ನಾನು ಬದಲಾದ ದ ಪ್ರತಿನಿಧಿ ಮಾತ್ರ ಎಂದು ವಿರಾಟ್ ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಹೇಳಿದ್ದರು. ಆ ಮಾತನ್ನು ಆಗ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರ ಆಳಕ್ಕೂ ಹೋಗಿರಲಿಲ್ಲ. ಆದ್ದರಿಂದಲೇ ಅದರ ಅರ್ಥ ಆಗಿರಲಿಲ್ಲ. ಆ ಮಾತಿನ ಮರ್ಮ ಮಂಗಳವಾರ ಸರಿಯಾಗಿ ಅರ್ಥವಾಗಿದೆ. ಅದರಲ್ಲೂ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ, ಅಲ್ಲಿನ ದುರಹಂಕಾರಿ ಮಾಜಿ ಕ್ರಿಕೆಟಿಗರಿಗೆ, ಮಾಧ್ಯಮಗಳಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ವರ್ತಮಾನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇಲ್ಲ, ಇನ್ನೊಬ್ಬ ವಿಶ್ವವಿಖ್ಯಾತ ಆಟಗಾರ ರೋಹಿತ್ ಶರ್ಮ ಇಲ್ಲ, ಅದ್ಭುತ ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮ ಕೂಡಾ ಇಲ್ಲ.
ಇಷ್ಟೆಲ್ಲ ಇಲ್ಲಗಳ ನಡುವೆ ಅಜಿಂಕ್ಯ ರಹಾನೆ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ, ಎದುರಾಳಿ ಆಸ್ಟ್ರೇಲಿಯ ತಂಡ ವನ್ನು ಅದರ ತವರು ನೆಲದಲ್ಲೇ ಸೋಲಿಸಿದೆ. ಅದರಲ್ಲೂ ಮೆಲ್ಬರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ. ಇದರಲ್ಲಿ ಅದೃಷ್ಟದಾಟದ ಪಾತ್ರವೇನೂ ಇಲ್ಲ. ಇಡೀ ತಂಡ ಅತ್ಯಂತ ಯೋಜನಾ ಬದ್ಧವಾಗಿ, ಆಕ್ರಮಣಕಾರಿಯಾಗಿ, ಧೈರ್ಯವಾಗಿ ಆಡಿದ್ದರಿಂದ ಇಂತಹ ಜಯ ಸಾಧ್ಯವಾಯಿತು.
ಈ ಗೆಲುವು ಭಾರತಕ್ಕೆ ಒಲಿಯುವ ಮುಂಚೆ ಎಂಥ ಸ್ಥಿತಿಯಿತ್ತು ಗೊತ್ತೇ? ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತ ಕೇವಲ 36 ರನ್‌ಗಳಿಗೆ ಆಲೌಟಾಗಿತ್ತು. ಭಾರತದಂತಹ ಕ್ರಿಕೆಟ್ ಜಗತ್ತಿನ ಅತ್ಯಂತ ಬಲಿಷ್ಠ ತಂಡಕ್ಕೆ ಇದು ಘೋರ ಅವಮಾನ. ಆಗ ಎದುರಾದ ಸೋಲಿನ ಅನಂತರ ಆಗಿನ ನಾಯಕ ಕೊಹ್ಲಿ, ದಯವಿಟ್ಟು ಹುತ್ತವನ್ನು ಪರ್ವತ ಮಾಡಬೇಡಿ. ನಾವು ಸೋತಿದ್ದೇವೆ ಅಂದರೆ ಎಲ್ಲವೂ ಮುಗಿದುಹೋಯಿತು ಎಂದರ್ಥವಲ್ಲ ಎಂದಿದ್ದರು. ಅದನ್ನು ಹೌದೆಂದು ಅಜಿಂಕ್ಯ ರಹಾನೆ ಪಡೆ ಸಾಬೀತುಪಡಿಸಿದೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಕೊಹ್ಲಿ ಮೊದಲ
ಟೆಸ್ಟ್ ಮುಗಿದ ಅನಂತರ ಭಾರತಕ್ಕೆ ಮರಳಿದರು. ಆಗ ರಹಾನೆಗೆ ಸಾರಥ್ಯ ಒಲಿಯಿತು. ಸಾಮಾನ್ಯವಾಗಿ ನಾಯಕತ್ವವನ್ನು ಎಲ್ಲರೂ ಸಂಭ್ರಮಿಸುತ್ತಾರೆ. ರಹಾನೆ ಮಾತ್ರ ಅಂಥ ಸ್ಥಿತಿಯಲ್ಲಿರಲಿಲ್ಲ. ಹಲವು ದಿಗ್ಗಜರ ಅನುಪಸ್ಥಿತಿಯಲ್ಲಿ ಅವರು ಮುಳ್ಳಿನ ಕಿರೀಟ ಹೊತ್ತುಕೊಂಡಿದ್ದರು. ಅಂತಹ ಸ್ಥಿತಿಯನ್ನು ಅವರು ಎಷ್ಟು ಶಾಂತವಾಗಿ ನಿಭಾಯಿಸಿದರೆಂದರೆ ಖಾಯಂ ನಾಯಕ ಕೊಹ್ಲಿ ಸೇರಿದಂತೆ ಕ್ರಿಕೆಟ್ ಜಗತ್ತೇ ಅವರನ್ನು ಹೊಗಳಿತು. ಹಾವಭಾವದಲ್ಲಿ ತಣ್ಣಗಿದ್ದ ಅವರು, ತನ್ನ ನಿರ್ಧಾರ ಗಳಲ್ಲಿ, ಆಟದಲ್ಲಿ ಆಕ್ರಮಣಕಾರಿಯಾಗಿದ್ದರು. ಸ್ವತಃ ಬ್ಯಾಟಿಂಗ್ ಮಾಡುವಾಗ ಉಳಿದವರಿಗೆ ಮಾದರಿಯಾದರು. ಶತಕ ಬಾರಿಸಿ ತಂಡದ ಗೆಲುವಿಗೆ ಆಧಾರವಾದರು. ಪಂದ್ಯಶ್ರೇಷ್ಠ ಗೌರವ ಅವರಿಗೆ ಒಲಿದುಬಂತು.
ಟೆಸ್ಟ್ ಸರಣಿ 1-1ರಿಂದ ಸಮಬಲವಾಯಿತು. ಇನ್ನೂ ಎರಡು ಟೆಸ್ಟ್ ಬಾಕಿಯಿದೆ. ರಹಾನೆಯ ನಾಯಕತ್ವದ ಶೈಲಿ ನೋಡಿದರೆ ಇಲ್ಲೂ ಭಾರತ ಗೆದ್ದರೆ ಅಚ್ಚರಿಯಿಲ್ಲ. ಆದರೆ ಗಮನಿಸಲೇಬೇಕಾದ ಕೆಲವು ಸಂಗತಿಗಳಿವೆ. ಚೇತೇಶ್ವರ ಪೂಜಾರ, ಮಾಯಾಂಕ್ ಅಗರ್ವಾಲ್ ತಮ್ಮ ವೈಫಲ್ಯದಿಂದ ಹೊರಬರಬೇಕು, ಭಾರತೀಯ ಆಟಗಾರರು ತಮ್ಮ ದೈಹಿಕ ಕ್ಷಮತೆಯನ್ನು ಮೊದಲ ಆದ್ಯತೆಯಾಗಿಟ್ಟುಕೊಳ್ಳಬೇಕು. ಇಲ್ಲದೇ ಹೋದರೆ ಈಗ ಆಗಿರುವಂತೆ ಗಾಯಾಳುಗಳ ಸಂಖ್ಯೆ ಏರುತ್ತದೆ.