ಬೆಂಗಳೂರು: 2020-21ನೇ ಸಾಲಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರ ಸಾಮಾನ್ಯ ವರ್ಗಾವಣೆ ಕುರಿತು 2020ರ ನ.11ರಂದು ಹೊರಡಿಸಿರುವ ಅಧಿಸೂಚನೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ “ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ’ (ಕೆಎಟಿ) ಆದೇಶಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಿಂದಾಗಿ ತೊಂದರೆಗೆ ಸಿಲುಕಿರುವ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2020-21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಮೊದಲ ಅದ್ಯತೆ ನೀಡದುದನ್ನು ಪ್ರಶ್ನಿಸಿ ಮೂಡಿಗೆರೆ ತಾಲೂಕಿನ ಹಾಲೇಹಳ್ಳಿ ಸ.ಪ್ರಾ.ಶಾಲೆಯ ಶಿಕ್ಷಕ ಬಿ.ಎನ್. ಮಹೇಶ್ವರಪ್ಪ ಹಾಗೂ ಇತರ 7 ಮಂದಿ ಅರ್ಜಿ ಸಲ್ಲಿಸಿದ್ದರು.
ಇದನ್ನು ವಿಚಾರಣೆ ನಡೆಸಿದ ಕೆಎಟಿಯ ಹಂಗಾಮಿ ಅಧ್ಯಕ್ಷ ನ್ಯಾ| ಆರ್.ಬಿ.ಬೂದಿಹಾಳ್ ಮತ್ತು ಆಡಳಿತಾತ್ಮಕ ಸದಸ್ಯ ಶಿವಶೈಲಂ ಅವರಿದ್ದ ಪೀಠ, ನ.11ರ ಅಧಿಸೂಚನೆಗೆ ಉಭಯ ಕಡೆಯವರು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಾಂತರ ಆದೇಶ ನೀಡಿ, ವಿಚಾರಣೆಯನ್ನು ಡಿ.23ಕ್ಕೆ ಮುಂದೂಡಿತು.
2016-17ನೇ ಸಾಲಿನ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಶಿಕ್ಷಕರು ತೊಂದರೆಗೆ ಸಿಲುಕಿದ್ದಾರೆ. ಅಲ್ಲದೆ, ಮೂರು ವರ್ಷಗಳಿಂದ ಕಾರಣಾಂತರಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಈಗ ಸಾರ್ವಜನಿಕ ಶಿಕ್ಷಣ ಇಲಾಖೆ 2020-21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಗೆ ಕೌನ್ಸಿಲ್ ನಡೆಸಲು ಅರ್ಜಿಗಳನ್ನು ಆಹ್ವಾನಿಸಿದೆ.
ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು 2016-17ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೆ ಸಿಲುಕಿದವರಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ, 2019-20ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೆ ಸಿಲುಕಿರುವವರಿಗೆ ಆದ್ಯತೆ ನೀಡಲಾಗಿದೆ. ಆದ್ದರಿಂದ ಜಿಲ್ಲೆ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.