Advertisement

ಶಿಕ್ಷಕರ ವರ್ಗಾವಣೆಗೆ ಅಧ್ಯಾದೇಶ : ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

12:43 AM Apr 27, 2021 | Team Udayavani |

ಬೆಂಗಳೂರು: ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸಲೀಸಾಗಿ ನಡೆಸಲು ವರ್ಗಾವಣೆ ಕಾಯ್ದೆಗೆ ಅಧ್ಯಾದೇಶದ ಮೂಲಕ ತಿದ್ದುಪಡಿ ತರಲಾಗಿದೆ. ಸೋಮವಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಶಿಕ್ಷಕರ ವರ್ಗಾವಣೆ ಸಂಬಂಧ ಹೊಸ ಕಾಯ್ದೆ ರೂಪಿಸಿ, ಉಭಯ ಸದನಗಳಲ್ಲಿ ಅಂಗೀಕರಿಸಿ, ನಿಯಮ ರಚಿಸಿ, ಪ್ರಕ್ರಿಯೆ ಆರಂಭಿಸಲಾಗಿತ್ತು. ಕಡ್ಡಾಯ ವರ್ಗಾವಣೆ ಮತ್ತು ಹೆಚ್ಚುವರಿ ವರ್ಗಾವಣೆ ಪಡೆದವರಿಗೆ ಆದ್ಯತೆ ನೀಡುವ ಸಂಬಂಧ ನಿಯಮದಲ್ಲಿ ಉಲ್ಲೇಖೀಸಲಾಗಿದ್ದರೂ ಕಾಯ್ದೆಯಲ್ಲಿ ಈ ಅಂಶ ಇರಲಿಲ್ಲ.

ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಪಡೆದವರಿಗೆ ಮೊದಲ ಆದ್ಯತೆ ನೀಡಿದರೆ ಉಳಿದ ಶಿಕ್ಷಕರಿಗೆ ಅನ್ಯಾಯವಾಗಲಿದೆ ಎಂದು ಕೆಲವರು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ಕೆಎಟಿಯು ಕಾಯ್ದೆಯಲ್ಲಿ ಇರುವಂತೆಯೇ ವರ್ಗಾವಣೆ ನಡೆಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಣ ಇಲಾಖೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಹೈಕೋರ್ಟ್‌ ಕೂಡ ಕೆಎಟಿ ಆದೇಶವನ್ನು ಮಾನ್ಯ ಮಾಡಿತ್ತು. ಇದರಿಂದ ವರ್ಗಾವಣೆ ನಡೆಸುವುದು ಕಷ್ಟ ಎಂದು ಶಿಕ್ಷಣ ಇಲಾಖೆ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಪಡೆದವರಿಗೆ ಮೊದಲ ಆದ್ಯತೆ ನೀಡುವ ಅಂಶವನ್ನು ಕಾಯ್ದೆಯಲ್ಲೇ ಸೇರಿಸಿ ತಿದ್ದುಪಡಿ ರೂಪದಲ್ಲಿ ಅನುಷ್ಠಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಕಾಯ್ದೆಗೆ ತಿದ್ದುಪಡಿ ತಂದು, ಅಧ್ಯಾ ದೇಶವನ್ನು ರಾಜ್ಯಪಾಲರಿಗೆ ಕಳುಹಿಸ ಲಾಗುತ್ತದೆ. ರಾಜ್ಯಪಾಲರ ಅಂಕಿತದ ಬಳಿಕ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಮುಂದಿನ 6 ತಿಂಗಳಲ್ಲಿ ಕಾಯ್ದೆಗೆ ಸದನದ ಅನುಮೋದನೆ ಪಡೆಯಬೇಕಿದೆ. ಇದರಿಂದಾಗಿ ಮುಂದಿನ ಒಂದೆರಡು ತಿಂಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸುವುದು ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next