ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕೆಲವು ತಂತ್ರಜ್ಞರೆಲ್ಲಾ ಸೇರಿ ಸಿನಿಮಾ ಮಾಡಿರುವುದು ಗೊತ್ತೇ ಇದೆ. ಇನ್ನೂ ಕೆಲವು ತಂತ್ರಜ್ಞರು ಸೇರಿ ಎಡಿಟಿಂಗ್, ಡಬ್ಬಿಂಗ್ ಸೇರಿದಂತೆ ಇತರೆ ತಾಂತ್ರಿಕತೆವುಳ್ಳ ಸ್ಟುಡಿಯೋ ಮಾಡಿದ್ದೂ ಇದೆ. ಈಗ ಸಹಾಯಕ ಸಂಕಲನಕಾರರ ಸರದಿ.
ಹೌದು, ಸಂಕಲನಕಾರ ಕೆ.ಎಂ.ಪ್ರಕಾಶ್ ಅವರ ಬಳಿ ಹಲವು ವರ್ಷಗಳಿಂದ ಸಹಾಯಕ ಸಂಕಲನಕಾರರಾಗಿ ಕೆಲಸ ಮಾಡುತ್ತಿರುವ ಜ್ಞಾನೇಶ್ ಮಠದ್, ರಾಜ್ ಶಿವ ಹಾಗೂ ಗಿರಿಗೌಡ ಸೇರಿ ಹೊಸದೊಂದು ಆಡಿಯೋ ಕಂಪೆನಿ ಹಾಗೂ ಯುಟ್ಯೂಬ್ ಚಾನೆಲ್ ಶುರುಮಾಡಿದ್ದಾರೆ.
ಅವರು ಮಾಡಿರುವ ಹೊಸ ಆಡಿಯೋ ಕಂಪೆನಿ ಹಾಗು ಯುಟ್ಯೂಬ್ ಚಾನೆಲ್‌ಗೆ “ಬ್ಯಾಂಗ್ ಮ್ಯೂಸಿಕ್’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗಷ್ಟೇ ಶುರುಮಾಡಿರುವ ಈ ಆಡಿಯೋ ಕಂಪೆನಿ ಮೂಲಕ “ಪಾದರಸ’, “ಲೀಸಾ’ ಚಿತ್ರಗಳ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, “ವಿಟಮಿನ್ ಎಂ’ ಎಂಬ ಕಿರುಚಿತ್ರವನ್ನೂ ಸಲ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಈ ಆಡಿಯೋ ಕಂಪೆನಿ ಶುರುಮಾಡಿರುವ ಉದ್ದೇಶ ಕುರಿತು ಹೇಳುವ ಜ್ಞಾನೇಶ್ ಮಠದ್, “ಚಿತ್ರರಂಗದಲ್ಲಿ ಈಗ ಆಡಿಯೋ ಕಂಪೆನಿಗಳಿಂದ ನಿರ್ಮಾಪಕರು ಯಾವುದೇ ಲಾಭ ನಿರೀಕ್ಷೆ ಮಾಡುವಂತಿಲ್ಲ. ಆಡಿಯೋ ಕಂಪೆನಿಗಳ ಬಳಿ ಲಾಭದ ಬಗ್ಗೆ ಮಾತಾಡುವಂತಿಲ್ಲ.
ಹೀಗಾಗಿ, ನಾವೇ ಆಡಿಯೋ ಕಂಪೆನಿ ಹಾಗೂ ಚಾನೆಲ್‌ವೊಂದನ್ನು ಶುರು ಮಾಡಿ, ಆ ಮೂಲಕ ಹಾಡುಗಳನ್ನು ಬಿಡುಗಡೆ ಮಾಡುವುದು, ಆಲ್ಬಂ ಮತ್ತು ಕಿರುಚಿತ್ರಗಳಿಗೂ ವೇದಿಕೆ ಕಲ್ಪಿಸಿಕೊಟ್ಟು, ಸಾಧ್ಯವಾದಷ್ಟು ನಿರ್ಮಾಪಕರ ಸಮಸ್ಯೆಗೆ ಸ್ಪಂದಿಸಬೇಕೆಂಬ ಉದ್ದೇಶ ಇಟ್ಟುಕೊಂಡಿರುವುದಾಗಿ’ ಹೇಳುತ್ತಾರೆ ಜ್ಞಾನೇಶ್ ಮಠದ್.
ಇಲ್ಲಿ ನಿರ್ಮಾಪಕರಿಗೆ ಬರುವ ಲಾಭದಲ್ಲಿ ಸಾಧ್ಯವಾದಷ್ಟು ಕೊಡುವ ಮೂಲಕ ಅವರಿಗೆ ನೆರವಾಗುವ ಮೂಲಕ, ಅವರ ಚಿತ್ರಗಳನ್ನು ಯಾವುದೇ ಹಣ ಪಡೆಯದೆ, ಉಚಿತವಾಗಿ ನಮ್ಮದೇ ಕಂಪೆನಿಯ ಫೇಸ್‌ಬುಕ್ ಪೇಜ್, ವಾಟ್ಸಾಪ್ ಹಾಗೂ ಇನ್‌ಸ್ಟಗ್ರಾಮ್ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಒಳ್ಳೆಯ ಚಿತ್ರಗಳನ್ನು ಹೆಚ್ಚು ಮಂದಿಗೆ ತಲುಪಿಸುವ ಕೆಲಸ ಮಾಡುವುದು ಈ ಕಂಪೆನಿ ಉದ್ದೇಶ ಎನ್ನುತ್ತಾರೆ ಅವರು.