Advertisement

ಮೆಟ್ರೋ ಕಾಮಗಾರಿ ಪರಿಶೀಲನೆಗೆ ಐಐಎಸ್ಸಿ ತಜ್ಞರ ತಂಡ

09:32 AM Mar 21, 2019 | Team Udayavani |

ಬೆಂಗಳೂರು: ಟ್ರಿನಿಟಿ ವೃತ್ತದ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಕಾಣಿಸಿಕೊಂಡ ನಂತರ ಎಚ್ಚೆತ್ತುಕೊಂಡ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಎರಡನೇ ಹಂತದ ಯೋಜನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಜ್ಞರನ್ನು “ಕನ್ಸಲ್ಟಂಟ್‌’ ಆಗಿ ತೊಡಗಿಸಿಕೊಳ್ಳಲು ಉದ್ದೇಶಿಸಿದೆ.

Advertisement

ಟ್ರಿನಿಟಿ ವೃತ್ತದಲ್ಲಿ ನಡೆದ ಘಟನೆ ಭವಿಷ್ಯದಲ್ಲಿ ಯಾವತ್ತೂ ಪುನರವರ್ತನೆ ಆಗದಂತೆ ತಡೆಯಲು ನಿರ್ಧರಿಸಿರುವ “ನಮ್ಮ
ಮೆಟ್ರೋ’, ಯೋಜನೆ ನಿರ್ಮಾಣ ಹಂತದಲ್ಲೇ ತಜ್ಞರಿಂದ ನಿರಂತರ ಗುಣಮಟ್ಟ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಈ ಸಂಬಂಧ ಐಐಎಸ್ಸಿ ಸ್ಟ್ರಕ್ಚರಲ್‌ ಎಂಜಿನಿಯರ್‌ಗಳೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾತ್ರವಲ್ಲ, ತಜ್ಞರ ತಂಡಗಳು ಕೂಡ ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ, ನಿಯಮಿತವಾಗಿ ಗುಣಮಟ್ಟ ಪರೀಕ್ಷೆ ನಡೆಸಲಿದ್ದಾರೆ.

155ನೇ ಪಿಲ್ಲರ್‌ನಲ್ಲಿ ಲೋಪ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಮೆಟ್ರೋ ಮೊದಲ ಹಂತದ ಇಡೀ 42.3 ಕಿ.ಮೀ.
ಉದ್ದದ ಮಾರ್ಗವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ತಿಂಗಳಿಗೆ ಕನಿಷ್ಠ ಎರಡು ಬಾರಿ ತಜ್ಞರಿಂದ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆಗೆ ಒಳಪಡಿಸುವ ಚಿಂತನೆ ಇದೆ. ಈ ಹಿನ್ನೆಲೆಯಲ್ಲಿ ಮೂರ್‍ನಾಲ್ಕು ದಿನಗಳ ಹಿಂದಷ್ಟೇ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಭೇಟಿ ನೀಡಿ, ಚರ್ಚೆ ನಡೆಸಲಾಗಿದೆ. ತಜ್ಞರಿಂದ ಪೂರಕ ಸ್ಪಂದನೆಯೂ ದೊರಕಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಐಐಎಸ್ಸಿ ತಜ್ಞರು ಏನೇನು ಪರಿಶೀಲನೆ ಮಾಡ್ತಾರೆ? ಕಾಮಗಾರಿಗೆ ಬಳಸಲಾದ ವಸ್ತುಗಳ ಗುಣಮಟ್ಟ, ಕಾಂಕ್ರೀಟ್‌, ಅಲೈನ್‌ಮೆಂಟ್‌, ಅಡಿಪಾಯ ಸೇರಿದಂತೆ ವಿವಿಧ ರೀತಿಯ ಪರಿಶೀಲನೆ ನಡೆಸಲಿದ್ದಾರೆ. ಇದರರ್ಥ ಈಗ ಸರಿಯಾಗಿ ಪರಿಶೀಲನೆ ಆಗುತ್ತಿಲ್ಲ ಎಂದೇನೂ ಅಲ್ಲ. ಆದರೆ, ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳಿಗೂ ಈ ಬಗ್ಗೆ ಎಚ್ಚರಿಕೆ ಮೂಡುತ್ತದೆ. ಆ ಮೂಲಕ ಇನ್ನಷ್ಟು ಜಾಗೃತರಾಗಿ
ಕೆಲಸ ಮಾಡಲು ಸಾಧ್ಯವಾಗುತ್ತದೆ.

 ಅಷ್ಟಕ್ಕೂ ಇದು ಲಕ್ಷಾಂತರ ಜನರನ್ನು ಕೊಂಡೊಯ್ಯುವ ಸಾರಿಗೆ ವ್ಯವಸ್ಥೆ ಆಗಿರುವುದರಿಂದ ಇಂತಹದ್ದೊಂದು ಪರೀಕ್ಷೆಯ ಅವಶ್ಯಕತೆಯೂ ಇದೆ. ಲೋಪ ಕಂಡುಬಂದ ನಂತರ ಪರೀಕ್ಷೆ ನಡೆಸುವ ಬದಲಿಗೆ, ಮುಂಚಿತವಾಗಿಯೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಸೂಕ್ತ ಎಂದೂ ಅಧಿಕಾರಿ ತಿಳಿಸಿದರು. ಕನ್ಸಲ್ಟಂಟ್‌ ಮಾದರಿಯಲ್ಲಿ ತಮ್ಮನ್ನು ತೊಗಡಿಸಿಕೊಳ್ಳುವ ಸಂಬಂಧ ಬಿಎಂಆರ್‌ಸಿಎಲ್‌ ಚರ್ಚೆ ನಡೆಸಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನೂ ಸ್ಪಷ್ಟ ತೀರ್ಮಾನ ಆಗಿಲ್ಲ. ಈ ಹಿಂದೆಯೂ ಮೆಟ್ರೋ ಮೊದಲ ಹಂತದ ಯೋಜನೆಯಲ್ಲಿ ನಿಗಮವು ಸಲಹೆ ಪಡೆದಿತ್ತು. ಸಕ್ರಿಯವಾಗಿ ಇರಲಿಲ್ಲ. ತಿಂಗಳಿಗೆ ಕನಿಷ್ಠ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದು ಐಐಎಸ್ಸಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಜೆ.ಎಂ. ಚಂದ್ರಕಿಶನ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

Advertisement

ವಿವಿಧ ಮಾರ್ಗಗಳ ಪ್ರಗತಿ ಹೀಗಿದೆ 72 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. ಯಲಚೇನಹಳ್ಳಿ- ಅಂಜನಾಪುರ ಟೌನ್‌ ಶಿಪ್‌ ನಡುವೆ ಒಟ್ಟಾರೆ ಶೇ.76ರಷ್ಟು ಪ್ರಗತಿ ಆಗಿದೆ. ಹಳಿ ಜೋಡಣೆ ಕೆಲಸ ನಡೆದಿದೆ. ಮೈಸೂರು ರಸ್ತೆ- ಕೆಂಗೇರಿ ನಡುವಿನ ಸಿವಿಲ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಒಟ್ಟಾರೆ ಶೇ.69ರಷ್ಟು ಪ್ರಗತಿ ಕಂಡಿದೆ. ನಾಗಸಂದ್ರ- ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಮಾರ್ಗವು ಶೇ.26, ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ ಮಾರ್ಗದಲ್ಲಿನ ಕಾಮಗಾರಿ ಶೇ.28ರಷ್ಟು ಪ್ರಗತಿ ಆಗಿದೆ. ಪ್ರತ್ಯೇಕ ಮಾರ್ಗಗಳಾದ ಗೊಟ್ಟಿಗೆರೆ- ನಾಗವಾರ ಹಾಗೂ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗಗಳ ಪ್ರಗತಿ ಮಂದಗತಿಯಲ್ಲಿದೆ. ಸಿಲ್ಕಬೋರ್ಡ್‌- ಕೆ.ಆರ್‌.ಪುರ ಮಾರ್ಗ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. 

ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗಕ್ಕೆ ಇನ್ನೂ ಸಚಿವ ಸಂಪುಟ ಒಪ್ಪಿಗೆ ನೀಡಬೇಕಿದೆ

 ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next