ತೀರ್ಥಹಳ್ಳಿ : ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಎದ್ದು ಕಾಣುತ್ತಿದೆ. ಸ್ಕ್ಯಾನಿಂಗ್ ಯಂತ್ರ ದೂಳು ಹಿಡಿದು ಕೂತಿರುವ ಬಗ್ಗೆ ಹಾಗೂ ಜಯಚಾಮರಾಜೇಂದ್ರ ಆಸ್ಪತ್ರೆಯ ಹೊರಾಂಗಣದಲ್ಲಿ ವಿದ್ಯುತ್ ದೀಪವಿಲ್ಲದೆ ಇರುವ ಬಗ್ಗೆ ಈಗಾಗಲೇ ಉದಯವಾಣಿ ಪತ್ರಿಕೆ ವರದಿ ಮಾಡಿತ್ತು. ಆದರೆ ಈಗ ಮತ್ತೊಂದು ಸಮಸ್ಯೆ ಕಾಡತೊಡಗಿದೆ.
ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ವೈದ್ಯರುಗಳು ನೀಡುತ್ತಿಲ್ಲ ಎಂಬುದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ.
ಸುಸಜ್ಜಿತವಾದ ಕಟ್ಟಡ, ನೂರು ಬೆಡ್ ಗಳ ಅಸ್ಪತ್ರೆ ಉತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆ ಎಂದೆಲ್ಲ ಗೃಹಸಚಿವರಾದ ಆರಗ ಜ್ಞಾನೇಂದ್ರ ಅವರು ಆಸ್ಪತ್ರೆಗೆ ಭೇಟಿ ನಿಡಿದಾಗೆಲ್ಲ ಹೇಳುತ್ತಿರುತ್ತಾರೆ.
ಸಚಿವರು ಬಂದಾಗ ಆಸ್ಪತ್ರೆಯ ತುಂಬಾ ಹಿಂದೆ ಮುಂದೆ ವೈದ್ಯೆರೇ ಇರುತ್ತಾರೆ. ಆದರೆ ಅನಾರೋಗ್ಯದಿಂದ ಬರುವ ರೋಗಿಗಳಿಗೆ ವೈದ್ಯರು ಸಿಕ್ಕಿದರೆ ಅದೇ ಅವರ ಪುಣ್ಯ.
ಹಿಂದೆ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರೊಬ್ಬರ ವಿಶೇಷ ಮುತುವರ್ಜಿಯಿಂದ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಆಸ್ಪತ್ರೆಯ ವಾತಾವರಣವನ್ನು ಬಹಳ ಅಚ್ಚುಕಟ್ಟಾಗಿ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಹಾಗೂ ದಾನಿಗಳ ನೆರವಿನಿಂದ ಅಸ್ಪತ್ರೆಗೆ ಬೇಕಾದ ಅಗತ್ಯ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಕೊಠಡಿ, ಮತ್ತು ಪಾರ್ಕ್ , ಧ್ವಜದ ಕಟ್ಟೆ, ಪೀಠೋಪಕರಣ, ಡಯಾಲಿಸಿಸ್ ಮಿಷನ್ ,ಮಳೆಯಲ್ಲಿ ನೀರು ಸೊರದಂತೆ ಮೇಲ್ಛಾವಣಿ ಮಾಡು ಹಾಗೂ ಮತ್ತಿತರ ವಸ್ತುಗಳನ್ನು ಅಸ್ಪತ್ರೆಗೆ ಅಳವಡಿಸಿ ತಾಲೂಕು ಅಸ್ಪತ್ರೆಯಾದರೂ ಕೂಡ ರಾಜ್ಯದಲ್ಲಿ ಮಾದರಿ ಅಸ್ಪತ್ರೆ ಎನ್ನುವಂತೆ ಮಾಡಿದ್ದರಲ್ಲದೆ ಬಡರೋಗಿಗಳ ಪಾಲಿಗೆ ಅಪಾತ್ಬಾಂದವರಾಗಿದ್ದರು. ಅವರು ವರ್ಗಾವಣೆ ಆದ ನಂತರ ಜೆ.ಸಿ ಆಸ್ಪತ್ರೆಗೆ ಗ್ರಹಣ ಒಕ್ಕರಿಸಿದೆ. ಈಗಿರುವ ಹಲವು ವೈದ್ಯರುಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೆಸರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಆದರೆ ಅವರು ಮಾಡುವುದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಇದು ಈಗಿರುವ ವೈದ್ಯರ ಸಮಸ್ಯೆ.
ಇದನ್ನೂ ಓದಿ : ಬಜೆಟ್ ಅನುಷ್ಠಾನ : ಹೊಸ ಪರಂಪರೆ ಆರಂಭಿಸಿದ ಸಿಎಂ ಬೊಮ್ಮಾಯಿ
ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಸಮಯಕ್ಕೆ ಸರಿಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಇರದೇ ಖಾಸಗಿ ಆಸ್ಪತ್ರೆಯಲ್ಲಿ ಕಾಣಸಿಗುತ್ತಾರೆ. ಇನ್ನು ಕೆಲವು ವೈದ್ಯಾಧಿಕಾರಿಗಳು ಆಸ್ಪತ್ರೆ ವೈದ್ಯರ ಕೊಠಡಿಯಲ್ಲೇ ಹಣ ಪೀಕುವ ಕೆಲಸಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಬಡ ರೋಗಿಗಳ ಪಾಡು ಹೇಳತೀರದಾಗಿದೆ. ಜಯಚಾಮರಾಜೇಂದ್ರ ಆಸ್ಪತ್ರೆಯ ( ಹೆಸರು ಬೇಡ ) ವೈದ್ಯರು ಆಸ್ಪತ್ರೆಯ ಕೊಠಡಿಯಲ್ಲಿ ಕುಳಿತು ಬಡ ರೋಗಿಗಳಿಗೆ ಖಾಸಗಿ ನರ್ಸಿಂಗ್ ಹೋಂ ಗಳಲ್ಲಿ ಸಿಗುವ ಸೌಲಭ್ಯ ಮತ್ತು ಚಿಕಿತ್ಸೆ ಎಷ್ಟಾಗುತ್ತದೆ ಎಂಬ ಮಾಹಿತಿ ನೀಡಿ ನಂತರ ಡೀಲ್ ಕುದುರಿಸಿ ಬಡಪಾಯಿ ರೋಗಿಗಳನ್ನು ಖಾಸಗಿ ನರ್ಸಿಂಗ್ ಹೋಂ ಗಳಿಗೆ ಕಳುಹಿಸಿ ನಂತರ ಜೆ.ಸಿ ಆಸ್ಪತ್ರೆಯ ವೈದ್ಯರೇ ಹೋಗಿ ದುಬಾರಿ ವೆಚ್ಚದ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಮಾತು ಹಣ ಕಳೆದುಕೊಂಡ ರೋಗಿಯೊಬ್ಬರು ಉದಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬಾರದು ಎಂಬ ಕಾನೂನು ಇದ್ದರೂ ಸಹ ತರಬೇತಿ ರೂಪದಲ್ಲಿ ಖಾಸಗಿ ಆಸ್ಪತ್ರೆಗೆ ಹೋಗಿ ಬಡ ರೋಗಿಗಳನ್ನು ಪಿಕುವುದು ಎಷ್ಟರ ಮಟ್ಟಿಗೆ ಸರಿ? ಗೃಹಸಚಿವರು ಇದನ್ನು ತಕ್ಷಣ ಗಮನಿಸದೆ ಹೋಗದಿದ್ದರೆ ಮಾತ್ರ ತೀರ್ಥಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆ ಹೆಸರಿಗಷ್ಟೇ ಇರಲಿದೆ ಎನ್ನುವುದು ಅಕ್ಷರಶಃ ಸತ್ಯ.