Advertisement

ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಭಾರದ ಕಣ್ಣೀರು

03:43 PM May 05, 2022 | Team Udayavani |

ದಾವಣಗೆರೆ: ರಾಜ್ಯದಲ್ಲಿರುವ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಅಧಿಕ ಕಾರ್ಯಭಾರದ ಒತ್ತಡಕ್ಕೆ ಸಿಲುಕಿದ್ದು, ಕೇಂದ್ರಕ್ಕೆ ಸಹಾಯಕಿಯರನ್ನು ನೇಮಿಸಬೇಕು ಎಂಬ ಅವರ ಬೇಡಿಕೆ ಅಕ್ಷರಶಃ ಅರಣ್ಯ ರೋದನವಾಗಿದೆ.

Advertisement

ಮಿನಿ ಅಂಗವಾಡಿ ಕಾರ್ಯಕರ್ತೆಯರು ಯಾವುದೇ ಸಹಾಯಕಿಯರಿಲ್ಲದೆ ಕೇಂದ್ರದ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಒಬ್ಬರೇ ಮಾಡಿ ಬೇಸತ್ತು ಹೋಗಿದ್ದಾರೆ. ಕೆಲಸದ ಅನಿವಾರ್ಯತೆ ಅವರನ್ನು ಕಟ್ಟಿ ಹಾಕಿದ್ದು ಮಾನಸಿಕ ಹಾಗೂ ದೈಹಿಕವಾಗಿ ನೊಂದುಕೊಂಡೇ ಕೆಲಸ ನಿರ್ವಹಿಸುವಂತಾಗಿದೆ.

ರಾಜ್ಯದಲ್ಲಿ ಒಟ್ಟು 3331ಮಿನಿ ಅಂಗನವಾಡಿ ಕೇಂದ್ರಗಳಿವೆ. ಸಹಾಯಕಿಯರು ಇಲ್ಲದೇ ಇರುವುದರಿಂದ ಕಾರ್ಯಕರ್ತೆಯರೇ ಕೇಂದ್ರದ ಎಲ್ಲ ಕೆಲಸಗಳನ್ನು ನಿಭಾಯಿಸಬೇಕಾಗಿರುವುದರಿಂದ ಅಂಗನವಾಡಿ ಮಕ್ಕಳ ಆರಂಭಿಕ ಕಲಿಕೆ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಮುಖ್ಯ ಅಂಗನವಾಡಿ ಕೇಂದ್ರಗಳಲ್ಲಿ ಒಬ್ಬರು ಕಾರ್ಯಕರ್ತೆ ಇದ್ದರೆ, ಇನ್ನೊಬ್ಬರು ಸಹಾಯಕ ಕಾರ್ಯಕರ್ತೆ ಇರುತ್ತಾರೆ. ಸಹಾಯಕಿಯರು ಕೇಂದ್ರಕ್ಕೆ ಬರುವ ಆಹಾರ ದಾಸ್ತಾನು, ಪಾತ್ರೆ ತೊಳೆಯುವುದು, ಕೇಂದ್ರದ ಸ್ವಚ್ಛತೆ, ಮಕ್ಕಳ ಸ್ವಚ್ಛತೆ ಜವಾಬ್ದಾರಿ ನಿರ್ವಹಿಸುತ್ತಾರೆ.

ಕಾರ್ಯಕರ್ತೆಯಾದವರು ಮಕ್ಕಳ ದಾಖಲಾತಿ, ಹಾಜರಾತಿ, ಆಹಾರ ಪೂರೈಕೆ, ಮಕ್ಕಳಿಗೆ ಓದು-ಬರಹ, ಇಲಾಖೆಯ ಸಭೆ, ವಿವಿಧ ಸರ್ವೇ ಕೆಲಸಗಳಲ್ಲಿ ಭಾಗವಹಿಸುತ್ತಾರೆ. ಆದರೆ, ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರು ಇಲ್ಲದೇ ಇರುವುದರಿಂದ ಕಾರ್ಯಕರ್ತೆಯೇ ಎಲ್ಲ ಜವಾಬ್ದಾರಿ ನಿರ್ವಹಿಸುವುದು ಅನಿವಾರ್ಯವಾಗಿದೆ.

ಕೇಂದ್ರ ಸರ್ಕಾರ 400ರಿಂದ ಒಂದು ಸಾವಿರ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಐಸಿಡಿಎಸ್‌ ಯೋಜನೆಯಡಿ ರಾಜ್ಯದಲ್ಲಿ 3331 ಮಿನಿ ಅಂಗನವಾಡಿ ಕೇಂದ್ರಗಳನ್ನು ತೆರೆದು ಅಲ್ಲಿ ತಲಾ ಒಬ್ಬರು ಅಂಗನವಾಡಿ ಕಾರ್ಯಕರ್ತೆಯನ್ನಷ್ಟೇ ನೇಮಕ ಮಾಡಿಕೊಳ್ಳಲು ಸೂಚಿಸಿತು. ಒಂದೂವರೆ ದಶಕಗಳ ಅವಧಿಯಲ್ಲಿ ಆಯಾ ಭಾಗದ ಜನಸಂಖ್ಯೆ ಎರಡೂ¾ರು ಸಾವಿರ ದಾಟಿದೆ.

Advertisement

ಆದರೆ, ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಮಾತ್ರ ಆಗಿಲ್ಲ. ಜತೆಗೆ ಸಹಾಯಕ ಕಾರ್ಯಕರ್ತರ ನೇಮಕಕ್ಕೂ ಅವಕಾಶ ನೀಡಿಲ್ಲ. ಇದರಿಂದ ಮಿನಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಕಾರ್ಯದೊತ್ತಡ ಹೆಚ್ಚಾಗಿದ್ದು ಕೆಲಸ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಭಾವನೆಯಲ್ಲೂ ತಾರತಮ್ಯ: ಮಿನಿ ಅಂಗನವಾಡಿ ಕಾರ್ಯಕರ್ತೆಯರು ಸಂಭಾವನೆ ತಾರತಮ್ಯಕ್ಕೂ ಒಳಗಾಗಿದ್ದಾರೆ. ಮುಖ್ಯ ಅಂಗನವಾಡಿ ಕಾರ್ಯಕರ್ತೆಯರ (10,000 ರೂ.) ಗೌರವ ಸಂಭಾವನೆಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರ (6,750 ರೂ.) ಗೌರವ ಸಂಭಾವನೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ವೇತನ ತಾರತಮ್ಯ ಸರಿಪಡಿಸಲು ಸರ್ಕಾರ ಗಮನ ನೀಡಬೇಕು ಎಂಬುದು ಕಾರ್ಯಕರ್ತೆಯರ ಬೇಡಿಕೆಯಾಗಿದೆ.

ಕೆಲಸ ಮಾಡಿದರೂ ದೂಷಣೆ ತಪ್ಪಲ್ಲ.. ಮಿನಿ ಅಂಗನವಾಡಿ ಕಾರ್ಯಕರ್ತೆಯಾದವರು ಬೆಳಿಗ್ಗೆ ಬಂದು ಅಂಗನವಾಡಿ ಕೇಂದ್ರದ ಬಾಗಿಲು ತೆಗೆದು ಕಸಗುಡಿಸಿ ಸ್ವಚ್ಛಗೊಳಿಸಬೇಕು. ನಂತರ ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆದುಕೊಂಡು ಬರಬೇಕು. ಅವರಿಗೆ ಒಂದಿಷ್ಟು ಓದು-ಬರಹ ಹೇಳಿ ಕೊಟ್ಟು ಅಡುಗೆ ಮಾಡಿ ಮಕ್ಕಳಿಗೆ ಊಟ ಕೊಡಬೇಕು. ಕೇಂದ್ರಕ್ಕೆ ಬಂದಂಥ ಆಹಾರ ಧಾನ್ಯಗಳನ್ನು ಸ್ವತ್ಛಗೊಳಿಸಿ ಜೋಡಿಸಿಟ್ಟುಕೊಳ್ಳಬೇಕು. ಅಡುಗೆ ಪಾತ್ರೆ ತೊಳೆದು ಮಕ್ಕಳಿಗೆ ಊಟ ಕೊಡಬೇಕು. ಮಕ್ಕಳನ್ನು ಮನೆಗೆ ಬಿಟ್ಟು ಬರಬೇಕು. ಮಕ್ಕಳು ಗಲೀಜು ಮಾಡಿಕೊಂಡರೆ ಸ್ವತ್ಛಗೊಳಿಸಬೇಕು.

ಆರು ವರ್ಷದೊಳಗಿನ ಮಕ್ಕಳ ಸರ್ವೆ, ಗರ್ಭಿಣಿಯರ ಸರ್ವೆ, ಮತದಾರರ ಸರ್ವೆಯಂಥ ಕಾರ್ಯವನ್ನೂ ಮಾಡಬೇಕು. ಇಷ್ಟೆಲ್ಲ ಕೆಲಸಗಳನ್ನು ನಿರ್ವಹಿಸುವ ಮಿನಿ ಅಂಗನವಾಡಿ ಕಾರ್ಯಕರ್ತೆ, ಮಕ್ಕಳನ್ನು ಕರೆದುಕೊಂಡು ಹೋಗಲು ಮನೆಗೆ ಬಂದಿಲ್ಲ. ಮಕ್ಕಳಿಗೆ ಏನೂ ಹೇಳಿಕೊಟ್ಟಿಲ್ಲ. ಆಗಾಗ ಕೇಂದ್ರಕ್ಕೆ ಬೀಗ ಹಾಕಿ ಹೊರಗೆ ಹೋಗುತ್ತಾರೆ ಎಂಬ ಸಾರ್ವಜನಿಕರ ಆರೋಪಕ್ಕೂ ಗುರಿಯಾಗಬೇಕಾಗಿದ್ದು ಮಾತ್ರ ವಿಪರ್ಯಾಸ.

ಮಿನಿ ಅಂಗನವಾಡಿ ಕಾರ್ಯಕರ್ತೆಯರನ್ನೂ ಮುಖ್ಯ ಕಾರ್ಯಕರ್ತರೆಂದು ಪರಿಗಣಿಸಿ ಸಮಾನ ಗೌರವಧನ ನೀಡಬೇಕು ಎಂದು ಒತ್ತಾಯಿಸಿ ಮೇ 13 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ●ಹೊನ್ನಪ್ಪ ಮರೆಮ್ಮನವರ,ಉಪಾಧ್ಯಕ್ಷರು, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next