Advertisement

ಅಪರಾಧ ನಿಯಂತ್ರಣಕ್ಕೆ ತಂತ್ರಜ್ಞಾನ ವಿನಿಮಯ: ಬಸವರಾಜ ಬೊಮ್ಮಾಯಿ

08:37 PM Mar 19, 2021 | Team Udayavani |

ಬೆಂಗಳೂರು: ಅಪರಾಧ ಪ್ರಕರಣಗಳ ಪತ್ತೆ ಮತ್ತು ನಿಗ್ರಹಕ್ಕೆ ನೂತನ ತಂತ್ರಜ್ಞಾನ ಬಳಕೆ ಹಾಗೂ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ತಂತ್ರಜ್ಞಾನ ವಿನಿಮಯಕ್ಕೆ ಸಂಬಂಧಿಸಿದಂತೆ ಜರ್ಮನಿ ದೇಶದ ಬವೇರಿಯಾ ರಾಜ್ಯದ ಜತೆಗಿನ ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗಿದ್ದು, ಅದು ಮತ್ತಷ್ಟು ಭದ್ರಗೊಳ್ಳಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬೆಂಗಳೂರಿನಲ್ಲಿರುವ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಕೌನ್ಸಲ್ ಜನರಲ್ ಅಚಿಮ್ ಬರ್ಕರ್ಟ್ ನೇತೃತ್ವದ ನಿಯೋಗಕ್ಕೆ ಶುಕ್ರವಾರ ಅವರು ಈ ಭರವಸೆ ನೀಡಿದರು.

ವಿಧಾನಸೌಧದಲ್ಲಿ ಅಚಿಮ್ ಬರ್ಕರ್ಟ್ ನೇತೃತ್ವದ ನಿಯೋಗದ ಜತೆ ಸಭೆ ನಡೆಸಿದ ಸಚಿವರಾದ ಬೊಮ್ಮಾಯಿ‌ ಅವರು, ಜರ್ಮನಿ ಮತ್ತು ಭಾರತ ಒಕ್ಕೂಟ ವ್ಯವಸ್ಥೆಯನ್ನು ಬೆಂಬಲಿಸುತ್ತ ಬಂದಿರುವ ಬಲಿಷ್ಠ ರಾಷ್ಟ್ರಗಳು. ಜರ್ಮನಿಯ ಬವೇರಿಯಾ ರಾಜ್ಯದ ಜತೆ ಈಗಾಗಲೇ ರಾಜ್ಯ ಸರ್ಕಾರ 2007 ರಲ್ಲಿ ಒಪ್ಪಂದ ಮಾಡಿಕೊಂಡು ಪರಸ್ಪರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಪ್ರಮುಖವಾಗಿ ಗೃಹ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಭಯ ರಾಜ್ಯಗಳು ಪರಸ್ಪರ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.

ಜರ್ಮನಿ ದೇಶದ ಬವೇರಿಯಾದಲ್ಲಿ ಅಪರಾಧ ಪ್ರಕರಣಗಳನ್ನು ಯಾವ ರೀತಿ ನಿಯಂತ್ರಣ ಮಾಡಲಾಗುತ್ತಿದೆ. ಅಪರಾಧಗಳನ್ನು ಪತ್ತೆ ಮಾಡಲು ಬಳಕೆ ಮಾಡುತ್ತಿರುವ ತಂತ್ರಜ್ಞಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅನುಸರಿಸಲಾಗುತ್ತಿರುವ ಮಾರ್ಗೋಪಾಯಗಳ ಕುರಿತು ವಿಚಾರ ವಿನಿಮಯ ಆಗಬೇಕು. ಆಗ ಈ ಒಪ್ಪಂದಕ್ಕೆ ಹೆಚ್ಚು ಮಹತ್ವ ಬರುತ್ತದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಿ ತಂತ್ರಜ್ಞಾನ  ವಿನಿಮಯ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ:ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಒಂದು ಆಯ್ಕೆಯಾಗಿದೆ: ಉದ್ಧವ್ ಠಾಕ್ರೆ

Advertisement

ಈ ಸಮಯದಲ್ಲಿ ಅಚಿಮ್ ಬರ್ಕರ್ಟ್ ಅವರು ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಜರ್ಮನಿಯ ಬವೇರಿಯಾ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

ಇದಕ್ಕೆ ಒಪ್ಪಿಗೆ ಸೂಚಿಸಿದ ಸಚಿವರು, ನಮ್ಮ ನಿಯೋಗ ಜರ್ಮನಿಗೆ ಬಂದ ಸಂದರ್ಭದಲ್ಲಿ ಉಭಯ ರಾಜ್ಯಗಳು ನಿರ್ದಿಷ್ಟ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚೆ ಮಾಡೋಣ. ಕಾಲ ಮಿತಿಯೊಳಗೆ ಹೊಸ ಕಾರ್ಯ ಯೋಜನೆಗಳು ಜಾರಿಯಾಗಬೇಕು. ಈ ಮೂಲಕ ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಸಾಗೋಣ ಎಂಬ ಆಶಯವನ್ನು ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.

ರಾಜ್ಯ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next