ಹುಬ್ಬಳ್ಳಿ: ಬೋಧಕರಲ್ಲಿ ಕಲಿಕಾ ಪ್ರವೃತ್ತಿ ಇಲ್ಲದಿದ್ದರೆ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಸ್ಟಾಫ್ ಕಾಲೇಜ್ ನಿರ್ದೇಶಕ ಡಾ| ಹರೀಶ ರಾಮಸ್ವಾಮಿ ಹೇಳಿದರು. ಕಾಮತ ಯಾತ್ರಿ ನಿವಾಸದಲ್ಲಿ ಐಇಎಂಎಸ್ ಬಿ-ಸ್ಕೂಲ್ ಶುಕ್ರವಾರ ಆಯೋಜಿಸಿದ್ದ “ಸಂಶೋಧನೆಯ ವಿವಿಧ ಆಯಾಮಗಳ ದೃಷ್ಟಿಕೋನ ಕುರಿತು ಬೋಧಕರ ಅಭಿವೃದ್ಧಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಬೋಧಕರು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು. ಅವರು ಅಪ್‌ಡೇಟ್ ಇರದಿದ್ದರೆ, ಹೊಸ ಸಂಗತಿಗಳನ್ನು ಅರಿತುಕೊಳ್ಳದಿದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುವುದಿಲ್ಲ ಎಂದರು. ಒಬ್ಬ ಸೈನಿಕ ಒಬ್ಬ ವೈರಿಯನ್ನು ಕೊಲ್ಲಬಹುದು. ಆದರೆ, ಒಬ್ಬ ಬೋಧಕ ಸಮರ್ಪಕವಾಗಿ ಕಲಿಸದಿದ್ದರೆ ಒಂದು ತಲೆಮಾರನ್ನೇ ಸಾಯಿಸಬಹುದು.
ಬೋಧನೆ ತೃಪ್ತಿ ನೀಡುವ ವೃತ್ತಿಯಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ದಿಸೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಮುಖ್ಯ ಎಂದು ಹೇಳಿದರು. ಕೇವಲ ಪಠ್ಯಕ್ರಮ ಪೂರ್ಣ ಗೊಳಿಸುವುದಕ್ಕೆ ಸೀಮಿತರಾಗುವುದು ಬೇಡ. ಬೋಧಕರು ತಮ್ಮನ್ನು ಪರಾಮರ್ಷೆ ಮಾಡಿಕೊಳ್ಳುವುದು ಅವಶ್ಯ.
ಎಲ್ಲ ಶಿಕ್ಷಣ ಸಂಸ್ಥೆಗಳು ಬೋಧಕರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇದರಿಂದ ವೈಯಕ್ತಿಕ ಪ್ರಗತಿ ಸಾಧ್ಯವಾಗುತ್ತದೆ. ಇದು ಶಿಕ್ಷಣ ಸಂಸ್ಥೆಯ ಏಳ್ಗೆಗೂ ಪೂರಕ ಎಂದರು. ಇಂಟರ್‌ನೆಟ್ ಇದ್ದರೂ ಶಿಕ್ಷಕರ ನೆರವಿಲ್ಲದೆ ಯಾವುದೇ ವಿದ್ಯಾರ್ಥಿ ಸಾಧನೆ ಮಾಡಲಾಗುವುದಿಲ್ಲ.
ಅಂತರ್ಜಾಲದಿಂದ ಯಾವ ಮಾಹಿತಿ ಪಡೆದುಕೊಳ್ಳಬೇಕು ಹಾಗೂ ಯಾವ ಪ್ರಮಾಣದಲ್ಲಿ, ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬುದನ್ನು ತಿಳಿಸಿಕೊಡಲು ಶಿಕ್ಷಕರ ಅವಶ್ಯಕತೆಯಿದೆ ಎಂದರು. ಶಿಕ್ಷಣ ಎಂಬುದು ಉದ್ಯಮವಾಗುತ್ತಿದೆ. ಗಲ್ಲಿಗೊಂದರಂತೆ ಪಿಯು ವಿಜ್ಞಾನ ಕಾಲೇಜುಗಳು, ಬೀದಿಗೊಂದರಂತೆ ಐಎಎಸ್ ತರಬೇತಿ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ.
ಎಷ್ಟೋ ಶಾಲೆಗಳಲ್ಲಿ ಮಕ್ಕಳಿಗೆ ಆಟವಾಡಲು ಮೈದಾನಗಳೇ ಇಲ್ಲ. ಶಿಕ್ಷಣ ಎಂಬುದು ಹಣ ಗಳಿಕೆಗಾಗಿ ಎಂಬಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಐಇಎಂಎಸ್ ಬಿ- ಸ್ಕೂಲ್‌ನ ಸಹಾಯಕ ಪ್ರಾಧ್ಯಾಪಕ ರೋಹಿದಾಸ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲದ ಟಿಎಪಿಎಂಐ ಪ್ರಾಧ್ಯಾಪಕ ಡಾ| ದುರ್ಗಾಪ್ರಸಾದ ಎಂ., ಗೋವಾದ ವಿ.ಪಿ. ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಚಾರ್ಯ ಡಾ| ಎಂ.ಆರ್. ಪಾಟೀಲ, ಐಇಎಂಎಸ್ ಬಿ-ಸ್ಕೂಲ್ ನಿರ್ದೇಶಕ ಡಾ| ಶ್ರೀನಿವಾಸ ಪಾಟೀಲ, ಡಾ| ಅಲೋಕ ಗಡ್ಡಿ, ಪ್ರೊ| ಆರ್.ಎನ್. ನಾಯಕ ಇದ್ದರು.