ರಾಯಚೂರಿನ ಗೌಡನಭಾವಿ ಗ್ರಾಮದ 38 ವರ್ಷದ ಯುವಕ ಶಿವರಾಜ ನಾಯಕ ಬಿಬಿಎಂ ಪದವೀಧರ ಕೈತುಂಬಾ ಸಂಬಳದ ನೌಕರಿ ಬಿಟ್ಟು ಕೃಷಿಕನಾದ ವಿಷಯ ಓದಿದ್ದೀರಿ. ಅದೇ ರೀತಿ ಎಂಬಿಎ ಪದವೀಧರ ಬಕ್ಕೇಶ್ ಕೂಡಾ ನೌಕರಿಗೆ ರಾಜೀನಾಮೆ ನೀಡಿ ಕುಂಬಳ ಕಾಯಿ ತೋಟ ಮಾಡಿ ಕೃಷಿಕನಾಗಿದ್ದು, ಅಂಕೋಲಾ ತಾಲೂಕಿನ ಬೇಳಾ ಗ್ರಾಮದ ಹಾಲಿ ಹಳಿಯಾಳದ 32 ವರ್ಷದ ಐಐಪಿಎಂ ಪದವೀಧರ ವೀರೇಶ ಮಾದೇವ ನಾಯ್ಕ್ ಕೃಷಿಯಲ್ಲಿ ತೊಡಗಿರುವ ಯಶೋಗಾಥೆ ಈಗಾಗಲೇ ಜಗಜ್ಜಾಹೀರಾಗಿದೆ. ಇದೀಗ ಆ ಸಾಲಿಗೆ ಮತ್ತೊಬ್ಬ ಯುವಕನ ಯಶೋಗಾಥೆ ಇಲ್ಲಿದೆ…
27 ವರ್ಷದ ಶರತ್ ಬಾಬು ಐಐಎಂ ಪದವೀಧರ..ಕೈತುಂಬಾ ಸಂಬಳ, ಉನ್ನತ ಹುದ್ದೆ ಕೊಟ್ಟರು..ಅದ್ಯಾವುದು ಬೇಡ ಎಂದು ತಿರಸ್ಕರಿಸಿ. ತಾನೇ ಸ್ವಂತ ಉದ್ಯೋಗ ಮಾಡಿ ಯಶಸ್ಸು ಸಾಧಿಸಬೇಕೆಂದು ಪಣ ತೊಟ್ಟು ವಿಜಯ ಸಾಧಿಸಿದ ಸಾಹಸಗಾಥೆ ಇದು. ಶರತ್ ಬಾಬು ಬಡ ಕುಟುಂಬದಿಂದ ಬಂದ ಯುವಕ, ಹಣಬಲ, ಜನಬಲ ಇಲ್ಲದೆ ತನ್ನ ಸ್ವಂತ ಶ್ರಮದಿಂದಲೇ ಓದಿ, ಕೊನೆಗೂ ತನ್ನ ಕನಸನ್ನು ನನಸಾಗಿಸಿಕೊಂಡ ಕೀರ್ತಿ ಶರತ್ ಬಾಬುವಿನದ್ದು!
ಸ್ಲಂನಲ್ಲಿ ಬೆಳೆದ ಹುಡುಗ ಐಐಎಂ ಪಾಸಾಗಿದ್ದ!
ಚೆನ್ನೈನ ಮಡಿಪಾಕ್ಕಂ ಕೊಳಗೇರಿಯಲ್ಲಿ ಶರತ್ ಬಾಬು ಜನಿಸಿದ್ದ. ಇಬ್ಬರು ಅಕ್ಕಂದಿರು, ಇಬ್ಬರು ಸಹೋದರರು. ಇಡೀ ಕುಟುಂಬಕ್ಕೆ ಆಧಾರವಾಗಿದ್ದದ್ದು ತಾಯಿ ಮಾತ್ರ. ಆಕೆಗೆ ಸಿಗುತ್ತಿದ್ದ ದಿನಗೂಲಿಯಲ್ಲಿ ಐದು ಮಕ್ಕಳನ್ನು ಸಾಕೋದು, ವಿದ್ಯಾಭ್ಯಾಸ ಕೊಡಿಸುವುದು ಬಹಳ ಕಷ್ಟದ ಕೆಲಸವಾಗಿತ್ತು.
ಶರತ್ ತಾಯಿ ದೀಪಾ ರಮಣಿ ಕಲಿತಿದ್ದು ಎಸ್ಸೆಸ್ಸೆಲ್ಸಿ. ಅಂತೂ ತಮಿಳುನಾಡು ಸರ್ಕಾರಿ ಶಾಲೆಯಲ್ಲಿ (ಬಿಸಿಯೂಟ) ಅಡುಗೆ ಕೆಲಸ ಸಿಕ್ಕಿತ್ತು. ತಿಂಗಳ ಸಂಬಳ 30 ರೂಪಾಯಿ! ಅಮ್ಮ ಗಳಿಸುತ್ತಿದ್ದ ಹಣ ಆರು ಮಂದಿಗೆ ದಿನಕ್ಕೆ ಒಂದು ರೂಪಾಯಿ! ಈ ಹಣ ಜೀವನ ಸಾಗಿಸಲು ಸಾಧ್ಯವೇ? ತನ್ನ ಮಕ್ಕಳನ್ನು ಸಾಕಿ, ಬೆಳೆಸಲು ಆ ತಾಯಿ ಕಂಡುಕೊಂಡ ದಾರಿ..ಬೆಳಗ್ಗೆ ಇಡ್ಲಿ ಮಾರಾಟ ಮಾಡೋದು. ಬಳಿಕ ಶಾಲೆಗೆ ಹೋಗಿ ಮಕ್ಕಳಿಗೆ ಬಿಸಿಯೂಟ ತಯಾರಿಸುವುದು. ಸಂಜೆ ಭಾರತ ಸರ್ಕಾರದ ಯೋಜನೆಯಾದ ವಯಸ್ಕರ ಶಿಕ್ಷಣದ ತರಗತಿಗೆ ಹಾಜರಾಗುತ್ತಿದ್ದರಂತೆ. ಹೀಗೆ ಕಷ್ಟಪಟ್ಟು ದುಡಿದು ಮಕ್ಕಳನ್ನು ಶಾಲೆಗೆ ಸೇರಿಸಿದ್ದರು.
ಕೊಳಗೇರಿಯಲ್ಲಿ ಬೆಳೆಯುತ್ತಿದ್ದ ಶರತ್ ಶಾಲೆಗೆ ಹೋಗುವ ಮುನ್ನ ಇಡ್ಲಿ ಮಾರಾಟ ಮಾಡಿ ಬರುತ್ತಿದ್ದ. ಯಾಕೆಂದರೆ ಸ್ಲಂನಲ್ಲಿ ವಾಸಿಸುವ ಜನ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಇದರಿಂದಾಗಿ ಮನೆ, ಮನೆಗೆ ಇಡ್ಲಿ ಮಾರಾಟ ಮಾಡಿ ಜೀವನ ಸಾಗಿಸುವುದು ನಿತ್ಯದ ಕಾಯಕವಾಗಿತ್ತು. ತನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು ಕೈತುಂಬಾ ಸಂಬಳ ಬರುವ ಕೆಲಸ ಸಿಗಬೇಕು ಎಂಬುದು ತಾಯಿಯ ಮಹದಾಸೆಯಾಗಿತ್ತು. ಅದಕ್ಕೆ ಪ್ರತಿಫಲ ಎಂಬಂತೆ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿಯೇ ಶರತ್ ಟಾಪರ್ ಆಗಿಯೇ ಇದ್ದ. ತಾಯಿಗೆ ಬಿರ್ಲಾ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ ಆಗಲಿ, ಐಐಟಿ ಬಗ್ಗೆಯಾಗಲಿ ಏನೂ ಗೊತ್ತಿರಲಿಲ್ಲ. ಅಷ್ಟೇ ಅಲ್ಲ ಶರತ್ ಗೆಳೆಯರಿಗೂ ಐಐಟಿ, ಜೆಇಇ ಬಗ್ಗೆ ತಿಳಿದಿರಲಿಲ್ಲವಾಗಿತ್ತಂತೆ! ಡಾಕ್ಟರ್, ಇಂಜಿನಿಯರ್ ಆಗುವ ಕನಸು ಕಾಣಲು ಹೋಗದ ಶರತ್ ಗೆ ತಾನು ಕಷ್ಟಪಟ್ಟು ಓದಿ ಒಳ್ಳೆ ಕೆಲಸಕ್ಕೆ ಸೇರಬೇಕೆಂಬುದು ಮಾತ್ರ ಗುರಿಯಾಗಿತ್ತು. ಅದಕ್ಕೆ ಕಾರಣ ತಾಯಿ ತಮಗಾಗಿ ಕಷ್ಟಪಟ್ಟಿದ್ದಾಳೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಂಬಲ ಶರತ್ ಬಾಬುದ್ದಾಗಿತ್ತು!
ಎಸ್ಸೆಸ್ಸೆಲ್ಸಿಯಲ್ಲಿ ಶರತ್ ಟಾಪರ್ ಆಗಿದ್ದ. ಪ್ರಥಮ, ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುವಾಗಲೂ ಆರ್ಥಿಕವಾಗಿ ಬಹಳ ಕಷ್ಟವಾಗಿತ್ತಂತೆ. ಕಾಲೇಜಿನ ಫೀಸ್ ಗಾಗಿ ಶರತ್ ಬುಕ್ ಬೈಂಡಿಂಗ್ ಹಾಕಿ ಹಣ ಸಂಪಾದಿಸುತ್ತಿದ್ದ!
ರಾಜಸ್ಥಾನದ ಬಿರ್ಲಾ ಇನ್ಸ್ ಟ್ಯೂಟ್ ನಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದ ಶರತ್!
ಪಿಯುಸಿಯಲ್ಲಿಯೂ ಟಾಪರ್ ಆಗಿದ್ದ ಶರತ್ ಗೆಳೆಯರೆಲ್ಲ ರಾಜಸ್ಥಾನದ ಪಿಳಾನಿಯಲ್ಲಿರುವ ಬಿರ್ಲಾ ಇನ್ಸ್ ಟ್ಯೂಟ್ ಸೇರುವಂತೆ ಒತ್ತಾಯಿಸಿದ್ದರು. ಅದರಂತೆ BITS(ಬಿರ್ಲಾ ಇನ್ಸ್ ಟ್ಯೂಟ್ ಆಫ್ ಟೆಕ್ನಾಜಲಿ ಆ್ಯಂಡ್ ಸೈನ್ಸ್)ನಲ್ಲಿ ಶರತ್ ಗೆ ಪ್ರವೇಶ ಸಿಕ್ಕಿತ್ತು. ಅದಕ್ಕೆ ಬೇಕಾಗಿದ್ದ ಫೀಸ್ 28ಸಾವಿರ. ಈ ಸಂದರ್ಭದಲ್ಲಿ ಯಾರೊಬ್ಬರೂ ಸಹಾಯ ನೀಡಿರಲಿಲ್ಲವಂತೆ. ತಾಯಿ ಮತ್ತು ಅಕ್ಕಂದಿರು ಸೇರಿ 42 ಸಾವಿರ ರೂಪಾಯಿ ಕೊಟ್ಟಿದ್ದರಂತೆ. ಒಬ್ಬಳು ಅಕ್ಕ ತನ್ನ ಚಿನ್ನದ ಒಡವೆ ಅಡವಿಟ್ಟು ಹಣ ಕೊಟ್ಟಿದ್ದರು. ಮಗನ ಸ್ಕಾಲರ್ ಶಿಪ್ ಗಾಗಿ ತಾಯಿಯೇ ಫಾರಂ ಅನ್ನು ಕಳುಹಿಸಿಕೊಟ್ಟಿದ್ದರಂತೆ. ಸ್ಕಾಲರ್ ಶಿಪ್ ನಿಂದ ಕೇವಲ ಟ್ಯೂಷನ್ ಫೀಗೆ ಮಾತ್ರ ಸಾಲುತ್ತಿತ್ತು. ಹಾಸ್ಟೆಲ್ ಮತ್ತು ಊಟಕ್ಕೆ ಏನು ಮಾಡುವುದು ಎಂಬ ಚಿಂತೆ ಶರತ್ ನದ್ದಾಗಿತ್ತು. ಮತ್ತೆ ಹೇಗೋ ಸಾಲ ಮಾಡಿ ಶಿಕ್ಷಣ ಪೂರೈಸಿದ್ದ.
ಪ್ರಭಾವ ಬೀರಿದ್ದ ನಾರಾಯಣಮೂರ್ತಿ, ರಿಯಲನ್ಸ್!
ಸಿಎಟಿಗೆ ಓದಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಇರುವ ಜನಸಂಖ್ಯೆ, ಅದರಲ್ಲಿ ಕೆಲವರಿಗೆ ದಿನಕ್ಕೆ ಎರಡು ಹೊತ್ತು ಊಟಕ್ಕೂ ಕಷ್ಟ ಎಂಬ ಅಂಕಿಅಂಶ ಸಿಕ್ಕಿತ್ತು. ಅಲ್ಲದೇ ಹಸಿವು ಅಂದರೆ ಏನು ಎಂಬುದು ತನಗೆ ಚೆನ್ನಾಗಿ ಗೊತ್ತು. ಇಂತಹವರಿಗೆ ಸಹಾಯ ಮಾಡಲು ಏನು ಮಾಡಬೇಕು ಎಂಬ ಸಣ್ಣ ಜಿಜ್ಞಾಸೆಯ ಕಿಡಿ ಹೊತ್ತಿಕೊಂಡಿತ್ತು. ಏತನ್ಮಧ್ಯೆ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಕಂಪನಿಯಲ್ಲಿ 15 ಸಾವಿರ ಮಂದಿ, ರಿಲಯನ್ಸ್ ಅಂಬಾನಿ ಕಂಪನಿಯಲ್ಲಿ 25 ಸಾವಿರ ಜನ ಉದ್ಯೋಗಿಗಳಿದ್ದಾರೆ ಎಂಬ ಬಗ್ಗೆ ಓದಿದಾಗ… ಇವರಿಂದಾಗಿ ಸರಿಸುಮಾರು ಒಂದು ಲಕ್ಷ ಮಂದಿ ಪರೋಕ್ಷವಾಗಿ ಬದುಕುತ್ತಿದ್ದಾರೆ! ಹೀಗೆ ಶರತ್ ಕೂಡಾ ನಾನು ಯಾಕೆ ಒಬ್ಬ ಉದ್ಯಮಿಯಾಗಬಾರದು ಎಂದು ಆಲೋಚಿಸತೊಡಗಿದ್ದ!
ಆದರೆ ಶರತ್ ತಾಯಿ ಮಾತ್ರ ತನ್ನ ಮಗ ಇಂಜಿನಿಯರ್ ಆಗುವ ಕನಸು ನನಸಾಗುವುದನ್ನೇ ಕಾಯುತ್ತಿದ್ದರು. ಶರತ್ ಮಾತ್ರ ಉದ್ಯಮಿಯಾಗುವ ಆಸೆ ದಿನದಿಂದ ದಿನಕ್ಕೆ ಬೆಳೆಯತೊಡಗಿತ್ತು. ಏತನ್ಮಧ್ಯೆ ಪೋಲಾರಿಸ್ ಇಂಡಸ್ಟ್ರಿಯಲ್ಲಿ ಶರತ್ ಗೆ ಕೆಲಸ ಸಿಗುತ್ತದೆ. 30 ತಿಂಗಳ ಕಾಲ ಕೆಲಸ ನಿರ್ವಹಿಸಿ, ತನ್ನೆಲ್ಲಾ ಸಾಲವನ್ನು ತೀರಿಸಿಬಿಟ್ಟಿದ್ದ. ಆದರೆ ತಾಯಿಗೆ ಒಳ್ಳೆ ಮನೆ ಕಟ್ಟಿಸಬೇಕೆಂಬ ಕನಸು ಮಾತ್ರ ಹಾಗೆ ಉಳಿದು ಬಿಟ್ಟಿತ್ತು! ಇದರ ಮಧ್ಯೆ ಸಿಎಟಿ ಪರೀಕ್ಷೆ ಬರೆದಿದ್ದ ಶರತ್ ಮೊದಲ ಪ್ರಯತ್ನದಲ್ಲಿ ಫೇಲ್ ಆಗಿದ್ದ. ಕೊನೆಗೆ ಮೂರನೇ ಬಾರಿ ಸಿಎಟಿ ಪಾಸ್ ಆದ ಶರತ್ ಅಹ್ಮದಾಬಾದ್ ನಲ್ಲಿ ಐಐಎಂಗೆ ಪ್ರವೇಶ ಪಡೆದುಬಿಟ್ಟಿದ್ದ.
ಅಹ್ಮದಾಬಾದ್ ಐಐಎಂ ಶರತ್ ಬದುಕಿಗೊಂದು ಟರ್ನಿಂಗ್ ಪಾಯಿಂಟ್ ಕೊಟ್ಟಿತ್ತು. ಅಲ್ಲಿನ ಜವಾಬ್ದಾರಿ, ಸಹಪಾಠಿಗಳ ಪ್ರೋತ್ಸಾಹದಿಂದ 2ನೇ ವರ್ಷದ ಐಐಎಂ ನಲ್ಲಿ ಮೆಸ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದ. ಹೀಗೆ ಶಿಕ್ಷಣ ಮುಗಿಯುವ ಹೊತ್ತಿಗೆ ಕೈತುಂಬಾ ಸಂಬಳದ ಹಲವಾರು ಉದ್ಯೋಗದ ಆಫರ್ ಗಳು ಬರತೊಡಗಿದ್ದವು. ವರ್ಷಕ್ಕೆ 8 ಲಕ್ಷ ರೂಪಾಯಿ ಆಫರ್ ಬಂದಾಗ ಕೆಲಸ ಬೇಕೋ, ಬೇಡವೋ ಎಂದು ಹೇಳಲು ಗೊಂದಲ ಉಂಟಾಗಿತ್ತಂತೆ ಶರತ್ ಗೆ.
ತಾಯಿ ದೀಪಾ ರಮಣಿ ಗಾಡ್ ಫಾದರ್…ಶರತ್ ಯಶಸ್ವಿ ಉದ್ಯಮಿಯಾಗಿಬಿಟ್ಟಿದ್ದ!
ಶರತ್ ಮೇಲೆ ತಾಯಿಯ ಪ್ರಭಾವ ಗಾಢವಾಗಿ ಬೀರಿತ್ತು. ಅದೇ ರೀತಿ ಧೀರೂಭಾಯಿ ಅಂಬಾನಿ, ನಾರಾಯಣ ಮೂರ್ತಿಯಂತಹ ಉದ್ಯಮಿಗಳ ಯಶೋಗಾಥೆ ಇನ್ನಷ್ಟು ಹುರುಪು ತುಂಬಿಸಿತ್ತು. ಐಐಎಂನಲ್ಲಿ 30-40 ವಿದ್ಯಾರ್ಥಿಗಳು ವಾಣಿಜ್ಯೋದ್ಯಮಿಯಾಗುವ ಕನಸು ಹೊತ್ತಿದ್ದರು. ತಮ್ಮ ಉದ್ಯೋಗದ ವಿಚಾರಧಾರೆ ಬಗ್ಗೆ ಚರ್ಚಿಸಿದ ಶರತ್ ತಾನೂ ಉದ್ಯಮಿಯಾಗುವ ದೃಢ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದ.
ಶರತ್ ಅಹ್ಮದಾಬಾದ್ ನಲ್ಲಿ ಒಂದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಫುಡ್ ಕಿಂಗ್ ಕೆಟರಿಂಗ್ ಸರ್ವಿಸ್ ಪ್ರೈ. ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದ. ಒಂದು ಚಿಕ್ಕ ಕಚೇರಿ, ಮೂವರು ಸಿಬ್ಬಂದಿಗಳಿದ್ದರು. ಅಹ್ಮದಾಬಾದ್ ನ ಸಾಫ್ಟ್ ವೇರ್ ಕಂಪನಿಯೊಂದರಿಂದ ಮೊದಲ ಬಾರಿ ಆರ್ಡರ್ ಪಡೆದಿದ್ದರು. ಅಲ್ಲಿಗೆ ಟೀ, ಕಾಫಿ, ಸ್ನ್ಯಾಕ್ಸ್ ಅನ್ನು ಸರಬರಾಜು ಮಾಡುತ್ತಿದ್ದರು. ಬಳಿಕ ಅಹ್ಮದಾಬಾದ್ ಐಐಎಂನಿಂದ ಆರ್ಡರ್ ಬಂದಾಗ ಮತ್ತೆ 11ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಕಿಚನ್ ಆರಂಭಿಸಿದ್ದರು. ತದನಂತರ ಚೆನ್ನೈ ಸೇರಿದಂತೆ ದೇಶದ ಆರು ಸ್ಥಳಗಳಲ್ಲಿ ಶಾಖೆ ತೆರೆದಿದ್ದರು. ಈಗ 39ರ ಹರೆಯದ ಶರತ್ ಜೊತೆ 15 ಸಾವಿರ ಮಂದಿ ದುಡಿಯುತ್ತಿದ್ದಾರೆ. ವಾರ್ಷಿಕ ಆದಾಯ 1.2 ಮಿಲಿಯನ್ ಅಮೆರಿಕನ್ ಡಾಲರ್.
*ನಾಗೇಂದ್ರ ತ್ರಾಸಿ