Advertisement

ವೃದ್ಧಾಶ್ರಮದಿಂದ ವರ್ಗಾವಣೆಗೆ ವೃದ್ಧರ ಕಣ್ಣೀರ ತಡೆ

11:10 AM Apr 18, 2018 | Team Udayavani |

ತೆಕ್ಕಟ್ಟೆ (ಬೇಳೂರು): ಕುಂದಾಪುರದ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಸ್ಫೂರ್ತಿಧಾಮದ ಅನಘಾ ವೃದ್ಧಾಶ್ರಮದ ಪರವಾನಿಗೆ ರದ್ದುಗೊಳಿಸಿ ಹಿರಿಯ ನಾಗರಿಕರನ್ನು ಬೇರೆಡೆಗೆ ವರ್ಗಾಯಿಸುವ ಅಧಿಕಾರಿಗಳ ಯತ್ನಕ್ಕೆ ಕಣ್ಣೀರು ತಡೆಯಾಗಿದೆ. 
ಉಡುಪಿಯ ಶಂಕರಪುರದ ವಿಶ್ವಾಸದ ಮನೆಗೆ ವರ್ಗಾವಣೆ ಮಾಡುವುದರ ವಿರುದ್ಧ ವೃದ್ಧರೇ ಕಣ್ಣೀರು ಸುರಿಸಿ, ಬೇಡ ಎಂದು ಹೇಳಿದ್ದರಿಂದ ದಿಕ್ಕು ತೋಚದ ಅಧಿಕಾರಿಗಳು ಏನೂ ಮಾಡಲಾಗದೇ ವಾಪಸ್ಸಾದ ಘಟನೆ ಸೋಮವಾರ ನಡೆದಿದೆ. 

Advertisement

ಏನಿದು ಘಟನೆ? 
ಸ್ಫೂರ್ತಿಧಾಮ  ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ಅನಘಾ ವೃದ್ಧಾಶ್ರಮದಲ್ಲಿ ಅಕ್ರಮಗಳಾಗುತ್ತಿವೆ ಎಂದು ಆರೋಪಿಸಿ ಮಹಾಬಲ ಕುಂದರ್‌ ಹಾಗೂ ರಾಮ ಪೂಜಾರಿ ಎಂಬವರು ಸರಕಾರಕ್ಕೆ ದೂರು ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ನಿರ್ದೇಶನದಲ್ಲಿ ತನಿಖಾ ತಂಡ ರಚಿಸಿ ತನಿಖೆ ನಡೆಸಲಾಗಿದ್ದು, ಸಂಸ್ಥೆಯ ಪರವಾನಿಗೆ ರದ್ದುಗೊಳಿಸಲು ಸೂಚಿಸಲಾಗಿತ್ತು. ಜತೆಗೆ ಅಲ್ಲಿರುವ ವೃದ್ಧರನ್ನು ವಿಶ್ವಾಸದ ಮನೆ ಶಂಕರಪುರಕ್ಕೆ ವರ್ಗಾಯಿಸಲು ಆದೇಶಿಸಲಾಗಿತ್ತು. 

ಅದರಂತೆ  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ತಂಡ ಖಾಸಗಿ ಬಸ್‌, ಆ್ಯಂಬುಲೆನ್ಸ್‌ , ವೈದ್ಯಾಧಿಕಾರಿಗಳು ಪೊಲೀಸ್‌ ರಕ್ಷಣೆಯೊಂದಿಗೆ ಬೇಳೂರು ಸ್ಫೂರ್ತಿಧಾಮಕ್ಕೆ ಬಂದಿದ್ದು, ಜಿಲ್ಲಾಧಿಕಾರಿ ಆದೇಶದ ಪ್ರತಿಯನ್ನು ಸಂಸ್ಥೆಗೆ ನೀಡಿದ್ದಾರೆ. ಜತೆಗೆ ವೃದ್ಧರ ವರ್ಗಾವಣೆಗೆ ಮುಂದಾಗಿದ್ದಾರೆ.  

ಈ ಸಂದರ್ಭ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಪೊಲೀಸ್‌ ಠಾಣಾಧಿಕಾರಿ ಸಂತೋಷ್‌ ಕಾಯ್ಕಿಣಿ, ಯೋಜನಾ ಸಹಾಯಕಗಣೇಶ್‌ ಮರಾಠೆ, ಶಶಿಧರ್‌, ಬ್ರಹ್ಮಾವರ ಸಿಡಿಪಿಒ ಎಚ್‌.ಎಸ್‌. ಜೋಗರ್‌, ಪೊಲೀಸ್‌ ಸಿಬಂದಿಗಳು ಮತ್ತಿತರರಿದ್ದರು.

ಕಣ್ಣೀರಿಟ್ಟ  ವೃದ್ಧರು 
ವರ್ಗಾವಣೆಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ್‌ ಭಟ್‌ ಅವರು ವೃದ್ಧರಿಗೆ ತಿಳಿಹೇಳಿ ಮನವೊಲಿಕೆ ಮಾಡುತ್ತಿದ್ದಂತೆ, ಸುಮಾರು ಆರು ವರ್ಷದಿಂದ ವೃದ್ಧಾಶ್ರಮ ಆಶ್ರಯಿಸಿದ್ದ ವೆಂಕಟೇಶ್‌ ಪೈ ಅವರು, ಈ ಸಂಸ್ಥೆಯಲ್ಲಿ ಯಾವುದೇ ತೊಂದರೆ ಇಲ್ಲ. ನಮ್ಮ ಮನೆ ಬಿಟ್ಟು ಎಲ್ಲಿಗೂ ಹೋಗಲ್ಲ. ಈ ಸಂಸ್ಥೆ ನಮ್ಮನ್ನು ಅನಾಥ
ರಂತೆ ಕಂಡಿಲ್ಲ. ನಾವು ಬರಲು ತಯಾರಿಲ್ಲ ಎಂದು ಹೇಳಿ ಕೈ ಮುಗಿದು ಭಾವುಕರಾದರು. 80ರ ಇಳಿ
ವಯಸ್ಸಿನ ತುಕರಿ ಅಜ್ಜಿ ಮಾತನಾಡಿ, ಇಲ್ಲಿಗೆ ಬಂದು ಹಲವು ವರ್ಷಗಳಾಗಿವೆ. ಬಿಟ್ಟು ಹೋಗಲು ಬೇರೆ ದಾರಿಯಿಲ್ಲ. ಎಲ್ಲಿಗೂ ಹೋಗಲ್ಲ ಎಂದು ಕಣ್ಣೀರಿಟ್ಟರು. ಪರಿಣಾಮ ವರ್ಗಾವಣೆ ಆಲೋಚನೆಯನ್ನು ಕೈಬಿಡಬೇಕಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next