Advertisement

ತಂತ್ರಜ್ಞಾನ, ವೈಜ್ಞಾನಿಕವಾಗಿ ಪ್ರಕರಣಗಳ ತನಿಖೆ ಅಗತ್ಯ

12:41 AM Mar 01, 2020 | Lakshmi GovindaRaj |

ಯಲಹಂಕ: ಪೊಲೀಸ್‌ ಅಧಿಕಾರಿಗಳು ವೈಜ್ಞಾನಿಕ ವಿಧಾನಗಳ ಮೂಲಕ ಸಾಕ್ಷ್ಯ ಸಂಗ್ರಹಿಸಿ ಪ್ರಕರಣಗಳ ತನಿಖೆ ನಡೆಸಬೇಕು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಹೇಳಿದರು.

Advertisement

ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕನೇ ರಾಜ್ಯಮಟ್ಟದ ಪೊಲೀಸ್‌ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಗೆ ವೈಜ್ಞಾನಿಕ ತನಿಖೆಯ ಮಾಹಿತಿಗಳನ್ನು ಒದಗಿಸಬೇಕಿರುವುದರಿಂದ ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕಳ್ಳರು ಮತ್ತು ಅಪರಾಧಿಗಳು ಪೊಲೀಸರಿಗಿಂತಲೂ ಬುದ್ದಿವಂತರಾಗಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಮನೆಗಳ್ಳತನ, ದರೋಡೆ ಕೃತ್ಯಗಳು ಕಡಿಮಯಾಗಿ, ಸೈಬರ್‌ ಕ್ರೈಂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ಆರೋಪಿಗಳಿಗಿಂತ ಹತ್ತು ಪಟ್ಟು ತಂತ್ರಜ್ಞಾನ ತಿಳಿದುಕೊಳ್ಳಬೇಕು. ನೈಪುಣ್ಯತೆ ಹೊಂದಬೇಕು.

ಈ ದಿಸೆಯಲ್ಲಿ ಇಂತಹ ಕರ್ತವ್ಯಕೂಟ ತುಂಬಾ ಮುಖ್ಯವಾಗಿದ್ದು, ಇದು ಕೇವಲ ತಂಡದ ಆಯ್ಕೆಗೆ ಮಾತ್ರ ಸೀಮಿತವಾಗಿರದೆ, ಇಲ್ಲಿ ಕಲಿತಿರುವ ಕೌಶಲ್ಯವನ್ನು ತಮ್ಮ ಜಿಲ್ಲೆ ಮತ್ತು ವಲಯಗಳಲ್ಲಿ ಉಪಯೋಗಿಸಿ ಎಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ.ಎಸ್‌.ಪರಶಿವಮೂರ್ತಿ, ಎಫ್‌ಎಸ್‌ಎಲ್‌ ನಿರ್ದೇಶಕ ವಿನಾಯಕ ಪಾಟೀಲ್‌ ಇತರರು ಇದ್ದರು.

350 ಮಂದಿ ಭಾಗಿ: ಪಾರಿತೋಷಕ ವಿತರಣೆ: ಕೂಟದಲ್ಲಿ ಪೊಲೀಸ್‌ ಕಾನ್ಸ್‌ಟೆಬಲ್‌ಗ‌ಳು, ಇನ್‌ಸ್ಪೆಕ್ಟರ್‌ ಸೇರಿ ರಾಜ್ಯದಾದ್ಯಂತ 350 ಜನ ಮಂದಿ ಅಧಿಕಾರಿ ಸಿಬ್ಬಂದಿ ಭಾಗವಹಿಸಿದ್ದರು. ವೈಜ್ಞಾನಿಕ ವಿಧಾನದ ತನಿಖೆ, ಪೊಲೀಸ್‌ ಫೋಟೋಗ್ರಫಿ, ವಿಡಿಯೋಗ್ರಫಿ, ಕಂಪ್ಯೂಟರ್‌ ಜಾಗೃತಿ, ಶ್ವಾನದಳ, ಬೆರಳಚ್ಚು ವಿಭಾಗಗಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಂಸನಾ ಪತ್ರ, ಮೆಡಲ್‌ ಹಾಗೂ ಪಾರಿತೋಷಕ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next