Advertisement

ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ ಗೆ ಸಜ್ಜಾದ ಭಾರತ

02:56 PM Jan 12, 2023 | Team Udayavani |

ಕೊನೆಗೂ ಎರಡು ವರ್ಷಗಳ ಕಾಯುವಿಕೆಯ ಅನಂತರ ಬಹು ನಿರೀಕ್ಷಿತ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ ಗೆ ವೇದಿಕೆ ಸಜ್ಜಾಗಿದೆ. ಜನವರಿ 2021ರಲ್ಲಿಯೇ ನಡೆಯಬೇಕಾಗಿದ್ದ ಈ ಟೂರ್ನಿ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ  ದಕ್ಷಿಣ ಆಫ್ರಿಕಾದಲ್ಲಿ ಜನವರಿ 14ರಿಂದ 29ರ ವರೆಗೆ ವಿಶ್ವದ 16 ತಂಡಗಳು ಮೊದಲ U-19 ವಿಶ್ವಕಪ್  ಗಾಗಿ ಸೆಣೆಸಲು ಸಿದ್ಧವಾಗಿವೆ. ಅವುಗಳೆಂದರೇ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್‌, ಐರ್ಲೆಂಡ್‌, ನ್ಯೂಜಿಲ್ಯಾಂಡ್‌, ಪಾಕಿಸ್ಥಾನ, ಶ್ರೀಲಂಕಾ, ವೆಸ್ಟ್ ಇಂಡೀಸ್‌. ಈಗಾಗಲೇ ಈ ಎಲ್ಲ ದೇಶಗಳು ತಂಡದ ಸದಸ್ಯರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿವೆ.

Advertisement

ಭಾರತವೂ ಸಹ ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಹಾರ್ಡ್‌ ಹಿಟ್ಟರ್‌ ಶಫಾಲಿ ವರ್ಮ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ಜತೆ ವಿಕೆಟ್‌ ಕೀಪಿಂಗ್‌ ಬ್ಯಾಟರ್‌ ರಿಚಾ ಘೋಶ್‌ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಭಾರತದ ರಾಷ್ಟ್ರೀಯ ಮಹಿಳಾ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವವುಳ್ಳವರಾಗಿದ್ದು, ಇವರ ಉಪಸ್ಥಿತಿ ಭಾರತಕ್ಕೆ ವರವಾಗುವುದರಲ್ಲಿ ಅನುಮಾನವಿಲ್ಲ.

ಗ್ರೂಪ್‌ ಹಂತದಲ್ಲಿ ಪಂದ್ಯಗಳು ನಡೆಯಲಿದ್ದು, 16 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತೀ ಗುಂಪಿನಲ್ಲಿ 4 ತಂಡಗಳು ಸೆಣಸಲಿವೆ. ಪ್ರತೀ ಗುಂಪಿನ ಅಗ್ರ 3 ತಂಡಗಳು ಸೂಪರ್‌ ಸಿಕ್ಸ್ ಹಂತ ತಲುಪಲಿವೆ. ಇಲ್ಲಿ ಎ ಗುಂಪಿನ ಅಗ್ರ ತಂಡಗಳು ಡಿ ಗುಂಪಿನ ವಿರುದ್ಧ, ಬಿ ಗುಂಪಿನ ಅಗ್ರ ತಂಡಗಳು ಸಿ ಗುಂಪಿನ ವಿರುದ್ಧ ಆಡಲಿವೆ. ಇಲ್ಲಿ ಅಗ್ರಸ್ಥಾನ ಗಳಿಸುವ ತಂಡಗಳು ಸೆಮಿ ಫೈನಲ್‌ ತಲುಪಲಿವೆ. ಡಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಜ. 14ರಂದು ದಕ್ಷಿಣ‌ ಆಫ್ರಿಕಾ, ಜ. 16ರಂದು ಯುಎಇ, ಜ. 18ರಂದು ಸ್ಕಾಟ್ಲೆಂಡ್‌ ವಿರುದ್ಧ ಸೆಣೆಸಲಿದೆ.

ಭಾರತ ತಂಡ ಎಲ್ಲ ರೀತಿಯಿಂದಲೂ ಬಲಿಷ್ಠವಾಗಿಯೇ ಇದೆ. ನ್ಯೂಜಿಲ್ಯಾಂಡ್‌ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ 5-0 ಅಂತರದಿಂದ ಗೆದ್ದರೆ, ದಕ್ಷಿಣ ಆಫ್ರಿಕಾದ ವಿರುದ್ಧ ಅವರದೇ ನೆಲದಲ್ಲಿ ಆಡಿದ ಸರಣಿಯನ್ನು 4-0 ಅಂತರದಿಂದ ಗೆದ್ದು  ಬೀಗಿದೆ. ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 18 ರನ್‌ಗಳಿಂದ ಸೋಲಿಸಿದೆ. ಆದರೆ ಬಾಂಗ್ಲಾದೇಶ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಕೇವಲ 3 ರನ್‌ಗಳಿಂದ ಸೋಲನುಭವಿಸಿದೆ.

ಬಾಂಗ್ಲಾದ ವಿರುದ್ಧ ಸೋತ ಮಾತ್ರಕ್ಕೆ ಭಾರತವನ್ನು ಅಲ್ಲಗಳೆಯುವಂತಿಲ್ಲ. ಎಲ್ಲ ವಿಭಾಗದಲ್ಲೂ ಭಾರತ ತಂಡ ಸದೃಢವಾಗಿಯೇ ಇದೆ. ಬ್ಯಾಟಿಂಗ್ ನಲ್ಲಿ ಸೌಮ್ಯಾ ತಿವಾರಿ, ಉಪನಾಯಕಿ ಶ್ವೇತಾ ಸೆಹ್ರಾವತ್‌, ಜಿ.ವಿ. ತೃಶಾ ಬಲ ತುಂಬಿದರೆ, ಬೌಲಿಂಗ್‌ನಲ್ಲಿ ಹರ್ಲಿ ಗಾಲಾ, ಸೋನಮ್‌ ಯಾದವ್‌, ಮನ್ನತ್‌ ಕಶ್ಯಪ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರಲ್ಲದೆ ಅರ್ಚನಾ ದೇವಿ, ಪ್ರಾಶ್ವಿ ಚೋಪ್ರಾ, ಶಭ್ನಂ ಅವರನ್ನು ಕಡೆಗಣಿಸುವಂತಿಲ್ಲ. ಜತೆಗೆ ಅನುಭವಿ ಶಫಾಲಿ ಮತ್ತು ರಿಚಾ ಉಪಸ್ಥಿತಿ ತಂಡಕ್ಕೆ ವರವಾಗಿದೆ.

Advertisement

ಇದೇ ರೀತಿಯ ಸಾಂಘಿಕ ಪ್ರದರ್ಶನವನ್ನು ವಿಶ್ವಕಪ್‌ನಲ್ಲೂ ತೋರಿದಲ್ಲಿ ಭಾರತ ಕಪ್‌ ಎತ್ತುವುದರಲ್ಲಿ ಅನುಮಾನವಿಲ್ಲ.

ಭಾರತ ತಂಡ: ಶಫಾಲಿ ವರ್ಮ(ನಾಯಕಿ), ಶ್ವೇತಾ ಸೆಹ್ರಾವತ್‌ (ಉಪ ನಾಯಕಿ), ರಿಚಾ ಘೋಶ್‌(ವಿಕೆಟ್‌ ಕೀಪರ್‌), ಜಿ. ತಿೃಷಾ, ಸೌಮ್ಯಾ ತಿವಾರಿ, ಸೋನಿಯಾ ಮೆಹ್ದಿಯಾ, ಹರ್ಲಿ ಗಾಲಾ, ಹೃಶಿತಾ ಬಸು (ವಿಕೆಟ್‌ ಕೀಪರ್‌), ಸೋನಮ್‌ ಯಾದವ್‌, ಮನ್ನತ್‌ ಕಶ್ಯಪ್‌, ಅರ್ಚನಾ ದೇವಿ, ಪ್ರಾಶ್ವಿ ಚೋಪ್ರಾ, ಟಿಟಾಸ್‌ ಸಾದು, ಫಲಕ್‌ ನಾಜ್‌, ಶಭ್ನಂ ಎಂ.ಡಿ.

-ಸುಶ್ಮಿತಾ ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next