Advertisement

ಟ್ರ್ಯಾಲಿ ಮೇಲೆತ್ತಿ ಟಿಪ್ಪರ್‌ ಓಡಿಸಿದ್ದಕ್ಕೆ ಟೀಸಿ, 12 ಕಂಬ ಧರೆಗೆ!

09:10 PM Apr 27, 2019 | Team Udayavani |

ಹುಣಸೂರು: ಟಿಪ್ಪರ್‌ ಲಾರಿಯ ಹಿಂಬದಿಯ ಟ್ರ್ಯಾಲಿ(ಬಕೇಟ್‌) ಮೇಲೆತ್ತಿಕೊಂಡೇ ಓಡಿಸುತ್ತಿದ್ದ ಚಾಲಕನ ಬೇಜವಾಬ್ದಾರಿತನದಿಂದ ವಿದ್ಯುತ್‌ ತಂತಿಗೆ ಟಿಪ್ಪರ್‌ನ ಟ್ರ್ಯಾಲಿ ತಗುಲಿ ಒಂದು ವಿದ್ಯುತ್‌ ಪರಿವರ್ತಕ ಸೇರಿದಂತೆ 12 ಲೈಟ್‌ ಕಂಬಗಳು ನೆಲಕ್ಕುರುಳಿರುವ ಘಟನೆ ನಗರದ ಬೈಪಾಸ್‌ ರಸ್ತೆಯಲ್ಲಿ ಸಂಭವಿಸಿದೆ.

Advertisement

ಈ ವೇಳೆ ವಿದ್ಯುತ್‌ ಸ್ಥಗಿತಗೊಂಡಿದ್ದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಅದೃಷ್ಟವಶಾತ್‌ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಶನಿವಾರ ಬೆಳಗ್ಗೆ ಟಿಪ್ಪರ್‌ ಲಾರಿಯು ಡೀಸೆಲ್‌ ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಲಾರಿ ಹಿಂಬದಿಯ ಬಕೇಟ್‌ ಮೇಲೆತ್ತಿದ್ದಾನೆ.

ಚಾಲಕ ಇದನ್ನು ಕೆಳಗಿಳಿಸದೆ ನಿರ್ಲಕ್ಷ್ಯದಿಂದ ಅತೀ ವೇಗವಾಗಿ ಬರುತ್ತಿದ್ದ ವೇಳೆ ದೇವರಾಜ ಅರಸು ಪ್ರತಿಮೆ ಬಳಿಯ ರಸ್ತೆಯಲ್ಲಿ ಅಡ್ಡವಿರುವ 11 ಕೆ.ವಿ. ವಿದ್ಯುತ್‌ ಮಾರ್ಗದ ತಂತಿಗೆ ತಗುಲಿದೆ. ರಭಸಕ್ಕೆ ಒಮ್ಮೆಲೇ ಒಂದು ವಿದ್ಯುತ್‌ ಕಂಬ ವೈರ್‌ ಸಮೇತ ರಸ್ತೆಗೆ ಬೀಳುತ್ತಿದ್ದಂತೆ ವಿದ್ಯುತ್‌ ಪರಿವರ್ತಕ (ಟೀಸಿ) ಹಾಗೂ 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಒಮ್ಮೆಲೆ ಧರೆಗುರುಳಿದ ತಕ್ಷಣವೇ ಲೈನ್‌ ಟ್ರಿಪ್‌ ಆಗಿದ್ದರಿಂದ ವಿದ್ಯುತ್‌ ಸ್ಥಗಿತಗೊಂಡು ಮುಂದಾಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

ಪ್ರಾಣಾಪಾಯದಿಂದ ಪಾರು: ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಗಾಬರಿಗೊಂಡು ಕಿರುಚಿಕೊಂಡಿದ್ದಾರೆ. ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುತ್ತಿದ್ದ ದನಗಾಹಿಯಂತೂ ಹೆದರಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

5.50 ಲಕ್ಷ ರೂ. ನಷ್ಟ: ವಿದ್ಯುತ್‌ ಪರಿವರ್ತಕಯನ್ನು ಕಾರ್ಯನಿರ್ವಹಿಸಲು ಸಮರ್ಥವಾಗಿದೆಯೇ ಎಂಬುದನ್ನು ತಪಾಸಣೆ ನಡೆಸಬೇಕಿದೆ. ಅಲ್ಲದೇ 12 ಕಂಬಗಳಿಗೆ ಹಾನಿಯಾಗಿದ್ದು, ಅಂದಾಜು 5.50 ಲಕ್ಷ ರೂ. ನಷ್ಟ ಉಂಟಾಗಿದೆ. ಘಟನೆ ಸಂಬಂಧ ಟಿಪ್ಪರ್‌ ಮಾಲಿಕ ಹಾಗೂ ಚಾಲಕನ ವಿರುದ್ಧ ನಗರಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸೆಸ್ಕ್ ಎಇಇ ಸಿದ್ದಪ್ಪ ತಿಳಿಸಿದ್ದಾರೆ.

Advertisement

ಚಾಲಕನಿಗೆ ನ್ಯಾಯಾಂಗ ಬಂಧನ: ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಅಜಾಗರೂಕತೆಯಿಂದ ಟಿಪ್ಪರ್‌ ಚಾಲನೆ ಮಾಡಿ ಅನಾಹುತಕ್ಕೆ ಕಾರಣನಾದ ಚಾಲಕ ಹುಣಸೂರು ತಾಲೂಕು ಹಿಂಡಗುಡ್ಲು ನಿವಾಸಿ ನಾಗನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಎಸ್ಸೆ„ ಮಹೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next