Advertisement

ವಿಶಾಖಪಟ್ಟಣದಲ್ಲಿ ಟೆಸ್ಟ್‌ ಕಾವು

10:03 PM Oct 01, 2019 | Team Udayavani |

ಇಂದಿನಿಂದ ವಿಶಾಖಪಟ್ಟಣದಲ್ಲಿ ಮೊದಲ ಟೆಸ್ಟ್‌ ಪಂದ್ಯ
ಒಂದು ದಿನ ಮೊದಲೇ ಆಡುವ ಬಳಗ ಪ್ರಕಟಿಸಿದ ಕೊಹ್ಲಿ

Advertisement

ವಿಶಾಖಪಟ್ಟಣ: ವಿಶಾಖ ಪಟ್ಟಣದಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳ ಟೆಸ್ಟ್‌ ಸರಣಿಯ ಕಾವು ಏರ ತೊಡಗಿದೆ. ಆದರೆ ವಾತಾವರಣ ಮಾತ್ರ ಕೂಲ್‌ ಕೂಲ್‌ ಆಗಿದೆ. ಕಾರಣ, ಮಳೆ! ವರುಣ ಕೃಪೆ ತೋರಿದರೆ ಈ ಪಂದ್ಯ ನೈಜ ರೋಮಾಂಚನ ಮೂಡಿಸುವುದರಲ್ಲಿ ಅನುಮಾನವಿಲ್ಲ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿ ಯಲ್ಲಿ ಅಗ್ರಸ್ಥಾನ ಅಲಂಕರಿಸಿ ರುವ ಟೀಮ್‌ ಇಂಡಿಯಾ ನೆಚ್ಚಿನ ತಂಡವಾಗಿಯೇ ಕಣಕ್ಕಿಳಿಯಲಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾಕ್ಕೆ ಇದು ವಿಶ್ವ ಚಾಂಪಿಯನ್‌ಶಿಪ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯವಾಗಿದೆ.

ಆಡುವ ಬಳಗ ಪ್ರಕಟ
ಭಾರತ ಈ ಪಂದ್ಯಕ್ಕಾಗಿ ತನ್ನ ಆಡುವ ಬಳಗವನ್ನು ಒಂದು ದಿನ ಮೊದಲೇ ಅಂತಿಮಗೊಳಿಸಿದೆ. ಅದರಂತೆ ರೋಹಿತ್‌ ಶರ್ಮ ಮೊದಲ ಸಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ರಿಷಭ್‌ ಪಂತ್‌ ಬದಲು ವೃದ್ಧಿಮಾನ್‌ ಸಾಹಾ ಕೀಪಿಂಗ್‌ ನಡೆಸಲಿದ್ದಾರೆ. ಗಾಯಾಳಾಗಿದ್ದ ಅವರು 22 ತಿಂಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫ‌ಲರಾದ ರಿಷಭ್‌ ಪಂತ್‌ ಅವರನ್ನು ಹೊರಗಿರಿಸಲು ನಿರ್ಧರಿಸಲಾಗಿದೆ.

ಆಡುವ ಬಳಗದಲ್ಲಿ ಗೋಚರಿಸಿದ ಮತ್ತೂಂದು ಪ್ರಮುಖ ಬದಲಾವಣೆಯೆಂದರೆ ಆರ್‌. ಅಶ್ವಿ‌ನ್‌ ಅವರ ಪುನರಾಗಮನ. ಕಳೆದ ವರ್ಷಾಂತ್ಯ ಆಸ್ಟ್ರೇಲಿಯ ಪ್ರವಾಸದ ಅಡಿಲೇಡ್‌ ಟೆಸ್ಟ್‌ ವೇಳೆ ಗಾಯಾಳಾಗಿ ಹೊರಗುಳಿದ ಅಶ್ವಿ‌ನ್‌ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ವಿಂಡೀಸ್‌ಗೆ ತೆರಳಿದ ಭಾರತ ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ. ಹರಿಣಗಳನ್ನು ಸ್ಪಿನ್‌ ಖೆಡ್ಡಕ್ಕೆ ಬೀಳಿಸುವ ಯೋಜನೆ ಭಾರತದ್ದು ಎಂಬುದು ಸ್ಪಷ್ಟಗೊಳ್ಳುತ್ತದೆ. ಅಶ್ವಿ‌ನ್‌ ಬೆಂಬಲಕ್ಕೆ ರವೀಂದ್ರ ಜಡೇಜ ಇದ್ದಾರೆ. ವಿಹಾರಿ ತೃತೀಯ ಸ್ಪಿನ್ನರ್‌ ಜವಾಬ್ದಾರಿ ವಹಿಸಲಿದ್ದಾರೆ.

Advertisement

ವೇಗದ ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ ಗೈರು ಖಂಡಿತವಾಗಿಯೂ ಕಾಡಲಿದೆ. ಇಶಾಂತ್‌ ಮತ್ತು ಶಮಿ ಇಲ್ಲಿನ ಪ್ರಧಾನ ಬೌಲರ್‌ಗಳಾಗಿದ್ದಾರೆ.

ರೋಹಿತ್‌ ಮೇಲೆ ಎಲ್ಲರ ಕಣ್ಣು
ಇದೇ ಮೊದಲ ಸಲ ಟೆಸ್ಟ್‌ ಇನ್ನಿಂಗ್ಸ್‌ ಆರಂಭಿಸಲಿರುವ ರೋಹಿತ್‌ ಶರ್ಮ ಈ ಪಂದ್ಯದ ಕೇಂದ್ರಬಿಂದು. ಈವರೆಗಿನ 27 ಟೆಸ್ಟ್‌ ಗಳಲ್ಲಿ ರೋಹಿತ್‌ ಮಿಡ್ಲ್ ಆರ್ಡರ್‌ ಬ್ಯಾಟ್ಸ್‌ ಮನ್‌ ಆಗಿಯೇ ಆಡಲಿಳಿದಿದ್ದರು. ಗಳಿಸಿದ ರನ್‌ 1,585. ಸರಾಸರಿ 39.62. ಮೊನ್ನೆಯ ಅಭ್ಯಾಸ ಪಂದ್ಯದಲ್ಲಿ ಸೊನ್ನೆ ಸುತ್ತಿ ನಡೆದ ರೋಹಿತ್‌, ಹೊಸ ಜವಾಬ್ದಾರಿಯಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾದಾರು ಎಂಬುದೊಂದು ಕುತೂಹಲ.

ವಿಂಡೀಸ್‌ ಪ್ರವಾಸದಲ್ಲಿ ವೈಫ‌ಲ್ಯ ಅನುಭವಿಸಿದ ಪೂಜಾರ ತವರಿನಲ್ಲಿ ನೈಜ ಫಾರ್ಮ್ಗೆ ಮರಳಬೇಕಿದೆ. ಕೊಹ್ಲಿ ಆಟದ ಬಗ್ಗೆ ಯಾವುದೇ ಅನುಮಾನವಿಲ್ಲ. ರಹಾನೆ-ವಿಹಾರಿ ಮಧ್ಯಮ ಸರದಿಗೆ ಹೊಸ ಶಕ್ತಿ ತುಂಬಿದ್ದಾರೆ.

ಹರಿಣಗಳಿಗೆ ಕಬ್ಬಿಣದ ಕಡಲೆ?
ಸಾಮಾನ್ಯವಾಗಿ ಸ್ಪಿನ್‌ ಟ್ರ್ಯಾಕ್‌ಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸುವ ಹರಿಣಗಳ ಪಡೆಗೆ ಈ ಸರಣಿ ಕೂಡ ಕಬ್ಬಿಣದ ಕಡಲೆಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು. ಟಾಪ್‌ ಕ್ಲಾಸ್‌ ಬ್ಯಾಟ್ಸ್‌ ಮನ್‌ಗಳಾದ ಹಾಶಿಮ್‌ ಆಮ್ಲ, ಎಬಿ ಡಿ ವಿಲಿಯರ್, ಘಾತಕ ವೇಗಿ ಡೇಲ್‌ ಸ್ಟೇನ್‌ ಗೈರು ದಕ್ಷಿಣ ಆಫ್ರಿಕಾ ಪಾಲಿಗೆ ದೊಡ್ಡ ಹೊಡೆತವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ. ತಂಡದಲ್ಲಿ ಅನುಭವಿಗಳ ಹಾಗೂ ನಿಂತು ಆಡುವವರ ಕೊರತೆ ಕಾಡುತ್ತಿದೆ.

ದಕ್ಷಿಣ ಆಫ್ರಿಕಾ 2015-16ರ ಬಳಿಕ ಭಾರತದಲ್ಲಿ ಆಡಲಿರುವ ಟೆಸ್ಟ್‌ ಸರಣಿ ಇದಾಗಿದೆ. ಅಂದು ಹಾಶಿಮ್‌ ಆಮ್ಲ ನೇತೃತ್ವದ ಆಫ್ರಿಕಾ ತಂಡ 4 ಪಂದ್ಯಗಳ ಟೆಸ್ಟ್‌ ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡು ತೀವ್ರ ಮುಖಭಂಗಕ್ಕೆ ತುತ್ತಾಗಿತ್ತು. ಅಂದಿನ ಐವರು ಸದಸ್ಯರು ಈಗಿನ ತಂಡದಲ್ಲೂ ಇದ್ದಾರೆ.
ಆಫ್ರಿಕಾ ತಂಡದ ಭರವಸೆಯ ಬ್ಯಾಟ್ಸ್‌ಮನ್‌ಗಳಾಗಿ ಕಾಣು ವವರು ಮಾರ್ಕ್‌ರಮ್‌, ಡಿ ಕಾಕ್‌, ಬವುಮ ಮಾತ್ರ.

ಡು ಪ್ಲೆಸಿಸ್‌ ನಾಯಕನ ಆಟ ಆಡುವುದು ಅತ್ಯಗತ್ಯ.
ಬೌಲಿಂಗ್‌ನತ್ತ ಬಂದರೆ ವೇಗದ ವಿಭಾಗ ಹೆಚ್ಚು ಬಲಿಷ್ಠ. ಇಲ್ಲಿ ರಬಾಡ, ಫಿಲಾಂಡರ್‌, ಎನ್‌ಗಿಡಿ ಅಪಾಯಕಾರಿಯಾಗಿ ಗೋಚರಿಸಬಲ್ಲರು. ಆದರೆ ಭಾರತದ ಟ್ರ್ಯಾಕ್‌ಗಳು ಭಾರೀ ತಿರುವು ಪಡೆದರೆ ಹರಿಣಗಳ ಆಟ ನಡೆಯುವುದು ಕಷ್ಟ!

ವಿಶಾಖಪಟ್ಟಣದ ಎರಡನೇ ಟೆಸ್ಟ್‌…
ಇದು ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಕೇವಲ 2ನೇ ಟೆಸ್ಟ್‌ ಪಂದ್ಯ. ಬರೋಬ್ಬರಿ 3 ವರ್ಷಗಳ ಬಳಿಕ ಇಲ್ಲಿ ಟೆಸ್ಟ್‌ ಪಂದ್ಯವನ್ನು ಆಡಲಾಗುತ್ತಿದೆ. 2016ರ ನವೆಂಬರ್‌ನಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಇಲ್ಲಿ ಮೊದಲ ಟೆಸ್ಟ್‌ ಆಡಲಾಗಿತ್ತು. ವಿರಾಟ್‌ ಕೊಹ್ಲಿ ಪಡೆ ಇದನ್ನು 246 ರನ್ನುಗಳ ಬೃಹತ್‌ ಅಂತರದಲ್ಲಿ ಜಯಿಸಿತ್ತು.

ಪೂಜಾರ (119) ಮತ್ತು ಕೊಹ್ಲಿ (167) ಅವರ ಶತಕ ಸಾಹಸದಿಂದ ಭಾರತ 455 ರನ್‌ ಪೇರಿಸಿದರೆ, ಅಲಸ್ಟೇರ್‌ ಕುಕ್‌ ಬಳಗ 255ಕ್ಕೆ ಆಲೌಟ್‌ ಆಗಿತ್ತು. ಆರ್‌. ಅಶ್ವಿ‌ನ್‌ 67ಕ್ಕೆ 5 ವಿಕೆಟ್‌ ಉಡಾಯಿಸಿದ್ದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 204ಕ್ಕೆ ಕುಸಿಯಿತು. ಕೊಹ್ಲಿ 81 ರನ್‌ ಮಾಡಿ ತಂಡಕ್ಕೆ ರಕ್ಷಣೆ ಒದಗಿಸಿದರು. ಬ್ರಾಡ್‌ ಮತ್ತು ರಶೀದ್‌ ತಲಾ 4 ವಿಕೆಟ್‌ ಕಿತ್ತರು.
405 ರನ್‌ ಗುರಿ ಪಡೆದ ಇಂಗ್ಲೆಂಡ್‌ ಮತ್ತೆ ಚಡಪಡಿಸುತ್ತ ಸಾಗಿ 158ಕ್ಕೆ ಸರ್ವಪತನ ಕಂಡಿತು. ಅಶ್ವಿ‌ನ್‌ ಮತ್ತು ಮೊದಲ ಟೆಸ್ಟ್‌ ಆಡಿದ ಜಯಂತ್‌ ಯಾದವ್‌ ತಲಾ 3 ವಿಕೆಟ್‌, ಶಮಿ ಮತ್ತು ರವೀಂದ್ರ ಜಡೇಜ ತಲಾ 2 ವಿಕೆಟ್‌ ಉರುಳಿಸಿದರು. ಕಪ್ತಾನನ ಆಟವಾಡಿದ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

2015ರ ಪ್ರವಾಸ ಪಾಠ ಕಲಿಸಿದೆ: ಡು ಪ್ಲೆಸಿಸ್‌
2015-16ರ ಭಾರತ ಪ್ರವಾಸದಿಂದ ತಾನು ಪಾಠ ಕಲಿತಿದ್ದೇನೆ ಎಂದಿದ್ದಾರೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾ ಡು ಪ್ಲೆಸಿಸ್‌. ಅಂದಿನ ಪ್ರವಾಸದ ವೇಳೆ ಹಾಶಿಮ್‌ ಆಮ್ಲ ಪಡೆ 4 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡಿತ್ತು. ಇದು ಹರಿಣಗಳಿಗೆ ಭಾರತದಲ್ಲಿ ಎದುರಾದ ಅತೀ ದೊಡ್ಡ ಸೋಲಾಗಿದೆ.

“ವೈಯಕ್ತಿಕವಾಗಿ ಹೇಳಬೇಕೆಂದರೆ ಕಳೆದ ಭಾರತ ಪ್ರವಾಸದ ವೇಳೆ ಅತ್ಯಂತ ಕಠಿನ ಸನ್ನಿವೇಶ ಎದುರಾಗಿತ್ತು. ಭಾರತದಂಥ ಸ್ಪಿನ್‌ ಟ್ರ್ಯಾಕ್‌ಗಳಲ್ಲಿ ಬ್ಯಾಟಿಂಗ್‌ ನಡೆಸುವುದು ನಿಜಕ್ಕೂ ಕಷ್ಟ. ಇದರ ಸ್ಪಷ್ಟ ಅನುಭವ ನಮಗಾಯಿತು. ಇಂಥ ಸಂದರ್ಭದಲ್ಲಿ ನಮ್ಮ ರಕ್ಷಣಾತ್ಮಕ ಬ್ಯಾಟಿಂಗ್‌ ಶೈಲಿ ಮತ್ತು ಟೆಕ್ನಿಕ್‌ ಮಹತ್ವದ ಪಾತ್ರ ವಹಿಸುತ್ತದೆ. ವಾತಾವರಣಕ್ಕೆ ಹೊಂದಿಕೊಂಡು ಆಡುವುದು ಮುಖ್ಯವಾಗುತ್ತದೆ. ಈ ಬಾರಿ ನಾನು ಮತ್ತು ನಮ್ಮ ಬ್ಯಾಟಿಂಗ್‌ ವಿಭಾಗ ಇದರಲ್ಲಿ ಯಸಸ್ಸು ಕಾಣಬಹುದೆಂಬ ನಂಬಿಕೆ ಇದೆ’ ಎಂದು ಡು ಪ್ಲೆಸಿಸ್‌ ಹೇಳಿದರು.

4 ವರ್ಷಗಳ ಹಿಂದೆ ಭಾರತದಲ್ಲಿ ಆಡಿದ ದಕ್ಷಿಣ ಆಫ್ರಿಕಾ ತಂಡದಲ್ಲಿದ್ದ ಐವರು ಆಟಗಾರರಷ್ಟೇ ಈ ಬಾರಿ ಕಾಣಿಸಿಕೊಂಡಿದ್ದಾರೆ. ಉಳಿದ ನಾಲ್ವರೆಂದರೆ ರಬಾಡ, ಎಲ್ಗರ್‌, ಬವುಮ ಮತ್ತು ಫಿಲಾಂಡರ್‌.

“ಎಲ್ಲರಿಗೂ ಅಂದಿನ ಸರಣಿ ಕಠಿನವಾಗಿ ಪರಿಣಮಿಸಿತ್ತು. ಆದರೆ ಎಲ್ಲರಿಗೂ ಇದು ದೊಡ್ಡ ಪಾಠವನ್ನೇ ಕಲಿಸಿತ್ತು. ಈ ಬಾರಿ ಇಲ್ಲಿನ ಪಿಚ್‌ ಹೆಚ್ಚು ತಿರುವು ಪಡೆಯಲಿಕ್ಕಿಲ್ಲ ಎಂಬ ನಂಬಿಕೆ ನಮ್ಮದು’ ಎಂದರು. ಪ್ರವಾಸಿ ತಂಡಕ್ಕೆ ಮುಂಬಯಿಯ ಮಾಜಿ ಆಟಗಾರ ಅಮೋಲ್‌ ಮುಜುಮಾªರ್‌ ಬ್ಯಾಟಿಂಗ್‌ ಕೋಚ್‌ ಆಗಿರುವುದು ವಿಶೇಷ.

ಪಂದ್ಯಕ್ಕೆ ಮಳೆ ಭೀತಿ
ಆಂಧ್ರಪ್ರದೇಶದ ಬಂದರು ನಗರಿ ವಿಶಾಖಪಟ್ಟಣದಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಐದೂ ದಿನಗಳ ಕಾಲ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಇದೆ.

ಹವಾಮಾನ ವರದಿ ಪ್ರಕಾರ ಪಂದ್ಯದ ಮೊದಲ ದಿನವಾದ ಬುಧವಾರದ ಆಟಕ್ಕೆ ಮಳೆಯಿಂದ ಶೇ. 80ರಷ್ಟು ಅಡಚಣೆಯಾಗಬಹುದು. ದ್ವಿತೀಯ ದಿನ ಶೇ. 50ರಷ್ಟು ಆಟವಷ್ಟೇ ನಡೆದೀತು. 3ನೇ ದಿನ ಮಳೆ ಪ್ರಮಾಣ ಕಡಿಮೆ ಆಗಲಿದೆ. ಕೊನೆಯ 2 ದಿನ ಮಳೆ ನಿಂತರೂ ಒದ್ದೆ ಅಂಗಳದಿಂದ ಆಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.

ಆಂಧ್ರದ ವಿಜಯನಗರಂನಲ್ಲಿ ನಡೆದ ಅಭ್ಯಾಸ ಪಂದ್ಯದ ಮೊದಲ ದಿನದಾಟ ಮಳೆಯಿಂದ ಸಂಪೂರ್ಣ ಕೊಚ್ಚಿ ಹೋದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next