ಹುಬ್ಬಳ್ಳಿ: ವಿವಿಧ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಶಿಕ್ಷಕಿಯರು ಹಾಗೂ ಮಹಿಳಾ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಸೋಮವಾರ ಚಿಟಗುಪ್ಪಿ ಆಸ್ಪತ್ರೆ ಆರಂಭವಾಯಿತು.
ಕ್ಯಾನ್ಸರ್ (ಬಾಯಿ, ಗರ್ಭಕೊರಳು ಹಾಗೂ ಸ್ತನ ಕ್ಯಾನ್ಸರ್), ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ರಕ್ತದೊತ್ತಡ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಶಿಕ್ಷಕಿಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಬ್ಲಾಕ್‌ನ ಶಿಕ್ಷಕಿಯರ ಆರೋಗ್ಯ ತಪಾಸಣೆಗಾಗಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ಒಂದು ತಿಂಗಳವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಸರಕಾರಿ ಶಾಲೆಯ ಶಿಕ್ಷಕಿಯರು, ಮಹಿಳಾ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಎರಡು ಶಿಕ್ಷಣ ಬ್ಲಾಕ್‌ನ ಸುಮಾರು 2200 ಶಿಕ್ಷಕಿಯರು, ಮಹಿಳಾ ಸಿಬ್ಬಂದಿ ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ. 30 ವರ್ಷ ದಾಟಿ ಪ್ರತಿಯೊಬ್ಬ ಶಿಕ್ಷಕಿಯೂ ಕೂಡ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಒಳಗಾಗಬೇಕು. ಸಕ್ಕರೆ ಕಾಯಿಲೆ, ರಕ್ತದೊತ್ತಡಂತಹ ತಪಾಸಣೆ ಕಾಲ ಕಾಲಕ್ಕೆ ಮಾಡಿಸಿಕೊಳ್ಳುತ್ತಾರೆ. ಆದರೆ ಹೃದಯ ಸಂಬಂಧಿತ, ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಕಾಯಿಲೆ ಉಲ್ಬಣಗೊಂಡ ನಂತರ ತಪಾಸಣೆ ಚಿಕಿತ್ಸೆಗೆ ಒಳಗಾಗುತ್ತಾರೆ. ಇದರಿಂದ ಚಿಕಿತ್ಸೆಗೆ ಹೆಚ್ಚು ಕಾಲ ಹಿಡಿಯುತ್ತದೆ. ಕೆಲವೊಮ್ಮೆ ಪರಿಸ್ಥಿತಿ ಚಿಂತಾಜನಕವಾದಾಗ ಆಸ್ಪತ್ರೆಗೆ ಹೋಗುವವರಿದ್ದು, ಇದು ಆಗಬಾರದು. ಕಾಯಿಲೆ ಆರಂಭ ಹಂತದಲ್ಲಿದ್ದರೆ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಸರಕಾರ ಈ ನಿರ್ಧಾರ ಕೈಗೊಂಡಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಉಪನಿರ್ದೇಶಕ.
ಪಾಲಿಕೆ ಮುಖ್ಯ ವೈದ್ಯಕೀಯ ಮುಖ್ಯಾಧಿಕಾರಿ ಡಾ| ಶ್ರೀಧರ ದಂಡಪ್ಪನವರ ಮಾತನಾಡಿ, ನಿತ್ಯ 50 ಶಿಕ್ಷಕಿಯರ ತಪಾಸಣೆ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಮುನ್ನೆಚ್ಚರಿಕೆಯು ಚಿಕಿತ್ಸೆಗಿಂತ ಅತೀ ಮುಖ್ಯ ಎನ್ನುವ ಕಾರಣಕ್ಕೆ ಸರಕಾರ ಈ ಯೋಜನೆ ರೂಪಿಸಿದೆ. ಸರಕಾರದ ಈ ಸೌಲಭ್ಯಗಳನ್ನು ಶಿಕ್ಷಕಿಯರು ಸದ್ಬಳಕೆ ಮಾಡಿಕೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ ಎಂದರು.
ಸುಮಾರು ಏಳೆಂಟು ವರ್ಷಗಳ ಹಿಂದೆ ಈ ರೀತಿ ಶಿಕ್ಷಕಿಯರ ಆರೋಗ್ಯ ತಪಾಸಣೆ ಮಾಡಿಸಿದ್ದರು. ಇದೀಗ ಗ್ರಾಮೀಣ ಭಾಗದ ಶಿಕ್ಷಕಿಯರಿಗೂ ಈ ಸೌಲಭ್ಯ ದೊರೆಯುತ್ತಿದೆ. ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಕೆಲವರು ಕಾಯಿಲೆಯ ಹೆದರಿಕೆಯಿಂದಾಗಿ ತಪಾಸಣೆಯಿಂದ ದೂರ ಉಳಿಯುತ್ತಿದ್ದವರು ಅನಿವಾರ್ಯವಾಗಿ ತಪಾಸಣೆಗೆ ಒಳಗಾಗಬೇಕು.
ಈ ಸಂದರ್ಭದಲ್ಲಿ ಏನಾದರೂ ಸಮಸ್ಯೆಯಿದ್ದರೆ ಆದಷ್ಟು ಬೇಗ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ ಎಂದು ಶಿಕ್ಷಕಿ ಸ್ಮಿತಾ ರಾಯಲಕೇರಿ ಎನ್ನುವವರು ಅಭಿಪ್ರಾಯಪಟ್ಟರು. ಜಿಲ್ಲಾ ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕದ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.