Advertisement

ಹೊಸ ಹಾದಿಯ ಹೊಸ್ತಿಲಲ್ಲಿ ರಾಷ್ಟ್ರ ನಿರ್ಮಾತೃಗಳು 

11:01 PM Sep 04, 2021 | Team Udayavani |

ಖ್ಯಾತ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ಗೆ ಆತನ ಶಿಕ್ಷಕರೊಬ್ಬರು ತರಗತಿಯಲ್ಲಿ ವಾಟರ್‌ಲೂ ಕದನ ಯಾವ ವರ್ಷ ನಡೆಯಿತು ಎಂದು ಕೇಳುತ್ತಾರೆ. ಐನ್‌ಸ್ಟೀನ್‌, ನನಗೆ ಗೊತ್ತಿಲ್ಲ ಎಂದು ಉತ್ತರಿಸುತ್ತಾನೆ. ಅದು ಹೇಗೆ ಸಾಧ್ಯ, ನಾನು ಕಲಿಸಿದ್ದೇನಲ್ಲ ಎಂದು ಶಿಕ್ಷಕರು ಪ್ರಶ್ನಿಸಿದರೆ ಐನ್‌ಸ್ಟೀನ್‌, ನೀವು ಕಲಿಸಿದ್ದೀರಿ, ಆದರೆ ನಾನು ಅದನ್ನು ಮರೆತಿದ್ದೇನೆ ಎಂದು ನೇರವಾಗಿ ಉತ್ತರಿಸುತ್ತಾನೆ. ಅಷ್ಟೇ ಅಲ್ಲದೇ ನೀವು ಆ ಕದನ ಯಾವ ವರ್ಷ ನಡೆಯಿತು? ಎಂದು ಕೇಳುವ ಬದಲಿಗೆ, ಅದು ಯಾಕಾಗಿ ನಡೆಯಿತು? ಅದನ್ನು ಹೇಗೆ ತಪ್ಪಿಸಬಹುದಿತ್ತು? ಎಂದು ಕೇಳುತ್ತಿದ್ದರೆ, ಆ ಬಗ್ಗೆ ನಾನು ತುಂಬಾ ಆಸಕ್ತಿಯಿಂದ ಯೋಚಿಸಿ ಉತ್ತರಿಸಲು ಪ್ರಯತ್ನಿಸುತ್ತಿದ್ದೆ. ಈ ರೀತಿಯ ಘಟನೆಗಳ ಹೆಸರುಗಳು ಮತ್ತು ಅಂಕಿ ಅಂಶಗಳನ್ನು ನೆನಪಿಟ್ಟು ಕೊಳ್ಳುವುದರಲ್ಲಿ ಏನೊಂದೂ ಅರ್ಥ ವಿರುವುದಿಲ್ಲ ಎಂದು ನನಗನಿಸುತ್ತದೆ ಎನ್ನುತ್ತಾನೆ. ಮುಂದೆ ಇದೇ ವಿಷಯ ದೊಡ್ಡ ವಿವಾದವಾಗಿ ಆತ ಶಾಲೆಯಿಂದ ವಜಾಗೊಳ್ಳಲು ಕಾರಣವಾಗು ತ್ತದೆ. ಹತ್ತೂಂಬತ್ತನೆಯ ಶತಮಾನದ ಉತ್ತರಾರ್ಧ ದಲ್ಲಿ ಐನ್‌ಸ್ಟೀನ್‌, ಶಿಕ್ಷಣದ ಬಗ್ಗೆ ಓರ್ವ ವಿದ್ಯಾರ್ಥಿಯ ದೃಷ್ಟಿಕೋನದಲ್ಲಿ ಯಾವ ವಿಚಾರವನ್ನು ಪ್ರತಿಪಾದಿಸಿದನೋ ಅದುವೇ ಇಂದು ಶಿಕ್ಷಣದ ಹೊಸ ಪರಿಕಲ್ಪನೆಯಲ್ಲಿ ಮೂಡಿಬಂದಿದೆ.

Advertisement

ಓರ್ವ ಮಾಮೂಲಿ ಶಿಕ್ಷಕ ಮಾಹಿತಿಯನ್ನು ತನ್ನ ವಿದ್ಯಾರ್ಥಿಗಳಿಗೆ ಹಾಗೆಯೇ ವರ್ಗಾಯಿಸುತ್ತಾನೆ. ಉತ್ತಮ ಶಿಕ್ಷಕ ವಿಷಯವನ್ನು ವಿವರಿಸಿ ಹೇಳು ತ್ತಾನೆ. ಇನ್ನೂ ಉತ್ತಮ ಶಿಕ್ಷಕ ಅದನ್ನು ಪ್ರಮಾಣೀ ಕರಿಸುತ್ತಾನೆ. ಆದರೆ ಮಹಾನ್‌ ಶಿಕ್ಷಕನೋರ್ವ ವಿದ್ಯಾರ್ಥಿಗಳಿಗೆ ತಾವೇ ಕಲಿತುಕೊಳ್ಳಲು ಪ್ರೇರಣೆ ಯಾಗುತ್ತಾನೆ ಎಂಬ ಜನಪ್ರಿಯ ಮಾತೊಂದು ಶಿಕ್ಷಣ ವಲಯದಲ್ಲಿದೆ. ಶಿಕ್ಷಕ ಯಾವತ್ತೂ ಮಹಾನ್‌ ಶಿಕ್ಷಕನೇ ಆಗಿರುವ ಅಗತ್ಯ ಇರುವುದ ರಿಂದ ಶಿಕ್ಷಣದ ಹೊಸ ಪರಿಕಲ್ಪನೆಗಳು ಇದನ್ನು ಸಾಕಾರಗೊಳಿಸಲು ಇಂಬು ನೀಡುತ್ತವೆ. “ಗುರುವಿನ ಗುಲಾಮನಾಗುವ ತನಕ ದೊರೆಯ ದಣ್ಣ ಮುಕುತಿ’ ಎಂಬ ದಾಸರ ವಾಣಿಯು ಕಲಿಯುವವ ಮತ್ತು ಕಲಿಸುವಾತನ ನಡುವಿನ ಗುರುತ್ವ ಕೇಂದ್ರವು ಗುರುವಿನತ್ತ ವಾಲಿಕೊಂಡಿರು ವುದನ್ನು ಹೇಳುತ್ತದೆ. ಅಂದರೆ ಪ್ರಾಚೀನ ಪರಿಕಲ್ಪನೆಯಲ್ಲಿ ಶಿಕ್ಷಕ ಕೇಂದ್ರಿತ ಶಿಕ್ಷಣ ಪದ್ಧತಿ ಯಿತ್ತು. ಬದಲಾದ ಶೈಕ್ಷಣಿಕ ಪರಿಕಲ್ಪನೆಯಲ್ಲಿ ಇದೇ ಗುರುತ್ವ ಕೇಂದ್ರವು ಕಲಿಯು ವಾತನ ಎಂದರೆ ವಿದ್ಯಾರ್ಥಿಯತ್ತ ಹೆಚ್ಚು ವಾಲಿ ಕೊಂಡಿದೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳಿಬ್ಬರಲ್ಲಿ ವಿದ್ಯಾರ್ಥಿ ಸ್ವಾಯತ್ತೆಯ ಕಡೆಗೆ ಹೆಚ್ಚಿನ ಮಹತ್ವವನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂಬುದು ಇದರ ಅರ್ಥ.

ದೇಶದ ಶಿಕ್ಷಣದ ದೃಷ್ಟಿಕೋನವನ್ನು ನಿರ್ಧರಿಸುವು ದಕ್ಕಾಗಿ ಕೇಂದ್ರ ಸರಕಾರವು 1964ರಲ್ಲಿ ರಚಿಸಿದ ಕೊಠಾರಿ ಶಿಕ್ಷಣ ಆಯೋಗದ ವರದಿಯಲ್ಲಿ ಹೇಳಿದಂತೆ, ದೇಶದ ಭವಿಷ್ಯ ತರಗತಿಗಳಲ್ಲಿ ನಿರ್ಮಾಣ ಗೊಳ್ಳುತ್ತದೆ ಎಂಬ ಪರಿಕಲ್ಪನೆಯು ಹೆಚ್ಚು ಅರ್ಥ ವಿಸ್ತರಣೆಯನ್ನು ಪಡೆದುಕೊಂಡಿದೆ. ಅಂದಿನ ಜ್ಞಾನ ಸಂಪನ್ನರಾದ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಬಳಿಯಿದ್ದ ಜ್ಞಾನ ಸಂಪತ್ತನ್ನು ವರ್ಗಾಯಿಸಲು ತರಗತಿ ಕೊಠಡಿಯೊಳಗೆ ಕರಿಹಲಗೆ, ಸೀಮೆಸುಣ್ಣ, ಪಠ್ಯಪುಸ್ತಕಗಳ ನೆರವಿನಿಂದ ನಡೆಸುತ್ತಿದ್ದ ಬೋಧನ ಪರಿಕಲ್ಪನೆಯು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಜಾರಿ ವೇಳೆಗೆ ಅನಿವಾರ್ಯವಾಗಿ ಸಾಕಷ್ಟು ಬದಲಾವಣೆಯನ್ನು ಪಡೆದುಕೊಂಡಿದೆ. ಇಂದಿನ ಶಿಕ್ಷಣ ನೀತಿಯ ಪರಿಕಲ್ಪನೆಯಂತೆ ಜ್ಞಾನವನ್ನು ವರ್ಗಾಯಿಸುವುದರ ಬದಲಿಗೆ ಜ್ಞಾನ ಸಂಪಾದನೆಯ ಕಡೆಗೆ ಶಿಕ್ಷಕರು ಒತ್ತು ನೀಡಬೇಕಾಗಿದೆ. ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯಬಯಸುವ ಗ್ರಾಹಕರಾಗಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಾತಿ ಪಡೆಯುತ್ತಿಲ್ಲ. ಅವರಿಂದು ಜ್ಞಾನ ಸಂಪಾದಿಸುವ ಕ್ರಿಯಾಶೀಲ ಚೈತನ್ಯಗಳಾಗಿ ಶಿಕ್ಷಕರೊಂದಿಗಿರುತ್ತಾರೆ. ಈ ಜ್ಞಾನ ಸಂಪಾದನೆಯ ಪ್ರಕ್ರಿಯೆಯಲ್ಲಿ ಶಿಕ್ಷಕರ ಸಹಕಾರವನ್ನು ಅವರು ಬಯಸುತ್ತಿದ್ದಾರೆ.

ಇಂದು ಶೈಕ್ಷಣಿಕ ಪರಿಸರವು ತರಗತಿ ಕೊಠಡಿ ಯೊಳಗೆ ಸೀಮಿತಗೊಳ್ಳದೆ ವಿದ್ಯಾರ್ಥಿಯ ಮನೆಗೆ, ಆತ ಬದುಕುವ ಪರಿಸರಕ್ಕೆ, ಅಷ್ಟೇ ಏಕೆ ಅತ್ಯಾಧುನಿಕ ಕಲಿಕ ತಂತ್ರಜ್ಞಾನದ ಮೂಲಕ ಇಡೀ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದೆ. ಅದೇ ರೀತಿ ಜ್ಞಾನವು ಪುಸ್ತಕಗಳಿಗೆ ಸೀಮಿತಗೊಳ್ಳದೆ ಇ- ತಂತ್ರಜ್ಞಾನದ ಮೂಲಕವೂ ಲಭಿಸುತ್ತಿದೆ. ಇದರಿಂದಾಗಿ ಶಿಕ್ಷಕರ ಪಾತ್ರವೂ ಬದಲಾಗುತ್ತಿದೆ. ಅದನ್ನೇ ಹೊಸ ಶಿಕ್ಷಣ ನೀತಿಯಲ್ಲಿ “ಶಿಕ್ಷಣಾರ್ಥಿ ಕೇಂದ್ರಿತ ಅನುಸಂಧಾನ’ ಎನ್ನಲಾಗುತ್ತಿದೆ. ಇದೇ ಧೋರಣೆಗೆ ಸರಿಹೊಂದುವ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ. ಶಿಕ್ಷಕರ ಪರಂಪರಾಗತ “ಚಾಕ್‌ ಆ್ಯಂಡ್‌ ಟಾಕ್‌’ ಧೋರಣೆಯನ್ನು ಬದಲಾಯಿಸಲು ಸೇವಾಂತರ್ಗತ ತರಬೇತಿ ನೀಡಲಾಗುತ್ತಿದೆ. ಉಪನಿಷತ್ತುಗಳಲ್ಲಿ ಪ್ರತಿಪಾದಿಸಿದ “ತಮಸೋ ಮಾ ಜ್ಯೋತಿ ರ್ಗಮಯ’ ನಿಜವಾದ ಅರ್ಥದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಅಂಧಕಾರವನ್ನು ತೊಲಗಿಸುವ ಹಾದಿಯಲ್ಲಿ ವಿದ್ಯಾರ್ಥಿಯೇ ಜ್ಞಾನವೆಂಬ ಬೆಳಕನ್ನು ಕಂಡು ಹಿಡಿಯುವ, ಅನ್ವೇಷಣ ಪ್ರವೃತ್ತಿಯತ್ತ ಪ್ರೋತ್ಸಾಹ ನೀಡುವ, ಅವಕಾಶ ಕಲ್ಪಿಸುವ, ಮಾರ್ಗದರ್ಶನ ನೀಡುವ ಹೊಸ ಪಾತ್ರದಲ್ಲಿ ಶಿಕ್ಷಕರು ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸಾಕಾರಗೊಳಿಸಲು ಗುಂಪು ಚಟುವಟಿಕೆ, ಗುಂಪು ಚರ್ಚೆ, ಇ-ವಾಚನಾಲಯಗಳೂ ಸೇರಿದಂತೆ ವಾಚನಾಲಯಗಳ ಸಮರ್ಪಕ ಬಳಕೆ, ಸ್ವ-ಅಧ್ಯಯನ ಪ್ರವೃತ್ತಿ, ಬೋಧನ ವ್ಯವಸ್ಥೆಯಲ್ಲಿ ಕಲಿಯುವಾತನ ಸಕ್ರಿಯ ತೊಡಗಿಸಿಕೊಳ್ಳುವಿಕೆ, ಅಗತ್ಯವಿರುವ ಕಲಿಕ ಸಾಮಗ್ರಿಗಳನ್ನು ಸಂಪಾದಿಸಿಕೊಳ್ಳುವ ಅವಕಾಶಗಳನ್ನು ಗುರುತಿಸುವ ಕೌಶಲವನ್ನು ಶಿಕ್ಷಕರು ಪ್ರೋತ್ಸಾಹಿಸಬೇಕಿದೆ. ಸ್ವತಂತ್ರವಾಗಿ ಯೋಚಿಸುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಎಲ್ಲವುಗಳಿಗಿಂತ ಮುಖ್ಯವಾಗಿ ಪ್ರಶ್ನಿಸುವ ಮನೋಧರ್ಮವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಾ ಹೋದಾಗ ಅಂಥ ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ಮಹಾನ್‌ ಶಿಕ್ಷಕರೆನಿಸಿಕೊಳ್ಳುತ್ತಾರೆ.

ಶಿಕ್ಷಕರ ದಿನಾಚರಣೆ ಪ್ರತಿಯೊಬ್ಬ ಶಿಕ್ಷಕನಿಗೂ ತನ್ನ ವೃತ್ತಿಗೆ ಮತ್ತೂಮ್ಮೆ ಸಮರ್ಪಿಸಿಕೊ ಳ್ಳಲು ನೆನಪಿಸುತ್ತಿದೆ. ಸರಿಸುಮಾರು ಎರಡು ವರ್ಷಗಳಿಂದೀಚೆಗೆ ಜಗತ್ತಿನಾದ್ಯಂತ ಬಾಧಿಸಿರುವ ಕೊರೊನಾ ಎಂಬ ಸಾಂಕ್ರಾಮಿಕ ಪಿಡುಗು, ಬದಲಾವಣೆಯ ಹಾದಿಯಲ್ಲಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ತುಳಿಯಬೇಕಾದ ಹೊಸ ಹಾದಿಯ ಮುನ್ನೋಟವನ್ನಷ್ಟೆ ನೀಡಿದೆ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಮಾತಿನಂತೆ ಸಾಂಪ್ರದಾಯಿಕ ಶಿಕ್ಷಣ ಸಿದ್ಧಾಂತದೊಡನೆ, ತಂತ್ರಜ್ಞಾನ ಆಧರಿತ, ವಿದ್ಯಾರ್ಥಿ ಕೇಂದ್ರಿತ, ಆಧುನಿಕ ಶಿಕ್ಷಣ ಸಿದ್ಧಾಂತದ ಪರಿಕಲ್ಪನೆಗಳು ಜತೆಜತೆಯಾಗಿ ಸಾಗಬೇಕಿದೆ ಎಂಬ ಸಂದೇಶವನ್ನು ಕೋವಿಡ್‌-19 ನೀಡಿದೆ. ಓರ್ವ ಯಶಸ್ವಿ ಶಿಕ್ಷಕ ಆಯಾ ಸನ್ನಿವೇಶಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿ ಶೈಕ್ಷಣಿಕ ಪ್ರಕ್ರಿಯೆಯನ್ನು ಮುಂದು ವರಿಸಿಕೊಂಡು ಹೋಗುವಂತೆ ಈ ಸಂದರ್ಭದಲ್ಲೂ ನಿಶ್ಚಿತವಾಗಿಯೂ ಶಿಕ್ಷಕರು ಯಶಸ್ಸು ಸಾಧಿಸುತ್ತಾರೆ ಎಂಬ ಭರವಸೆ ಇದೆ.

Advertisement

ಮತ್ತೂಮ್ಮೆ ಶಾಲಾ ಕಾಲೇಜುಗಳ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಭೌತಿಕ ತರಗತಿ ಗಳಿಗೆ ಹಾಜರಾಗುತ್ತಿದ್ದಾರೆ. ಪಾಠ ಪ್ರವಚನಗಳು  ನಿರಾತಂಕವಾಗಿ ನಡೆಯಲಿ. ವಿನೂತನ ಬೋಧನ ವಿಧಾನಗಳನ್ನು ಅಳವಡಿಸಿಕೊಂಡು ತರಗತಿ ಕೊಠಡಿಯೊಳಗೆ ರಾಷ್ಟ್ರದ ಭವಿಷ್ಯ ನಿರ್ಮಾಣ ಮಾಡುವ ಗುರುತರ ಹೊಣೆಗಾರಿಕೆಯನ್ನು ಶಿಕ್ಷಕ ಸಮುದಾಯ ಯಶಸ್ವಿಯಾಗಿ ನಿರ್ವಹಿಸಲಿ ಎಂದು ಆಶಿಸೋಣ.

 

ಬಿ.ವಿ. ಸೂರ್ಯನಾರಾಯಣ

ಉಪನ್ಯಾಸಕರು,

ಸರಕಾರಿ ಪ.ಪೂ.ಕಾಲೇಜು,

ಸವಣೂರು

Advertisement

Udayavani is now on Telegram. Click here to join our channel and stay updated with the latest news.

Next