ಉಳ್ಳಾಲ: ಬಾಲಕಿಯೋರ್ವಳ ಕುತ್ತಿಗೆಗೆ ಶಾಲು ಬಿಗಿದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಎಂಬಲ್ಲಿ ನಡೆದಿದ್ದು, ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದು, ಬಳಿಕ ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಕಾಸರಗೋಡು ಎಡನೀರು ನಿವಾಸಿ ಮೇಘಶ್ರೀ (13) ಮೃತಪಟ್ಟ ಬಾಲಕಿ. ಚೆರ್ಕಳ ಎಡನೀರು ಮಠದ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ ಕೋಟೆಕಾರಿನ ಮಾವನ ಮನೆಯಲ್ಲಿ ಒಂದು ತಿಂಗಳಿನಿಂದ ಇದ್ದಳು.
ಹಾಡು ಹಾಕಿ ನೃತ್ಯ ಮಾಡುವ ಹವ್ಯಾಸ ಹೊಂದಿದ್ದ ಈಕೆ, ಶಾಲು ಕುತ್ತಿಗೆಗೆ ಬಿಗಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಮೇಘಶ್ರೀ ಸಾವಿನಲ್ಲಿ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆಮಂದಿಯನ್ನು ಹಾಗೂ ಹೆತ್ತವರನ್ನು ಉಳ್ಳಾಲ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಆ ಬಳಿಕ ಸ್ಥಳ ಮಹಜರು ವೇಳೆ ಬಾಲಕಿ ಕೋಣೆಯ ಬಾಗಿಲು ಹಾಕಿದ್ದು, ಬಾಗಿಲು ಒಡೆದು ನೋಡಿದಾಗ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿರುವುದು ಗೊತ್ತಾಗಿದೆ.
ಮೇಘಶ್ರೀ ತನ್ನ ಬಣ್ಣ ಕಪ್ಪು ಎಂಬ ಜುಗುಪ್ಸೆಯನ್ನು ಹೊಂದಿದ್ದಳು. ಇದರಿಂದ ಬೇಸತ್ತು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.