Advertisement

ಬದಲಿಸಬೇಕಿದೆ ಬೋಧನೆ ಗ್ರಹಿಕೆ: ಕುಲಪತಿ ಹಲ್ಸೆ

05:06 PM Sep 12, 2021 | Team Udayavani |

ಕಲಬುರಗಿ: ಕಲಿಕೆಯಿಂದ ಕಲಿಕೆಗೆ ಬದಲಾಗಲು ಪಠ್ಯಕ್ರಮ ಸೇರಿದಂತೆ, ಪರೀಕ್ಷೆಗಳನ್ನು ನಡೆಸುವುದು ಹಾಗೂ ಮಾಹಿತಿ ವರ್ಗಾವಣೆ ಮೀರಿ “ನಾವು ನಮ್ಮ ಬೋಧನೆ ಗ್ರಹಿಕೆ ಬದಲಾಯಿಸಬೇಕಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ| ಶರಣಪ್ಪ ವಿ. ಹಲ್ಸೆ ಹೇಳಿದರು.

Advertisement

ಗಣೇಶೋತ್ಸವ ಹಬ್ಬದ ದಿನದಂದು ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಶತಮಾನೋತ್ಸವ ಭವನದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದ ಭಾಷಣ ಮಾಡಿದ ಪ್ರೊ| ಹಲ್ಸೆ , ನಮ್ಮ ಬೋಧನೆಯು ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಗೆ ಸಿದ್ಧಪಡಿಸುವುದಕ್ಕಿಂತ ಹೆಚ್ಚಿನ ಗುರಿ ಹೊಂದಬೇಕು. ಮುಖ್ಯವಾಗಿ ಬೋಧನೆಯು ವಿದ್ಯಾರ್ಥಿಗಳನ್ನು ಆಯಾ ವಿಭಾಗಗಳಲ್ಲಿ ವಿನೂತನವಾಗಿ ಯೋಚಿಸುವಂತೆ ಮಾಡಬೇಕು ಎಂದು ಹೇಳಿದರು.

ತಮ್ಮ ಬದುಕಿನಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕಬಲ್ಲ ಉನ್ನತ ಮಟ್ಟದ ವಿಜ್ಞಾನಿಗಳು, ಚಿಂತಕರು ಮತ್ತು ವಿದ್ವಾಂಸರನ್ನು ಹುಟ್ಟುಹಾಕಲು ಉನ್ನತ ಕಲಿಕಾ ಕೇಂದ್ರಗಳಲ್ಲಿನ ಪಾತ್ರ ಹಾಗೂ ಬೋಧನೆಯೇ ಪ್ರಮುಖವಾಗಿದೆ. ಹೀಗಾದಲ್ಲಿ ಚಿಂತಕರು ಮತ್ತು ಉನ್ನತ ಶ್ರೇಣಿ ವಿದ್ವಾಂಸರು ತಮ್ಮ ವೃತ್ತಿಯಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕಬಹುದು. ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ಸಹಾಯ ಮಾಡಬಹುದು. ವಿಶ್ವವಿದ್ಯಾಲಯಗಳ ಉಳಿವಿಗಾಗಿ ವಿದ್ಯಾರ್ಥಿಗಳಲ್ಲಿ ಉತ್ಪಾದಕ ಕಲಿಕೆ ಆಸಕ್ತಿ ಹಾಗೂ ಹೊಸತನ ಮುಂದುವರಿಸಲು ಸಂಬಂಧಿತ ಕೋರ್ಸ್‌ಗಳತ್ತ ಗಮನಹರಿಸುವುದು ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ| ಶರಬಸವಪ್ಪ ಅಪ್ಪ ಮಾತನಾಡಿ, ಸೆಪ್ಟೆಂಬರ್‌ 10ರಂದು ನಡೆದ ಘಟಿಕೋತ್ಸವ ಕಲ್ಯಾಣ ಕರ್ನಾಟಕ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿ ಪರಿಣಮಿಸಿದೆ. ಜ್ಞಾನ ಪ್ರಸಾರ ಮಾಡುವ ಉದಾತ್ತ ಉದ್ದೇಶ ಹೊಂದಿರುವ ಮೊದಲ ಖಾಸಗಿ ವಿಶ್ವವಿದ್ಯಾಲಯ ತನ್ನ ಮೊದಲ ಮತ್ತು ಎರಡನೇ ಘಟಿಕೋತ್ಸವವನ್ನು ಏಕಕಾಲದಲ್ಲಿ ನಡೆಸಿದೆ ಎಂದರು.

ಡಿ.ಲಿಟ್‌ ಪ್ರದಾನ: ಇದೇ ಸಂದರ್ಭದಲ್ಲಿ ಡಾ| ಶಿವರಾಜ ಶಾಸ್ತ್ರೀ ಹೇರೂರು, ಡಾ| ನೀಲಾಂಬಿಕಾ ಶೇರಿಕಾರ ಪೊಲೀಸ್‌ ಪಾಟೀಲ, ಡಾ| ಎಸ್‌.ಎಂ. ಹಿರೇಮಠ ಅವರಿಗೆ ವಿವಿ ಘಟಿಕೋತ್ಸವದಲ್ಲಿ ಡಿ.ಲಿಟ್‌ ಪದವಿ ಪ್ರದಾನ ಮಾಡಲಾಯಿತು. ಸಂಶೋಧನೆ ಮರುಕಳಿಸಲಿ: ಶರಣಬಸವ
ವಿವಿಯ ಎರಡನೇ ಘಟಿಕೋತ್ಸವದ ಭಾಷಣ ಮಾಡಿದ ಗುಲ್ಬರ್ಗ ವಿವಿ ಕುಲಪತಿ ಪ್ರೊ| ದಯಾನಂದ ಅಗಸರ, ದೇಶೀಯ ನವೀನ ಸಂಶೋಧನೆಯು ದೇಶದಲ್ಲಿ ಮತ್ತೂಮ್ಮೆ ಮರುಕಳಿಸಬೇಕಿದೆ.

Advertisement

ಹೀಗಾಗಿ ಉನ್ನತ ಶಿಕ್ಷಣ ಕೇಂದ್ರಗಳು ಮತ್ತು ಯುವ ವಿದ್ಯಾರ್ಥಿಗಳು ಭಾರತದ ಗತ ವೈಭವವನ್ನು ಮರಳಿ ತರುವ ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ ಎಂದರು. ಗ್ರಾಮೀಣ ಭಾರತದಲ್ಲಿ ಲಭ್ಯವಿರುವ ಅತಿ ಹೆಚ್ಚಿನ ಪೌಷ್ಟಿಕಾಂಶ ಮತ್ತು ಔಷಧೀಯ ಗಿಡಮೂಲಿಕೆಗಳು ಜಗತ್ತಿನಾದ್ಯಂತ ವಿಜ್ಞಾನಿಗಳ ಗಮನ ಸೆಳೆದಿವೆ. ಇತ್ತೀಚೆಯ ನವೀನ ಸೂಕ್ಷ್ಮಜೀವಿಗಳು ಮತ್ತು ಅವುಗಳ ಸಂಭಾವ್ಯ ಔಷಧೀಯ ಮತ್ತು ಕಾಸ್ಮೆಸ್ಯುಟಿಕಲ್‌ ಬಯೋಆಕ್ಟಿವ್‌ ಅಣುಗಳು ದೇಶದ ಅಂತರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಎಂದು ವಿವರಣೆ ನೀಡಿದ ಪ್ರೊ| ಹಲ್ಸೆ, ರಾಷ್ಟ್ರೀಯ ಸಂಸ್ಥೆಗಳಲ್ಲಿನ ವಿಜ್ಞಾನಿಗಳು ಈ ಆವಿಷ್ಕಾರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಕೋವಿಡ್‌-19 ವಿರುದ್ಧ ಹೋರಾಡಲು ಲಸಿಕೆಗಳನ್ನು ತಯಾರಿಸುವಲ್ಲಿ ಅವರ ಪ್ರಗತಿ ಅನೇಕ ಪ್ರಶಸ್ತಿಗಳನ್ನು ಗೆದ್ದಿವೆ ಎಂದು ಹೇಳಿದರು.

ಸಂಸದ ಡಾ| ಉಮೇಶ ಜಾಧವ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಡಾ| ಶರಣಬಸವಪ್ಪ ಅಪ್ಪ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಭಾಗದ ಶೈಕ್ಷಣಿಕ ಕ್ಷೇತ್ರ ಬಲವರ್ಧನೆಯಿಂದ ಸರ್ವಾಂಗೀಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರೊ| ಅಗಸರ ತಿಳಿಸಿದರು.

ಚಿನ್ನದ ಪದಕದೊಂದಿಗೆ ಪದವಿ ಪ್ರದಾನ: 2017-18ನೇ ಬ್ಯಾಚ್‌ನಲ್ಲಿ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 20 ಚಿನ್ನದ ಪದಕ ನೀಡಲಾಯಿತು.

ಮೊದಲ ಘಟಿಕೋತ್ಸವದಲ್ಲಿ 352 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು. 2018-19ನೇ ಬ್ಯಾಚ್‌ನ 22 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು. ಎರಡನೇ ಘಟಿಕೋತ್ಸವದಲ್ಲಿ 527 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾ ಸ್ವಾಮೀಜಿ ಮಾತನಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ರಾದ ಪೂಜ್ಯ ಮಾತೋಶ್ರೀ ಡಾ| ದಾಕ್ಷಾಯಿಣಿ ಅವ್ವ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್‌ ಸದಸ್ಯ ಶಶೀಲ.ಜಿ.ನಮೋಶಿ, ಉಪಕುಲಪತಿ ಪ್ರೊ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ ಘಟಿಕೋತ್ಸವದ ಪ್ರಾರಂಭದ ಮೊದಲು ನಡೆದ ಘಟಿಕೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕುಲಸಚಿವ (ಮೌಲ್ಯಮಾಪನ) ಡಾ| ಲಿಂಗರಾಜ ಶಾಸ್ತ್ರೀ ಬೆಳ್ಳಿ ಗದೆ ಹೊತ್ತು ಮೆರವಣಿಗೆಯಲ್ಲಿ ಮೊದಲಿಗರಾಗಿ ಹೆಜ್ಜೆ ಹಾಕಿದರು. ಕುಲಾಧಿ ಪತಿ, ಕುಲಪತಿ, ಉಪಕುಲಪತಿ, ಕುಲಸಚಿವರು ಸೇರಿದಂತೆ ಎಲ್ಲ ವಿಭಾಗಗಳ ಡೀನ್‌ಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು. ವಿವಿ ಉಪಕುಲಪತಿ ಡಾ| ನಿರಂಜನ್‌ ವಿ.ನಿಷ್ಠಿ ಸ್ವಾಗತಿಸಿದರು, ವಿಶ್ವವಿದ್ಯಾಲಯ ಕುಲಸಚಿವ ಡಾ| ಅನಿಲಕುಮಾರ ಬಿಡವೆ ವಂದಿಸಿದರು

ಆರು ಗಣ್ಯರಿಗೆ ಡಾಕ್ಟರೇಟ್‌ ಪ್ರದಾನ
ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದ ಪೂಜ್ಯ ಬಸವರಾಜಪ್ಪ ಅಪ್ಪ ಶತಮಾನೋತ್ಸವ ಭವನದಲ್ಲಿ ನಡೆದ ಪ್ರಥಮ ಹಾಗೂ ದ್ವಿತೀಯ ಘಟಿಕೋತ್ಸವದಲ್ಲಿ ಆರು ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಪ್ರಥಮ ಘಟಿಕೋತ್ಸವದಲ್ಲಿ ಶಿಕ್ಷಣ ತಜ್ಞ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ, ಮಾಜಿ ಸಂಸದ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಎರಡನೇ ಘಟಿಕೋತ್ಸವದಲ್ಲಿ ಸಮಾಜಮುಖೀ ಸೇವೆ ಮತ್ತು ಧರ್ಮ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಗುರುತಿಸಿ ಚೌದಾಪುರಿ ಹಿರೇಮಠದ ಪೂಜ್ಯ ರಾಜಶೇಖರ ಶಿವಾಚಾರ್ಯರು, ಕೈಗಾರಿಕೋದ್ಯಮಿ ಲಿಂಗರಾಜ ಸಾತಲಿಂಗಪ್ಪ ಪಾಟೀಲ, ಶಾಸಕ ಮತ್ತು ಕೈಗಾರಿಕೋದ್ಯಮಿ ಬಿ.ಜಿ.ಪಾಟೀಲ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದಿಂದ ಯಶಸ್ವಿಯಾಗಿ ಹೊರಬಂದ ವಿದ್ಯಾರ್ಥಿಗಳು ಜೀವನ ಪರ್ಯಂತ ಕಲಿಯುವಂತೆ ಇರಬೇಕು. ಜೀವನದಲ್ಲಿ ಅನಿಶ್ಚಿತತೆ, ಸವಾಲು ಎದುರಿಸುವ ವಿಶ್ವಾಸ ಹೊಂದಿರಬೇಕು. ಪ್ರಮುಖವಾಗಿ ಯಶಸ್ಸು ಮತ್ತು ವೈಫಲ್ಯಗಳನ್ನು ಸರಿಯಾಗಿ, ಸಕಾರಾತ್ಮಕ ಮನೋಭಾವದಿಂದ ನಿಭಾಯಿಸಬೇಕು.
ಪ್ರೊ| ಶರಣಪ್ಪ ವಿ. ಹಲ್ಸೆ,
ಕುಲಪತಿ, ದಾವಣಗೆರೆ ವಿವಿ

ವಿವಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಸ್ತು, ಶ್ರಮ, ಬದ್ಧತೆ ಎತ್ತಿಹಿಡಿದಿರುವುದು ಮಾದರಿಯಾಗಿದೆ. ಯಶಸ್ವಿ ವಿದ್ಯಾರ್ಥಿಗಳಲ್ಲಿ ಇರುವ ಅತ್ಯುತ್ತಮವಾದದ್ದನ್ನು ಹೊರತರಲು ಹಾಗೂ ಸಾಂಕ್ರಾಮಿಕದಂತಹ ರೋಗ ಹರಡುತ್ತಿರುವ ಸಮಯದಲ್ಲೂ ಪರೀಕ್ಷೆ ಕುರಿತಂತೆ ಶಿಕ್ಷಕರು ತೋರಿರುವ ಬದ್ಧತೆ, ಪರಿಶ್ರಮ ಅಭಿವೃದ್ಧಿಗೆ ಪೂರಕವಾಗಿದೆ.
ಡಾ| ಶರಣಬಸವಪ್ಪ ಅಪ್ಪ,
ಕುಲಾಧಿಪತಿ, ಶರಣಬಸವ ವಿವಿ

Advertisement

Udayavani is now on Telegram. Click here to join our channel and stay updated with the latest news.

Next