ಕಾವೂರು: ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು ನಾವು ಶ್ರಮ ವಹಿಸುತ್ತೇವೆ.ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗೀ ಶಾಲೆ ಗಳಿಗಿಂತ ಸರಕಾರಿ ಶಾಲೆ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಶಿಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ.
ಮರಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣ ಕಟ್ಟಡವನ್ನು ಎಂಸಿಎಫ್ ಸಿಎಸ್ಆರ್ ನಿಧಿಯಿಂದ ನವೀಕರಣಗೊಳಿಸಿದ್ದು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಶಾಲೆಯಲ್ಲಿ ಇಂದು 260 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.ನಗರ ಪ್ರದೇಶದಲ್ಲಿ ಇದು ಉತ್ತಮ ಸಾಧನೆ.ಗರಿಷ್ಟ ವಿದ್ಯಾರ್ಥಿಗಳ ಸಂಖ್ಯೆ ನೋಡಿ ದತ್ತು ತೆಗೆದುಕೊಂಡ ಮೂರು ಶಾಲೆಗಳಲ್ಲಿ ಈ ಶಾಲೆಯೂ ಒಂದಾಗಿದೆ.ಶಾಲಾ ಸಮಿತಿಯ ,ಶಿಕ್ಷಕರ ಬೇಡಿಕೆಯಂತೆ ಎಲ್ ಕೆ ಜಿ ,ಯುಕೆಜಿ ಆರಂಭಕ್ಕೆ ನೆರವು ನೀಡಲಾಗುವುದು.ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಸ್ಮಾರ್ಟ್ ಸಿಟಿ ಯೋಜನೆಯಿಂದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.ಕೇಂದ್ರ ಜಾರಿಗೊಳಿಸಿದ ನೂತನ ಶಿಕ್ಷಣ ಕಾಯಿದೆಯಂತೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಉದ್ದೇಶದ ಜತೆಗೆ ಈಗಿನ ಸ್ಪರ್ಧಾ ಜಗತ್ತಿಗೆ ಮಕ್ಕಳನ್ನು ತಯಾರು ಮಾಡುವ ಸವಾಲು ಶಿಕ್ಷಕರಿಗೆ ಇದೆ . ಇದರ ಜತೆಗೆ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕಡೆಗಣಿಸ ಕೂಡದು ಎಂದರು.ಇದೇ ಸಂದರ್ಭ ಎಂಸಿಎಫ್ ಸಂಸ್ಥೆಯ ಶಿಕ್ಷಣ,ಆರೋಗ್ಯ ಕ್ಷೇತ್ರಕ್ಕೆ ನೀಡುವ ಕೊಡುಗೆಯನ್ನು ಶಾಸಕರು ಶ್ಲಾಘಿಸಿದರು.
ಎಂಸಿಎಫ್ ನಿರ್ದೇಶಕ ಪ್ರಭಾಕರ ರಾವ್ ಮಾತನಾಡಿ, ರೈತರಿಗೆ ಬೆಳೆಗೆ ಬೇಕಾದ ಗೊಬ್ಬರ ತಯಾರಿಸಿ ನೀಡುವ ಜತೆಗೆ ಆರೋಗ್ಯ,ಶೈಕ್ಷಣಿಕ ನೈರ್ಮಲ್ಯದ ಬಗ್ಗೆಯೂ ಸಂಸ್ಥೆ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದೆ. ಶಾಸಕ ಮನವಿ ಮೇರೆಗೆ ಶಾಲಾ ಕಟ್ಟಡ ನವೀಕರಣಗೊಳಿಸಿದ್ದೇವೆ.ಅನೇಕ ಸೌಲಭ್ಯ ಒದಗಿಸಿದ್ದೇವೆ.ಮುಂದೆಯೂ ನೆರವು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಲೋಹಿತ್ ಅಮೀನ್,ಮಾಜಿ ಮೇಯರ್ ಹರಿನಾಥ್, ಶಿಕ್ಷಣ ಇಲಾಖೆಯ ಬಿ ಆರ್ ಸಿ ಶಂಕರಪ್ಪ ಮುದ್ನಾಳ್, ಸಿ ಆರ್ ಪಿ ಲವೀನ ಕ್ರಾಸ್ತಾ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್,ಎಂಸಿಎಫ್ ನ ಹಿರಿಯ ಅಧಿಕಾರಿಗಳು,ಶಾಲಾ ಆಡಳಿತ ಸಮಿತಿ ಸದಸ್ಯರು,ಪೋಷಕರು,ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ನೇತ್ರಾವತಿ ಸ್ವಾಗತಿಸಿದರು.ಪ್ರಾಸ್ತಾವಿಕವಾಗಿ ನಾಗಮಣಿ ಮಾತನಾಡಿದರು.ಜುಡಿತ್ ವೇಗಸ್ ವಂದಿಸಿದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯ ಕ್ರಮ ನಿರೂಪಿಸಿದರು.