Advertisement

ಅತಿವೃಷ್ಟಿ ಹಾನಿ ಸಮೀಕ್ಷೆಗೆ ತಂಡ ರಚನೆ

05:25 PM Aug 26, 2018 | |

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ ಸಮೀಕ್ಷೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ 95 ಕೋಟಿ ರೂ.ಗಳಷ್ಟು ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಸಮೀಕ್ಷೆ ಇನ್ನೂ ನಡೆಯುತ್ತಿದ್ದು, ಸಂಪೂರ್ಣ ನಷ್ಟದ ವಿವರ ಇನ್ನೂ ಸಿದ್ದವಾಗಿಲ್ಲ ಎಂದರು.

Advertisement

ತೋಟಗಾರಿಕೆ ಹಾಗೂ ಕೃಷಿ ಬೆಳೆ ಹಾನಿ ಸಮೀಕ್ಷೆಗೆ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. ಅದೇ ರೀತಿ ಕಾಫಿ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಲು ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಯ ಜಂಟಿ ತಂಡ ರಚಿಸಲಾಗಿದೆ ಎಂದು ಹೇಳಿದರು.

ಕಾಫಿ ಮಂಡಳಿಯ ಉಪನಿರ್ದೇಶಕರನ್ನು ಕೊಡಗು ಜಿಲ್ಲೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಹಿನ್ನೆಲೆ ಕಾಫಿ ಮಂಡಳಿಯ ಕೆಳಗಿನ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದೇನೆ. ಅವರು ಈಗ ತಾತ್ಕಾಲಿಕವಾಗಿ ನಷ್ಟದ ಕುರಿತು ವರದಿ ನೀಡಿದ್ದಾರೆ. ಅವರು ಬೇರೆ ಬೇರೆ ಪ್ರದೇಶಗಳನ್ನು ವರ್ಗೀಕರಿಸಿ ನಷ್ಟದ ವರದಿ ಸಲ್ಲಿಸಿದ್ದಾರೆ. ವರದಿ ಅಪೂರ್ಣವಾಗಿರುವುದರಿಂದ ಸಮಗ್ರ ಸಮೀಕ್ಷೆ ನಡೆಸಿ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ನಿಂತಿದೆ. ಆದರೆ ಗುಡ್ಡಗಳಿಂದ ಈಗಲೂ ನೀರು ಇಳಿಯುತ್ತಿದೆ. ಆದುದರಿಂದ ಗುಡ್ಡ ಕುಸಿತ, ಮನೆಗಳು ಬೀಳುವುದು ನಡೆಯುತ್ತಿದೆ. ಹೆಚ್ಚಿನ ಮಳೆ ಆಗಿರುವುದರಿಂದಾಗಿ ನಷ್ಟ ಕುರಿತು ಸಮೀಕ್ಷೆ ನಡೆಸಲು ವಿಳಂಬವಾಗಿದೆ. ಶೀಘ್ರದಲ್ಲಿಯೇ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದರು

ಮಳೆಹಾನಿ ಪ್ರದೇಶಕ್ಕೆ  ಶಾಸಕ ಸಿ.ಟಿ.ರವಿ ಭೇಟಿ-ಪರಿಶೀಲನೆ
ಚಿಕ್ಕಮಗಳೂರು:
ಮಲೆನಾಡು ಪ್ರದೇಶಗಳಲ್ಲಿ ಈ ಭಾರಿ ಹೆಚ್ಚು ಮಳೆಯಾಗಿ ಅಪಾರ ನಷ್ಟವಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ತಾಲೂಕಿನ ಶಿರವಾಸೆ ಸಮೀಪದ ಸಿದ್ದಾಪುರ ಗ್ರಾಮದಲ್ಲಿ ರೈತ ಎಸ್‌.ಪಿ.ಜಗದೀಶ್‌ ಅವರಿಗೆ ಸೇರಿದ ಸುಮಾರು 4 ಎಕರೆ ಜಮೀನಿನಲ್ಲಿದ್ದ ಅಡಿಕೆ, ಕಾಫಿ, ಮೆಣಸಿನ ತೋಟಕ್ಕೆ ಗುಡ್ಡ ಕುಸಿದು ಅಪಾರವಾಗಿ ಹಾನಿಯಾಗಿರುವ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂತ್ರಸ್ತ ರೈತರಿಗೆ ಸ್ವಾಂತ್ವನ ಹೇಳಿದ ಅವರು ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಪಶ್ಚಿಮ ಘಟ್ಟ ಮತ್ತು ಮಲೆನಾಡಿನಲ್ಲಿ ಬಹುತೇಕ ರಸ್ತೆ ಸೇತುವೆಗಳು ಹಾಗೂ ತೋಟ ಮನೆಗಳು ಹಾನಿಯಾಗಿದೆ. ಇದಕ್ಕೆ ಅಧಿಕಾರಿಗಳು ನ್ಯಾಯಯುತವಾದ ಪರಿಹಾರ ದೊರಕಿಸಿಕೊಡಬೇಕಾಗಿದೆ. ಇಂತಹ ಹಾನಿ ಪ್ರದೇಶಗಳಿಗೆ ಮಾಹಿತಿ ತಿಳಿದ ತಕ್ಷಣ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕಾಗಿದೆ. 

Advertisement

ಮಳೆಯಿಂದ ಮಡಿಕೇರಿಯಲ್ಲಾದ ಘಟನೆಗಳಿಗೆ ಕಾರಣವೇನೆಂಬುದನ್ನು ತಜ್ಞರು ಈಗಾಗಲೇ ತಿಳಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಆ ರೀತಿಯಾಗದಂತೆ ರೆಸಾರ್ಟ್‌, ಹೋಂ-ಸ್ಟೇಗಳಿಗೆ ಕಡಿವಾಣ ಹಾಕಿ ಪರಿಸರಕ್ಕೆ ಪೂರಕವಾಗಿ ಚಿಂತನೆ ಚುರುಕುಗೊಳಿಸಬೇಕಾಗಿದೆ. ಸಿದ್ದಾಪುರ, ಬಿದುರುಗುಂಡಿ, ಶಿರವಾಸೆ, ಕಳವಾಸೆ ಈ ಭಾಗದಲ್ಲಿ 25 ವರ್ಷಗಳಿಂದ ಆಗದ ಮಳೆ ಈ ಬಾರಿ ಆಗಿದೆ. ಅದೇ ಈ ಅನಾಹುತಕ್ಕೆ ಕಾರಣವಾಗಿರಬಹುದೆಂದು ಹೇಳಿದರು. ಮುತ್ತೋಡಿ ಸಮೀಪದ ಬಾಳೆಹಳ್ಳಿಯ ಸೇತುವೆ ಸಂಪೂರ್ಣವಾಗಿ ಕುಸಿದ ಪ್ರದೇಶಕ್ಕೂ ಭೇಟಿ ನೀಡಿ, ಮೇಲಿನ ಹುಲುವತ್ತಿ ಭಾಗದಲ್ಲಿ ರಸ್ತೆ, ತೋಟಗಳು ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತ ರೈತರಿಗೆ ಧೈರ್ಯ ತುಂಬಿದರು.

ಜಿ.ಪಂ. ಸದಸ್ಯರಾದ ಕವಿತಾ ಲಿಂಗರಾಜು, ಜಸಿಂತ ಅನಿಲ್‌ ಕುಮಾರ್‌, ತಾ.ಪಂ. ಅಧ್ಯಕ್ಷ ಜಯಣ್ಣ, ಸದಸ್ಯರಾದ ಸಿದ್ದಾಪುರ ರಮೇಶ್‌, ಸುರೇಶ್‌, ತಹಶೀಲ್ದಾರ್‌ ನಂದಕುಮಾರ್‌, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ, ಕೃಷಿ, ತೋಟಗಾರಿಕೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next