Advertisement

ಕೊಳವೆಬಾವಿಗಳ “ಲೈಫ್’ತಿಳಿಸುವ ತಂತ್ರಜ್ಞಾನ ಅಭಿವೃದ್ಧಿ

11:42 PM Jun 07, 2019 | Lakshmi GovindaRaj |

ಬೆಂಗಳೂರು: ವ್ಯಕ್ತಿಯ ದೈಹಿಕ ಪರೀಕ್ಷೆಯಂತೆ ರೈತರ ಜಮೀನುಗಳಲ್ಲಿರುವ ಕೊಳವೆಬಾವಿಗಳ ಆರೋಗ್ಯ ಪರೀಕ್ಷೆಗೂ ತಂತ್ರಜ್ಞಾನವೊಂದು ಬರುತ್ತಿದೆ. ರಾಜ್ಯದಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿರುವುದರ ಜತೆಗೆ ಬತ್ತುತ್ತಿರುವ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆ ಕೊಳವೆಬಾವಿಗಳ ಸಾಮರ್ಥ್ಯ ಪರೀಕ್ಷಿಸುವ ಸೆನ್ಸರ್‌ ಆಧಾರಿತ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ.

Advertisement

ಇದರಿಂದ ಕೊಳವೆಬಾವಿಯ “ಲೈಫ್’ ಕೂಡ ತಿಳಿಯಬಹುದು. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ತಂತ್ರಜ್ಞಾನ ರೂಪುಗೊಳ್ಳುತ್ತಿದೆ. ರಾಜ್ಯದಲ್ಲಿ ಹೋಬಳಿ ಮಟ್ಟದಲ್ಲಿ ಮಳೆ ಮಾಪನಗಳನ್ನು ಅಳವಡಿಸುವ ಮೂಲಕ ಈ ಹಿಂದೆ ಗಮನಸೆಳೆದಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಜಿ ನಿರ್ದೇಶಕ ವಿ.ಎಸ್‌. ಪ್ರಕಾಶ್‌ ಈ ವಿನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, 2-3 ತಿಂಗಳಲ್ಲಿ ಇದರ ಪ್ರಯೋಗ ನಡೆಯಲಿದೆ.

“ಎಲ್ಲಿ ಕೊಳವೆಬಾವಿ ಕೊರೆಯಬಹುದು ಎಂಬುದನ್ನು ತಿಳಿಸುವ ತಂತ್ರಜ್ಞಾನ ನಮ್ಮಲ್ಲಿದೆ. ಆದರೆ, ರೈತರ ಜಮೀನುಗಳಲ್ಲಿರುವ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಎಷ್ಟಿದೆ? ವೋಲ್ಟೆàಜ್‌ ಎಷ್ಟಿದೆ? ಬತ್ತುವ ಸ್ಥಿತಿಯಲ್ಲಿದೆಯೇ? ಹಾಗಿದ್ದರೆ, ಅದಕ್ಕೆ ಪರ್ಯಾಯಗಳೇನು? ಇಂತಹ ಹಲವು ಮಾಹಿತಿಗಳನ್ನು ನೀಡುವಂತಹ ತಂತ್ರಜ್ಞಾನ ಲಭ್ಯವಿಲ್ಲ. ಈಗ ಅಭಿವೃದ್ಧಿಪಡಿಸಿರುವ ಸೆನ್ಸರ್‌ ಆಧಾರಿತ ತಂತ್ರಜ್ಞಾನ ಆ ಕೊರತೆ ನೀಗಿಸಲಿದೆ.

ಈ ಸಂಬಂಧದ ಎಲ್ಲ ರೂಪುರೇಷೆಗಳು ಸಿದ್ಧಪಡಿಸಲಾಗಿದೆ. ಶೀಘ್ರ ಇದರ ಪ್ರಯೋಗವೂ ನಡೆಯಲಿದೆ’ ಎಂದು ವಿ.ಎಸ್‌. ಪ್ರಕಾಶ್‌ “ಉದಯವಾಣಿ’ಗೆ ಮಾಹಿತಿ ನೀಡಿದರು. ರೈತರಿಗೆ ಏನು ಅನುಕೂಲ?: ರೈತರಿಗೆ ಮುಂಚಿತವಾಗಿಯೇ ತನ್ನ ಜಮೀನಿನಲ್ಲಿರುವ ಕೊಳವೆಬಾವಿಯಲ್ಲಿರುವ ನೀರಿನ ಲಭ್ಯತೆ ಹಾಗೂ ಬತ್ತುವ ಮುನ್ಸೂಚನೆ ದೊರೆತರೆ, ಅದಕ್ಕೆ ತಕ್ಕಂತೆ ಆತ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಅನಗತ್ಯ ವೆಚ್ಚ ಮತ್ತು ಶ್ರಮ ತಪ್ಪಲಿದೆ. ಪ್ರಸ್ತುತ ರೈತರು ಬೇಕಾಬಿಟ್ಟಿ ಕೊಳವೆಬಾವಿಗಳನ್ನು ಕೊರೆಸುತ್ತಾರೆ.

ಒಂದು ಫೇಲಾದರೆ ಮತ್ತೂಂದು. ಅದೂ ಕೈಕೊಟ್ಟರೆ ಮೊಗದೊಂದು. ಹೀಗೆ ಕೇವಲ ಅರ್ಧ ಎಕರೆಯಲ್ಲಿ 50 ಕೊಳವೆಬಾವಿಗಳನ್ನು ಕೊರೆದ ಉದಾಹರಣೆಗಳಿವೆ. ಲಕ್ಷಾಂತರ ರೂ.ಇದಕ್ಕಾಗಿಯೇ ಸುರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೂ ತಂತ್ರಜ್ಞಾನ ರೈತರ ನೆರವಿಗೆ ಬರಲಿದೆ. ಸದ್ಯಕ್ಕೆ ತಂತ್ರಜ್ಞಾನದ ಹೆಸರು ಗೌಪ್ಯವಾಗಿಡಲಾಗಿದೆ. ಶೀಘ್ರದಲ್ಲೇ ಇದನ್ನು ಬಹಿರಂಗಗೊಳಿಸಲಾಗುವುದು ಎಂದು ಅವರು ಹೇಳಿದರು.

Advertisement

ಅಂದಹಾಗೆ, ಪ್ರಕಾಶ್‌ ಅವರು ಈ ಹಿಂದೆ ಕೇಂದ್ರೀಯ ಅಂತರ್ಜಲ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೆಎಸ್‌ಎನ್‌ಡಿಎಂಸಿ ಸಂಸ್ಥಾಪಕರೂ ಹೌದು. 2017ರಲ್ಲಿ ರಾಜ್ಯದಲ್ಲಿ ನಡೆದ ಯಶಸ್ವಿ ಮೋಡಬಿತ್ತನೆ ಮಾಡಿದ ವಿಜ್ಞಾನಿಗಳ ತಂಡದಲ್ಲಿ ಪ್ರಕಾಶ್‌ ಕೂಡ ಇದ್ದರು.

ಪ್ರಸ್ತುತ ತಂತ್ರಜ್ಞಾನಗಳಿವು: “ಪ್ರಸ್ತುತ ಕೊಳವೆಬಾವಿಗಳಿಂದ ನೀರನ್ನು ಪಂಪ್‌ ಮಾಡಿ ಹೊರತೆಗೆದ ನಂತರ ಉಕ್ಕುವ “ರಿಕವರಿ’ ಹಾಗೂ ಅದಕ್ಕಾಗಿ ತೆಗೆದುಕೊಂಡ ಸಮಯ, ಜಲಧಾರೆಗಳನ್ನು ಲೆಕ್ಕಹಾಕಿ ಕೊಳವೆಬಾವಿಯಲ್ಲಿರುವ ನೀರಿನ ಇಳುವರಿ ಅಳೆಯುವ ವ್ಯವಸ್ಥೆಯಿದೆ. ಇದಲ್ಲದೆ, ಕ್ಯಾಮೆರಾವನ್ನು ಕೊಳವೆಬಾವಿಗಳಲ್ಲಿ ಬಿಟ್ಟು ಅದು ನೀಡುವ ಚಿತ್ರಗಳಿಂದ ಅಂತರ್ಜಲ ಮಟ್ಟ, ಮಣ್ಣಿನ ಗುಣಲಕ್ಷಣ, ಕೊಳವೆಬಾವಿ ಕೊರೆಯಲು ಇರುವ ಅಡತಡೆಗಳನ್ನು ಪತ್ತೆಹಚ್ಚುವ ವ್ಯವಸ್ಥೆ ಇದೆ. ಆದರೆ, ಸೆನ್ಸರ್‌ ಆಧಾರಿತ ಉಪಕರಣಗಳನ್ನು ಅಳವಡಿಸಿ, ಕೊಳವೆಬಾವಿಗಳ ಸಾಮರ್ಥ್ಯ ಕಂಡುಹಿಡಿಯುವ ತಂತ್ರಜ್ಞಾನ ಇದುವರೆಗೆ ಇಲ್ಲ’ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ವಿಜ್ಞಾನಿ ಡಾ.ಅನಂತಕುಮಾರ್‌ ಅರಸ್‌ ಸ್ಪಷ್ಟಪಡಿಸುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next