Advertisement

ಶಿಕ್ಷಕರ ವರ್ಗಾವಣೆ ಕರಡು ನಿಯಮಕ್ಕೆ ಅಸಮಾಧಾನ

10:56 AM Jun 11, 2020 | Suhan S |

ಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆ ಕರಡು ನಿಯಮ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಶಿಕ್ಷಕರಿಗೆ ತೀವ್ರ ನಿರಾಸೆ ಮೂಡಿಸಿದೆ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಶಿಕ್ಷಕರ ಮನವಿಗೆ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಸ್ಪಂದಿಸಿ ಶಿಕ್ಷಕರ ವರ್ಗಾವಣೆ ಅಧಿನಿಯಮ ಹೊರಡಿಸಿದ್ದಾರೆ. ಆದರೆ ಇದಕ್ಕಾಗಿ ಕಾಯುತ್ತಿದ್ದ ಶಿಕ್ಷಕರಿಗೆ ಅದರಲ್ಲೂ ಈ ಭಾಗದ ಶಿಕ್ಷಕರಿಗೆ ತೀವ್ರ ನಿರಾಸೆ ಮೂಡಿಸಿದೆ. ಶೇ.20 ನಿಯಮ ತೆಗೆಯದ ಕಾರಣ ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಬಹು ದೊಡ್ಡ ಶಿಕ್ಷೆಯಾಗಿದೆ. ಇದನ್ನು ಸಂಪೂರ್ಣ ತೆಗೆದು ಹಾಕುವುದು ನಮ್ಮ ಒತ್ತಾಯವಾಗಿತ್ತು. ಆದರೆ ಇದನ್ನು ಶೇ.25ಕ್ಕೆ ಹೆಚ್ಚಿಸಲಾಗಿದ್ದು, ಇದು ಕೆಲ ತಾಲೂಕುಗಳಿಗೆ ಮಾತ್ರ ಸಹಕಾರಿಯಾಗಿದ್ದು, ಉಳಿದ ತಾಲೂಕುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ನೋವಿಗೆ ಬೆಲೆ ಇಲ್ಲದಂತಾಗಿದೆ. ಪರಸ್ಪರ ವರ್ಗಾವಣೆಗೂ ಕೊಕ್ಕೆ ಹಾಕಿದ್ದು, ಏಳು ವರ್ಷಗಳಿಗೆ ಏರಿಸುವ ಮೂಲಕ ಮುಕ್ತ ಪರಸ್ಪರ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ವಂಚನೆಯಾಗಿದೆ. ವರ್ಗಾವಣೆ ಎಂಬುದು ಸೇವಾ ಹಿರಿತನದ ಆಧಾರದಲ್ಲಿ ಆದಾಗ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬಹುದಾಗಿತ್ತು. ಆದರೆ ಜೇಷ್ಠತಾ ಪಟ್ಟಿಯಲ್ಲಿ 15-20 ವರ್ಷಗಳ ಸೇವೆ ಸಲ್ಲಿಸಿದವರಿಗೆ ವರ್ಗಾವಣೆ ಇಲ್ಲದಂತಾಗಿದೆ.

ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಶಿಕ್ಷಕರಾಗಿದ್ದರೆ ಅವರಿಗೆ ಜೇಷ್ಠತಾ ಪಟ್ಟಿಯಲ್ಲಿ ಕೊನೆಯ ಪ್ರಾಶಸ್ತ್ಯ ನೀಡಲಾಗಿದೆ. ಸಾಮಾಜಿಕ ನ್ಯಾಯದ ಆಧಾರದಲ್ಲಿ ಅನಾರೋಗ್ಯ ಪೀಡಿತರು, ಅಂಗವಿಕಲರು, ಪತಿ ಮತ್ತು ಪತ್ನಿ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದ ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 15-20 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಇನ್ನುಳಿದ ಸೇವೆಯನ್ನು ತಮ್ಮ ಮೂಲ ಜಿಲ್ಲೆಗಳಲ್ಲಿ ಸಲ್ಲಿಸಲು ವರ್ಗಾವಣೆ ಬಯಸಿದವರಿಗೆ ಅವಕಾಶ ದೊರೆತಿಲ್ಲ. 3-5 ವರ್ಷ ಸೇವೆ ಸಲ್ಲಿಸಿದವರಿಗೆ ಈ ಅವಕಾಶ ದೊರೆತಿದ್ದು, ಪ್ರತಿ ಬಾರಿಯೂ ವರ್ಗಾವಣೆ ನಿಯಮ ಬಿಡುಗಡೆಯಾದಾಗಲೂ ನಿರಾಸೆ ಮೂಡಿಸಿದೆ.

ಶಿಕ್ಷಕರ ಸಮಸ್ಯೆಗಳನ್ನು ಪ್ರತಿನಿಧಿಸುವಲ್ಲಿ ಮಾನ್ಯತೆ ಪಡೆದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಫಲವಾಗಿದ್ದು, ಕೂಡಲೇ ಆಗಿರುವ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಘ ಮುಂದಾಗಬೇಕು ಎಂದು ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next