ಹುಣಸೂರು: ಈ ಶಾಲೆಯಲ್ಲಿನ ಶಿಕ್ಷಕರು ಮಕ್ಕಳಿಗೆ ಚುನಾವಣೆ ಎಂದರೇನು, ಚುನಾವಣೆಯಲ್ಲಿ ಮತಯಾಚಿಸುವ-ಮತದಾನ ಮಾಡುವ, ಆಯ್ಕೆಯಾದ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋದಿಸುವ ಮೂಲಕ ಸಾರ್ವತ್ರಿಕ ಚುನಾವಣೆಯ ಮಜಲುಗಳನ್ನು ತೋರಿಸಿಕೊಟ್ಟರು.
ತಾಲೂಕಿನ ಹುಂಡಿಮಾಳ ಸರಕಾರಿ ಪ್ರೌಢ ಶಾಲೆಯ ಶಾಲಾ ಸಂಸತ್‌ಗೆ ನಡೆಸಿದ ಚುನಾವಣೆಯಲ್ಲಿ ಚುನಾವಣಾ ಆಯೋಗವು ನಡೆಸುವ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪದ್ಧತಿ ಅನುಸರಿಸಿ, ಚುನಾವಣೆ ನಡೆಸಿ ಮಕ್ಕಳಲ್ಲಿದ್ದ ಚುನಾವಣೆ ಬಗೆಗಿನ ಕುತೂಹಲ ತಣಿಸಿದರು.
ವಿದ್ಯಾರ್ಥಿಗಳು ಸಹ ರಾಜಕೀಯ ಪಕ್ಷಗಳವರಿಗೆ ತಾವೇನು ಕಮ್ಮಿ ಇಲ್ಲದಂತೆ ನಾಮಪತ್ರ ಸಲ್ಲಿಸುವುದರಿಂದ ಹಿಡಿದು ತಮ್ಮ ಪರ ಮತ ಹಾಕುವಂತೆ ವಿದ್ಯಾರ್ಥಿ ಮಿತ್ರರಲ್ಲಿ ಮತಯಾಚಿಸಿ, ಕೆಲ ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಮಂತ್ರಿ ಮಂಡಲಕ್ಕೆ ಆಯ್ಕೆಯಾಗಿ ತಾವು ಚುನಾವಣೆಯಲ್ಲಿ ಗೆದ್ದೆವೆಂಬ ಸಂತಸದ ನಗೆ ಬೀರಿದರು.
ಮಾದರಿ ಚುನಾವಣೆ: ಶಾಲೆಯ ಶಿಕ್ಷಕ ಆನಂದಪೂಜಾರ್ ನಾಮಪತ್ರ ಸಲ್ಲಿಸುವ-ಮತಯಾಚಿಸುವ, ಮತದಾನ ಮಾಡುವ-ನಡೆಸುವ, ಆಯ್ಕೆಯಾಗುವ ಬಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಎರಡನೇ ಚುನಾವಣಾಧಿಕಾರಿಯಾಗಿ ಶಿಕ್ಷಕಿ ಎಂ.ಎನ್.ಪ್ರತಿಭಾ, ಮತದಾನ ಮಾಡಿದ ವಿದ್ಯಾರ್ಥಿಗಳ ಬೆರಳಿಗೆ ಮಾರ್ಕರ್ ಪೆನ್‌ನಿಂದ ಗುರುತು ಮಾಡಿದರು. ಲೋಕೇಶ್ ಮೂರನೇ ಚುನಾವಣಾಧಿಕಾರಿಯಾಗಿ ಹಾಜರಾತಿ ಪಟ್ಟಿ ಹಿಡಿದು ಮಕ್ಕಳ ಹೆಸರನ್ನು ಓದಿ ಹೇಳುವ ಮೂಲಕ ಅದೇ ಶಾಲೆಯ ವಿದ್ಯಾರ್ಥಿಗಳೆಂದು ಖಚಿತಪಡಿಸಿದರು.
ಪ್ರಮಾಣ ವಚನ: ಚುನಾವಣೆ ನಂತರ ಆಯ್ಕೆಯಾದ ಅಭ್ಯರ್ಥಿಗಳು, ವಿದ್ಯಾರ್ಥಿಗಳು ತಮ್ಮ ಮೇಲೆ ವಿಶ್ವಾಸವಿಟ್ಟು ತಮಗೆ ನೀಡಿರುವ ಜವಾಬ್ದಾರಿಯನ್ನು ಕಾಯಾ-ವಾಚಾ-ಮನಸಾಪಾಲಿಸುವುದಾಗಿ ಮತ್ತು ಶಾಲೆಯ ಅಭಿವೃದ್ಧಿಗಾಗಿ ಶ್ರಮಹಾಕುವ, ಸಹೋದ್ಯೋಗಿ ವಿದ್ಯಾರ್ಥಿಗಳ ಕಷ್ಟದಲ್ಲಿ ಭಾಗಿಯಾಗುವುದಾಗಿ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಮುಖ್ಯ ಶಿಕ್ಷಕ ಕೆ.ರವಿ ಅಧ್ಯಕ್ಷತೆಯಲ್ಲಿ ಪ್ರಮಾಣವಚನ ಭೋದಿಸಿದರು. ವಿಜಯಿಯಾದ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು. ಮಂತ್ರಿ ಮಂಡಲದ ಕರ್ತವ್ಯಗಳ ಬಗ್ಗೆ ಶಿಕ್ಷಕಿ ಸವಿತ ಹಾಗೂ ಶಿವಸ್ವಾಮಿ ತಿಳಿಸಿಕೊಟ್ಟರು.
ಶಾಲಾ ಸಂಸತ್‌ಗೆ ಆಯ್ಕೆ: ಶರತ್ ಕುಮಾರ್(ಮುಖ್ಯಮತ್ರಿ), ಹರ್ಷಿತ(ಹಣಕಾಸು), ಅಕ್ಷಯ್(ನೀರು ಮತ್ತು ನೆರ್ಮಯ್ಯ), ವಿನಯ್ (ಪ್ರವಾಸೋದ್ಯಮ), ಮದನ್‌ಚಾರಿ(ಆರೋಗ್ಯ ಮತ್ತು ಸ್ವತ್ಛತೆ), ಸಚಿನ್(ಸಾಂಸ್ಕೃತಿಕ), ಸ್ವಾಮಿ(ಪರಿಸರ) ಉಮಾ (ಗ್ರಂಥಾಲಯ), ದಿವ್ಯ(ಮಾಹಿತಿ), ರಾಣಿ (ಕ್ರೀಡೆ), ಕಾವ್ಯ ಎಚ್.ಎಂ (ಮಹಿಳೆ ಮತ್ತು ಸುರಕ್ಷತೆ) ಹಾಗೂ ಪ್ರತಿಪಕ್ಷದ ನಾಯಕರಾಗಿ(ಯು.ಆರ್.ಕಾವ್ಯ) ಆಯ್ಕೆಯಾಗಿದ್ದಾರೆ.
* ಸಂಪತ್‌ಕುಮಾರ್