ಒನ್ ಪ್ಲಸ್ ಬ್ರಾಂಡ್ ಸಂಪೂರ್ಣ ಲೋಹದ ದೇಹ ಹೊಂದಿರುವ ಮೊದಲ 5ಜಿ ಸ್ಮಾರ್ಟ್ ಫೋನ್ ಅನ್ನು ಇತ್ತೀಚಿಗಷ್ಟೇ ಹೊರತಂದಿದೆ. ಅದುವೇ ಒನ್ ಪ್ಲಸ್ ನಾರ್ಡ್ 4. ಸಾಮಾನ್ಯವಾಗಿ ಬಹುತೇಕ ಸ್ಮಾರ್ಟ್ ಫೋನ್ ಗಳು ಪಾಲಿಕಾರ್ಬೊನೆಟ್ (ಪ್ಲಾಸ್ಟಿಕ್) ಅಥವಾ ಗಾಜು ಮಿಶ್ರಿತ ದೇಹ ಹೊಂದಿರುತ್ತವೆ. ಕೆಲವೊಂದರಲ್ಲಿ ಫ್ರೇಂ ಅನ್ನು ಮಾತ್ರ ಲೋಹದಿಂದ ಮಾಡಲಾಗಿರುತ್ತದೆ. ಆದರೆ ನಾರ್ಡ್ 4 ನ ವೈಶಿಷ್ಟ್ಟ್ಯವೆಂದರೆ ಅದು ಇಡೀ ಲೋಹದ ಅಚ್ಚು ಹೊಂದಿದೆ. ಅದರ ಫ್ರೇಮ್ ಪ್ರತ್ಯೇಕವಾಗಿಲ್ಲ. 2017ರಲ್ಲಿ ಒನ್ ಪ್ಲಸ್ 5 ಈ ರೀತಿ ಸಂಪೂರ್ಣ ಲೋಹದ ಫೋನ್ ಅಗಿತ್ತು.
ಈ ಫೋನಿನ ದರ ರೂ. 29,999ರಿಂದ ಆರಂಭವಾಗುತ್ತದೆ. ಇದು 8/128GB, 8/256GB ಮತ್ತು 12/256GB ಮೂರು ಮಾದರಿಗಳಲ್ಲಿ ಲಭ್ಯವಿದೆ. ಒಬ್ಸಿಡಿಯನ್ ಮಿಡ್ನೈಟ್, ಮರ್ಕ್ಯುರಿಯಲ್ ಸಿಲ್ವರ್ ಮತ್ತು ಓಯಸಿಸ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ.
ವಿನ್ಯಾಸ: ಈ ಫೋನಿನ ವಿನ್ಯಾಸ ನೋಡಿದಾಗ ಸುಂದರ ಫೋನ್ ಗಳಲ್ಲಿ ಒಂದು ಎಂದು ಹೇಳಬಹುದು. ಲೋಹದ ದೇಹ ಅದಕ್ಕೆ ಕಾರಣ. ಇದರಿಂದಾಗಿ ಫೋನ್ ಬಹಳ ಬಲಿಷ್ಠವಾಗಿದೆ. 199 ಗ್ರಾಂ ತೂಕವಿದೆ. ಇಷ್ಟಾದರೂ ಫೋನ್ ಭಾರ ಎನಿಸದೇ ತೆಳುವಾಗಿ ಹಗುರವಾಗಿದೆ. ಐಪಿ65 ರೇಟಿಂಗ್ ಧೂಳು ಮತ್ತು ನೀರು ನಿರೋಧಕವಾಗಿದೆ.
ಫೋನಿನ ಹಿಂಬದಿ ಎರಡು ಬಣ್ಣದ ವಿನ್ಯಾಸ ನೀಡಲಾಗಿದೆ. ಹಿಂಬದಿ ಮೇಲ್ಭಾಗದಲ್ಲಿ ಎರಡು ಕ್ಯಾಮರಾಗಳನ್ನು ಅಡ್ಡವಾಗಿ ಸಂಯೋಜಿಸಲಾಗಿದ್ದು, ಈಗ ಬರುತ್ತಿರುವ ಫೋನ್ ಗಳಿಗಿಂತ ವಿಭಿನ್ನವಾಗಿದೆ. ನಾರ್ಡ್ ಸರಣಿಯ ಫೋನ್ ಗಳಲ್ಲಿ ಟಿವಿ, ಎಸಿ ಇತ್ಯಾದಿಗಳ ರಿಮೋಟ್ ಕಂಟ್ರೋಲರ್ ಆಗಿ ಬಳಸುವ ಐಆರ್ ಬ್ಲಾಸ್ಟರ್ ನೀಡಿರಲಿಲ್ಲ. ಇದರಲ್ಲಿ ನೀಡಿರುವುದು ವಿಶೇಷ. ಅಲ್ಲದೇ ಇನ್ನೊಂದು ಮುಖ್ಯ ಅಂಶವೆಂದರೆ ಒನ್ ಪ್ಲಸ್ ನ ಅತ್ಯುನ್ನತ ಫೋನ್ ಗಳ ವಿಶೇಷವಾದ ಅಲರ್ಟ್ ಸ್ಲೈಡರ್ ಬಟನ್ ಅನ್ನು ನಾರ್ಡ್ 4 ರಲ್ಲಿ ನೀಡಲಾಗಿದೆ. ಈ ಬಟನ್ ಅನ್ನು ಸರಿಸುವ ಮೂಲಕ ಫೋನನ್ನು ರಿಂಗ್, ಸೈಲೆಂಟ್, ವೈಬ್ರೇಟ್ ಮೋಡ್ ಗೆ ನಿಲ್ಲಿಸಬಹುದು.
ಪರದೆ: ಇದು 6.74 ಇಂಚಿನ ಅಮೋಲೆಡ್ ಡಿಸ್ ಪ್ಲೇ ಹೊಂದಿದೆ. 2,150 ನಿಟ್ಸ್ ಪ್ರಕಾಶಮಾನತೆ ಇದ್ದು, 120 ಹರ್ಟ್ಜ್ ರಿಫ್ರೆಶ್ ರೇಟ್ ಉಳ್ಳದ್ದಾಗಿದೆ. ಒಳಾಂಗಣ ಹಾಗೂ ಹೊರಾಂಗಣದಲ್ಲೂ ಇದರ ಪ್ರಕಾಶಮಾನತೆ ಚೆನ್ನಾಗಿದೆ. ಅಮೋಲೆಡ್ ಪರದೆಯ ಗುಣಮಟ್ಟ ಉತ್ತಮವಾಗಿದೆ. ಬಣ್ಣಗಳ ಪುನರುತ್ಪಾದನೆಯಲ್ಲೂ ಸಹಜತೆ ಹೊಂದಿದೆ. ಯೂಟ್ಯೂಬ್, ನೆಟ್ ಫ್ಲಿಕ್ಸ್ ಪ್ಲೇ ಮಾಡಿದಾಗ ವಿಡಿಯೋ ಗುಣಮಟ್ಟ ಚೆನ್ನಾಗಿದೆ.
ಪ್ರೊಸೆಸರ್, ಸಾಫ್ಟ್ ವೇರ್: ಇದರಲ್ಲಿ ಸ್ನ್ಯಾಪ್ ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್ ನೀಡಲಾಗಿದ್ದು, ಇದು ಎಐ ಫೀಚರ್ ಹೊಂದಿದೆ. ಇದು ಮಧ್ಯಮ ವರ್ಗದಲ್ಲಿ ಒಂದೊಳ್ಳೆಯ ಪ್ರೊಸೆಸರ್ ಆಗಿದ್ದು, ಫೋನ್ ಅಡೆತಡೆಯಾಗದಂತೆ ಸಲಲಿತವಾಗಿ ಕಾರ್ಯಾಚರಿಸುತ್ತದೆ. 30 ಸಾವಿರ ದರ ಪಟ್ಟಿಯಲ್ಲಿ ಸ್ನ್ಯಾಪ್ ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್ ನೀಡಿರುವುದು ನೀಡುವ ಹಣಕ್ಕೆ ಮೌಲ್ಯ ಒದಗಿಸುತ್ತದೆ. ಈ ದರಕ್ಕೆ ಕೆಲವು ಫೋನ್ ಗಳಲ್ಲಿ ಸ್ನ್ಯಾಪ್ ಡ್ರಾಗನ್ 695 ಪ್ರೊಸೆಸರ್ ಹಾಕಲಾಗಿರುತ್ತದೆ.
ಕ್ಯಾಮರಾ: ಹಿಂಬದಿಯ ಕ್ಯಾಮರಾ, 50 ಮೆಗಾ ಪಿಕ್ಸೆಲ್ ಮೇನ್ ಲೆನ್ಸ್, 8 ಮೆ.ಪಿ. ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ. ಮುಂಬದಿಯ ಕ್ಯಾಮರಾ 16 ಮೆ.ಪಿ. ಆಗಿದೆ. ಹಿಂಬದಿಯ ಕ್ಯಾಮರಾ ಸೋನಿ ಎಲ್ವೈಟಿ 600 ಸೆನ್ಸರ್ ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ನಿಂದಾಗಿ ಕ್ಯಾಮರಾ ಅಲುಗಾಡಿದರೂ ವಿಡಿಯೋದಲ್ಲಿ ಅದು ತೋರಿಬರುವುದಿಲ್ಲ.ಇದರಲ್ಲಿ ಫೋಟೋಗಳು ತುಂಬ ಸ್ಪಷ್ಟವಾಗಿ, ಡಿಟೇಲ್ ಆಗಿ ಮೂಡಿ ಬರುತ್ತವೆ. ಫೋಟೋಗಳನ್ನು ಜೂಮ್ ಮಾಡಿ ನೋಡಿದಾಗಲೂ ಫೋಟೋ ಸ್ಟ್ರೆಚ್ ಆಗುವುದಿಲ್ಲ. ಸೋನಿ ಎಲ್ವೈಟಿ 600 ಸೆನ್ಸರ್ 2ಎಕ್ಸ್ ಸೆನ್ಸರ್ ಜೂಮ್ ಹೊಂದಿದೆ. ಈ ಫೋಕಲ್ ಲೆಂಗ್ತ್ ನಲ್ಲೂ ಫೋಟೋಗಳು ಸ್ಪಷ್ಟವಾಗಿ ಮೂಡಿ ಬರುತ್ತವೆ. ಮಂದ ಬೆಳಕಿನಲ್ಲೂ ಫೋಟೋಗಳು ಚೆನ್ನಾಗಿ ಬರುತ್ತವೆ. ಮೊಬೈಲ್ ಕ್ಯಾಮರಾಗಳಲ್ಲಿ ಇದು ಮುಖ್ಯ. ಸೆಲ್ಫಿ ಕ್ಯಾಮರಾ ಹೊರಾಂಗಣ ಹಾಗೂ ಹೆಚ್ಚು ಬೆಳಕಿನಲ್ಲಿ ಉತ್ತಮವಾಗಿದೆ. ಆದರೆ ಮಂದ ಬೆಳಕಿನಲ್ಲಿ ಸಾಧಾರಣವಾಗಿರುತ್ತದೆ.
ಬ್ಯಾಟರಿ: ಇದರಲ್ಲಿ 5,500 ಎಂಎಎಚ್ ಬ್ಯಾಟರಿ ಇದೆ. ಇದಕ್ಕೆ 100 ವ್ಯಾಟಿನ ಚಾರ್ಜರ್ ನೀಡಲಾಗಿದೆ. ಸಾಧಾರಣ ಬಳಕೆಗೆ ಒಂದೂವರೆ ದಿನ ಬ್ಯಾಟರಿ ಬಾಳಿಕೆ ಬರುತ್ತದೆ. 100 ವ್ಯಾಟ್ಸ್ ಸೂಪರ್ ವೂಕ್ ಚಾರ್ಜಿಂಗ್ ನಿಂದಾಗಿ ಕೇವಲ 30 ನಿಮಿಷದಲ್ಲಿ ಶೂನ್ಯದಿಂದ ಶೇ. 100 ಚಾರ್ಜ್ ಆಗುತ್ತದೆ. ಇದಕ್ಕೆ ನಾಲ್ಕು ವರ್ಷಗಳ Oಖ ಅಪ್ ಡೇಟ್ ಮತ್ತು 6 ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ಸೌಲಭ್ಯ ನೀಡಲಾಗಿದೆ. ಉತ್ತಮ ಕ್ಯಾಮರಾ, ಪ್ರೊಸೆಸರ್, ಅತಿ ವೇಗದ ಚಾರ್ಜಿಂಗ್ ಸೌಲಭ್ಯ, ಮೆಟಲ್ ಬಾಡಿ ಇದೆಲ್ಲ ಸೇರಿ, 30 ಸಾವಿರ ರೂ ದರ ಪಟ್ಟಿಯಲ್ಲಿ ಇದೊಂದು ಉತ್ತಮ ಫೋನ್ ಎನ್ನಲಡ್ಡಿಯಿಲ್ಲ.
*ಕೆ.ಎಸ್. ಬನಶಂಕರ ಆರಾಧ್ಯ