Advertisement

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಆಮೆಗತಿ

06:00 AM Oct 27, 2018 | Team Udayavani |

ಬೆಂಗಳೂರು: ಕುಂಟುತ್ತ ಸಾಗುತ್ತಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಒಂದೊಂದೇ ವಿಘ್ನಗಳು ಎದುರಾಗುತ್ತಿವೆ. ಸಾಫ್ಟ್ವೇರ್‌ನ ತಾಂತ್ರಿಕ ದೋಷ ಒಂದೆಡೆಯಾದರೆ, ರಾಜಕೀಯ ನಾಯಕರ ಒತ್ತಡ ಇನ್ನೊಂದೆಡೆ. ಇದರಿಂದ ತೊಂದರೆ ಎದುರಿಸುತ್ತಿರುವ ಶಿಕ್ಷಕರು ಸುಮಾರು 79 ಸಾವಿರ ಮಂದಿ! ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಇತ್ತೀಚೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆದರೆ, ವರ್ಗಾವಣೆ ಸಾಫ್ಟ್ವೇರ್‌ ದೋಷದಿಂದ ನಿಗದಿತ ದಿನಾಂಕದಂದು ಹೆಚ್ಚುವರಿ ಶಿಕ್ಷಕರ ಪಟ್ಟಿ, ಕೋರಿಕೆ ಮತ್ತು ಕಡ್ಡಾಯ ವರ್ಗಾವಣೆಯ ತಾತ್ಕಾಲಿಕ ಆದ್ಯತಾ ಪಟ್ಟಿ ಪ್ರಕಟಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಪಟ್ಟಿ ಅ.22ರಂದು ಪ್ರಕಟಿಸಬೇಕಿತ್ತು. ಆದರೆ, 24ರ ಸಂಜೆ ವೇಳೆಗೆ ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟವಾಗಿದೆ.

Advertisement

ರಾಜ್ಯಾದ್ಯಂತ 1,458 ಮಂದಿ ಹೆಚ್ಚುವರಿ ಶಿಕ್ಷಕರು ಇರುವುದು ಪಟ್ಟಿಯಿಂದ ಗೊತ್ತಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಸಂಬಂಧ ಘಟಕದೊಳಗಿನ ಮತ್ತು ಹೊರಗಿನ ತಾತ್ಕಾಲಿಕ ಆದ್ಯತೆ ಪಟ್ಟಿ ಕೂಡ ನಿಗದಿತ ದಿನಾಂಕ  ದಂದು ಬಿಡುಗಡೆಯಾಗಿಲ್ಲ. ತಾತ್ಕಾಲಿಕ ಆದ್ಯತಾ ಪಟ್ಟಿ ಹಾಗೂ ಹೆಚ್ಚುವರಿ ಶಿಕ್ಷಕರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದರೂ, ತಾತ್ಕಾಲಿಕ ವೇಳಾಪಟ್ಟಿಯಲ್ಲಿ ದಿನಾಂಕದ ವ್ಯತ್ಯಾಸವಾಗುತ್ತಿದೆ.

ಸಾಫ್ಟ್ವೇರ್‌ ದೋಷ: ರಾಜ್ಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಕಾರ್ಯ ಭಾರ, ಸೇವಾ  ಜ್ಯೇಷ್ಠತೆ ಹಾಗೂ ವರ್ಗಾವಣೆ ಸಹಿತವಾಗಿ ಎಲ್ಲ ಮಾಹಿತಿಯನ್ನು ಸಾಫ್ಟ್ವೇರ್‌ ಮೂಲಕ ಆನ್‌ಲೈನ್‌ನಲ್ಲಿ ಪಡೆಯಲಾಗುತ್ತದೆ. ಕೆಲ ಮಾಹಿತಿಯನ್ನು
ಶಿಕ್ಷಕರೇ ಖುದ್ದು ಅಪ್‌ಲೋಡ್‌ ಮಾಡಬೇಕಿದ್ದು, ಇನ್ನು ಕೆಲವು ಮಾಹಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರು ಅಪ್‌ಲೋಡ್‌ ಮಾಡಬೇಕು.

ಶಿಕ್ಷಕರು, ಬಿಇಒ ಹಾಗೂ ಜಿಲ್ಲಾ ಉಪನಿರ್ದೇಶಕರು ಮಾಹಿತಿ ಅಪ್‌ಲೋಡ್‌ ಮಾಡಿದ ನಂತರವೂ ಅದನ್ನು ಸೂಕ್ತ ಸಮಯದಲ್ಲಿ ಕ್ರೊಢೀಕರಿಸಿ, ಹೆಚ್ಚುವರಿ ಶಿಕ್ಷಕರ ಪಟ್ಟಿ, ತಾತ್ಕಾಲಿಕ ಆದ್ಯತಾಪಟ್ಟಿ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ. ಇದಕ್ಕೆ ಸಾಫ್ಟ್ವೇರ್‌ನಲ್ಲಿರುವ ತಾಂತ್ರಿಕ ದೋಷವೇ ಕಾರಣ ಎಂದು ಶಿಕ್ಷಕರು ಆರೋಪಿಸಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಘಟಕದ ಒಳಗಿನ ವರ್ಗಾವಣೆಗೆ 47,458 ಹಾಗೂ ಘಟಕದ ಹೊರಗಿನ ವರ್ಗಾವಣೆಗೆ 11,257 ಅರ್ಜಿ ಸಲ್ಲಿಕೆಯಾಗಿದೆ. ಪ್ರೌಢಶಾಲಾ ವಿಭಾಗ ಘಟಕದ ಒಳಗಿನ ವರ್ಗಾವಣೆಗೆ 16,225 ಹಾಗೂ ಘಟಕದ ಹೊರಗಿನ ವರ್ಗಾವಣೆಗೆ 2,053 ಅರ್ಜಿ ಸಲ್ಲಿಕೆಯಾಗಿವೆ. ಗ್ರೂಪ್‌ ಬಿ ಹಾಗೂ ತತ್ಸಮಾನ ಹುದ್ದೆಯ ಘಟಕದೊಳಗೆ ಮತ್ತು ಹೊರಗಿನ ವರ್ಗಾವಣೆಗೆ 1,154 ಹಾಗೂ ಕೋರಿಕೆ ವರ್ಗಾವಣೆಗೆ 2,486 ಅರ್ಜಿ ಬಂದಿವೆ.

ಪ್ರಭಾವಿಗಳಿಂದ ಒತ್ತಡ: ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಮಾಹಿತಿ ಸಂಗ್ರಹಣೆ ಮೊದಲಾದ ಕಾರ್ಯಗಳು ಈಗಾಗಲೇ
ಮುಗಿದಿದ್ದು, ಹೆಚ್ಚುವರಿ ಶಿಕ್ಷಕರ ಸ್ಥಳ ನಿಯೋಜನೆ ಪ್ರಕ್ರಿಯೆ ನಡೆಯಬೇಕಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ತಾವಿರುವ ಶಾಲೆಯಿಂದ ಹೊರಬರಲು ಬಯಸುತ್ತಿಲ್ಲ. ಇದಕ್ಕಾಗಿ ರಾಜಕೀಯ ನಾಯಕರ ಮೂಲಕ ಅಧಿಕಾರಿಗಳಿಗೆ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ತಂತ್ರಾಂಶದಲ್ಲೊಂದು ಮಾಹಿತಿ ನೀಡಿ, ಪ್ರಭಾವಿಗಳಿಗೆ ಇನ್ನೊಂದು ಮಾಹಿತಿ ಒದಗಿಸಿ ಎರಡು
ಕಡೆಗಳಲ್ಲೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ನೇರವಾಗಿ ಸಚಿವರು, ಶಾಸಕರು ಹಾಗೂ ವಿಧಾನ
ಪರಿಷತ್‌ ಸದಸ್ಯರ ಮೂಲಕವಾಗಿ ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ತಮ್ಮ ಹೆಸರು ತೆಗೆಸಿಕೊ ಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

Advertisement

ಬಿಇಒ, ಡಿಡಿಪಿಐ ಕಚೇರಿಯಲ್ಲೂ ಇದರ ಕಾರ್ಯ ನಡೆಸಬೇಕು. ಹಲವು ಜಿಲ್ಲೆಗಳಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಆದ್ಯತಾ ಪಟ್ಟಿ, ಆಕ್ಷೇಪಣೆ ಸಲ್ಲಿಕೆಯಲ್ಲಿ ಸಾಫ್ಟ್ವೇರ್‌ನ ದೋಷದಿಂದ ಅನ್ಯಾಯವಾಗುತ್ತಿದೆ. 
ವಿ.ಎಂ. ನಾರಾಯಣಸ್ವಾಮಿ, ಅಧ್ಯಕ್ಷ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

● ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next