Advertisement

ಕೆಲ ಎಟಿಎಂಗಳಲ್ಲಿ ತಾಂತ್ರಿಕ ದೋಷ; ಗ್ರಾಹಕರ ಪರದಾಟ

02:14 PM Apr 01, 2020 | Suhan S |

ಬೆಂಗಳೂರು: ನಗರದ ಕೆಲವೆಡೆ ಎಟಿಎಂಗಳಲ್ಲಿ ಹಣ ಲಭ್ಯವಾಗದ ಕಾರಣ ಮಂಗಳವಾರ ಜನ ಪರದಾಡುವಂತಾಯಿತು. ತಾಂತ್ರಿಕ ದೋಷ, ನೆಟ್‌ವರ್ಕ್‌ ಸಮಸ್ಯೆ ಜತೆಗೆ ಹಣದ ಅಲಭ್ಯತೆ ಕಾರಣಕ್ಕೆ ಹಲವು ಎಟಿಎಂಗಳು ಸ್ಥಗಿತಗೊಂಡಿರುವುದರಿಂದ ಸಕಾಲದಲ್ಲಿ ಹಣ ಪಡೆಯಲಾಗದೆ ತೊಂದರೆಯಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

ನಗರದ ಎಲ್ಲಾ ಎಟಿಎಂಗಳಲ್ಲಿ ಹಣ ಲಭ್ಯವಿದೆ ಎಂದು ಬ್ಯಾಂಕ್‌ಗಳ ಅ ಧಿಕಾರಿಗಳು ಹೇಳುತ್ತಿದ್ದರೂ ಹಲವೆಡೆ ಎಟಿಎಂನಲ್ಲಿ ಹಣವಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಏ.1ರಿಂದ ವೇತನ, ಪಿಂಚಣಿ ಜಮೆ ಆಗಲಿದ್ದು, ಕೇಂದ್ರ ಘೋಷಿಸಿರುವ ಪರಿಹಾರ ಮೊತ್ತ ಕೂಡ ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆಯಾಗಲಿದೆ. ಆ ಹೊತ್ತಿನಲ್ಲೂ ಎಟಿಎಂಗಳಲ್ಲಿ ಹಣ ಲಭ್ಯವಿಲ್ಲದಿದ್ದರೆ ಹೇಗೆ ಎಂಬ ಆತಂಕ ಗ್ರಾಹಕರನ್ನು ಕಾಡುತ್ತಿದೆ.

ಆಯ್ದ ಎಟಿಎಂ ಸ್ಥಗಿತ: ನಿರ್ದಿಷ್ಟ ಕಾರಣ, ನೈರ್ಮಲ್ಯ ಸಮಸ್ಯೆ ಕಾರಣಕ್ಕೆ ಕೆಲ ಎಟಿಎಂಗಳನ್ನು ಕ್ವಾರಂಟೈನ್‌ನಡಿ ನಿಗಾದಲ್ಲಿರಿಸಿ ಸ್ಥಗಿತಗೊಳಿಸಲಾಗಿದೆ. ಬಳಕೆದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಎಟಿಎಂ ಬಳಸುವಾಗ ಸ್ಕ್ರೀನ್‌ ಮುಟ್ಟುವಾಗ, ಪಿನ್‌ ಸಂಖ್ಯೆ ನಮೂದಿಸುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್‌ ಬಳಸಿಯೇ ಮುಂದುವರಿಯುವ ವ್ಯವಸ್ಥೆ ಮಾಡಲಾಗಿದೆ. ಎಟಿಎಂಗಳಲ್ಲಿ ಹಣ ಲಭ್ಯತೆ ಇದೆ. ಕೆಲವೆಡೆ ಹಣ ಭರ್ತಿ ಮಾಡುವಲ್ಲಿ ಕೆಲವು ತಾಸು ವ್ಯತ್ಯಯವಾಗಿ ರುವುದನ್ನು ಹೊರತುಪಡಿಸಿದರೆ ಹಣದ ಕೊರತೆ ಸಮಸ್ಯೆ ಇಲ್ಲ. ರಾಜ್ಯಾದ್ಯಂತ 13,000 ಎಟಿಎಂಗಳಿದ್ದು, ನೈರ್ಮಲ್ಯಕ್ಕೆ ಒತ್ತು ನೀಡಲು ತಿಳಿಸಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ ಎಸ್‌ಬಿಐನ 1,078 ಎಟಿಎಂಗಳಿದ್ದು, ಎಲ್ಲೆಡೆ ಹಣದ ಪೂರೈಕೆ ನಿರಂತರವಾಗಿ ನಡೆದಿದೆ. ಭದ್ರತಾ ಸಿಬ್ಬಂದಿ ಇರುವ ಎಟಿಎಂಗಳ ಬಳಿ ಸಿಬ್ಬಂದಿಯೇ ಗ್ರಾಹಕರು ಸರದಿಯಲ್ಲಿ ಹಣ ಪಡೆಯಲು ಸಹಕರಿಸಲಿದ್ದಾರೆ. ಕೈಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಿಯೇ ಎಟಿಎಂ ಬಳಸಲು ಅವಕಾಶ ನೀಡುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಇಲ್ಲದ “ವಿದ್ಯುನ್ಮಾನ ನಿಗಾ’ (ಇ- ಸರ್ವಲೆನ್ಸ್‌) ವ್ಯವಸ್ಥೆ ಇರುವ ಎಟಿಎಂಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್‌ಬಿಐ ಬ್ಯಾಂಕ್‌ನ ಉನ್ನತ ಅಧಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ರಾಜ್ಯದ ಬಹುತೇಕ ಕಡೆ ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್‌, ಟಿಶ್ಯೂಪೇಪರ್‌ ವ್ಯವಸ್ಥೆ ಇದ್ದು, ಗ್ರಾಹಕರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಗುರುವಾರದಿಂದ ಒತ್ತಡ?: 2019-20ನೇ ಸಾಲಿನ ಹಣಕಾಸು ವರ್ಷ ಮಾ. 31ಕ್ಕೆ ಮುಕ್ತಾಯವಾಗಿರುವುದರಿಂದ ಏ.1ರಂದು ಬ್ಯಾಂಕ್‌ಗಳಿಗೆ ರಜೆ ಇದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಗುರುವಾರದಿಂದ ಬ್ಯಾಂಕ್‌ಗಳು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಗ್ರಾಹಕರಿಗೆ ಸೇವೆ ನೀಡಲಿವೆ. ಗುರುವಾರದಿಂದ ಇದು ನಿರಂತರವಾಗಿ ಮುಂದುವರಿಯಲಿದೆ. ಗ್ರಾಹಕರು ಆತಂಕವಿಲ್ಲದೆ ಬ್ಯಾಂಕ್‌ ಸೇವೆ ಪಡೆಯಬಹುದು ಎಂದು ಎಸ್‌ಎಲ್‌ಬಿಸಿ ಮೂಲಗಳು ಹೇಳಿವೆ.

ಎಟಿಎಂ ಅವಲಂಬನೆ ಹೆಚ್ಚಳ ಸಾಧ್ಯತೆ : ತಿಂಗಳ ಮೊದಲ ವಾರದಲ್ಲಿ ಸಾಮಾನ್ಯವಾಗಿ ಅಧಿಕಾರಿ, ಉದ್ಯೋಗಿ, ಕಾರ್ಮಿಕ, ಸಿಬ್ಬಂದಿ ವರ್ಗಕ್ಕೆ ವೇತನ ಪಾವತಿ ಆಗಲಿದೆ. ಹಾಗೆಯೇ ಪಿಂಚಣಿ, ವಿವಿಧ ಸಹಾಯಧನ ಬಿಡುಗಡೆಯಾಗುತ್ತದೆ. ಜತೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಘೋಷಿಸಿರುವ ಪರಿಹಾರವೂ ಅರ್ಹರಿಗೆ “ನೇರ ಹಣ ವರ್ಗಾವಣೆ’ (ಡಿಬಿಟಿ) ಮೂಲಕ ಖಾತೆಗೆ ಜಮೆಯಾಗುತ್ತದೆ. ಈ ವೇಳೆ ಎಟಿಎಂಗಳಲ್ಲಿ ಹಣ ಲಭ್ಯವಾಗದಿದ್ದರೆ ಸಮಸ್ಯೆ ಆಗಲಿದೆ ಎಂಬುದು ಸಾರ್ವಜನಿಕರ ಆತಂಕ. ಆದರೆ, ಹಣ ಡ್ರಾ ಮಾಡುವಲ್ಲಿ ಯಾವುದೇ ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕಿಂಗ್‌ ವಲಯದ ಪ್ರಮುಖರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next