು ಪರಿಣಾಮಕಾರಿಯಾಗಿ ಧ್ವನಿಯುತ್ಪತ್ತಿ ಮಾಡಲು ವಾಕ್‌ ತರಬೇತಿ ಪಡೆಯಬೇಕಾಗುತ್ತದೆ.

– ಡಾ| ಶೀಲಾ ಎಸ್‌.,   
ಅಸಿಸ್ಟೆಂಟ್‌ ಪ್ರೊಫೆಸರ್‌
ಎಸ್‌.ಒ.ಎ.ಎಚ್‌.ಎಸ್‌., ಮಣಿಪಾಲ ವಿವಿ

Advertisement

Udayavani is now on Telegram. Click here to join our channel and stay updated with the latest news.

Next