ಧಾರವಾಡ: ಮೇ 21 ಹಾಗೂ 22ರಂದು ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಈ ಪೈಕಿ ಧಾರವಾಡ ನಗರದ ವಿವಿಧ 9 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2134 ಅಭ್ಯರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ ಎಂದು ಡಿಸಿ ಗುರುದತ್ತ ಹೆಗಡೆ ಹೇಳಿದರು.
ನಗರದ ಬಾಸೆಲ್ ಮಿಷನ್, ಕೆ.ಇ. ಬೋರ್ಡ್, ಶಾರದಾ, ಯೂನಿವರ್ಸಿಟಿ ಪಬ್ಲಿಕ್ ಶಾಲೆ ಸೇರಿದಂತೆ ವಿವಿಧ 9 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಯಾವುದೇ ರೀತಿಯ ಅಕ್ರಮ ತಡೆಗಟ್ಟುವ ಉದ್ದೇಶದಿಂದ ಪರೀಕ್ಷಾರ್ಥಿಗಳ ತಪಾಸಣೆಗಾಗಿ ಎರಡು ಹಂತದಲ್ಲಿ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ, ಗಡಿಯಾರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸುವ ಮುನ್ನ ಪರೀಕ್ಷಾರ್ಥಿಗಳ ತಪಾಸಣೆಗಾಗಿ ಪೊಲೀಸ್, ಶಿಕ್ಷಣ, ಆರೋಗ್ಯ ಮತ್ತಿತರೆ ಇಲಾಖೆಗಳ ಸಿಬ್ಬಂದಿ ನಿಯೋಜಿಸಲಾಗುವುದು. ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡಬಾರದು ಎಂದರು.
ಅಕ್ರಮ ತಡೆಗಟ್ಟಲು ಪ್ರತಿಯೊಂದು ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಪರಿಶೀಲಿಸಿದ ಡಿಸಿ, ಪಾರದರ್ಶಕ ಪರೀಕ್ಷೆ ನಮ್ಮೆಲ್ಲರ ಜವಾಬ್ದಾರಿ. ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ನ್ಯೂನತೆ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ಆದ್ದರಿಂದ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕಿದೆ. ಪರೀಕ್ಷೆ ಕೆಲಸವನ್ನು ಗಂಭೀರವಾಗಿ ಪರಿಗಣಿಸಬೇಕು. ಪರೀಕ್ಷೆಗೆ ನಿಯೋಜಿತರಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಇದೇ ಮೊದಲ ಬಾರಿ ಪರೀಕ್ಷಾ ಕೇಂದ್ರಗಳನ್ನು ಸುಪರ್ದಿಗೆ ಪಡೆದುಕೊಳ್ಳಲಾಗುತ್ತಿದೆ. ಪರೀಕ್ಷಾರ್ಥಿಗಳನ್ನು ಹೊರತುಪಡಿಸಿ ಮೂರನೇ ವ್ಯಕ್ತಿಗೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಇರಲ್ಲ. ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಎರಡು ಹಂತಗಳಲ್ಲಿ ಅಭ್ಯರ್ಥಿಗಳ ತಪಾಸಣೆ ನಡೆಸಲಾಗುತ್ತದೆ. ಮೊಬೈಲ್, ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಬರಲು ಅವಕಾಶವಿಲ್ಲ. ಈ ಬಾರಿಯ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಶಿಸ್ತುಬದ್ಧ ಕೆಲಸ ಮಾಡಬೇಕು ಎಂದರು.
ಜಿಪಂ ಸಿಇಒ ಡಾ| ಸುರೇಶ ಇಟ್ನಾಳ ಮಾತನಾಡಿ, ಪ್ರಶ್ನೆಪತ್ರಿಕೆ ವಿತರಣೆ ಹಾಗೂ ಉತ್ತರ ಪತ್ರಿಕೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಸಮಯ ಪಾಲನೆಗೆ ಹೆಚ್ಚು ಒತ್ತು ನೀಡಬೇಕು. ಪರೀಕ್ಷಾ ಕೇಂದ್ರದ ಮೂಲಸೌಕರ್ಯವನ್ನು ಮುಂಚಿತವಾಗಿ ಪರಿಶೀಲಿಸಿ ಏನಾದರೂ ಅನಾನುಕೂಲ ಕಂಡು ಬಂದರೆ ಸರಿಪಡಿಸಬೇಕು. ಎಲ್ಲ ಕೊಠಡಿಗಳಲ್ಲಿ ಗಡಿಯಾರ ಅಳವಡಿಸಬೇಕು. ಪರೀಕ್ಷಾ ಸಮಯ, ಪ್ರಶ್ನೆಪತ್ರಿಕೆಗಳ ಸ್ವೀಕಾರ ಮತ್ತು ವಿತರಣೆ ಕುರಿತ ಮಾರ್ಗಸೂಚಿಗಳನ್ನು ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾರ್ಥಿಗಳಿಗೆ ಯಾವುದೇ ರೀತಿಯ ಗೊಂದಲ-ಅಕ್ರಮಗಳಿಗೆ ಅವಕಾಶ ನೀಡದೇ ಸಮಯಪಾಲನೆ ಜತೆಗೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಡಯಟ್ ಪ್ರಾಚಾರ್ಯೆ ಎನ್.ಕೆ. ಸಾವ್ಕಾರ್, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.
ಡಿಸಿ ಗುರುದತ್ತ ಹೆಗಡೆ ಅವರು ಕರ್ತವ್ಯ ನಿಮಿತ್ಯವಾಗಿ ತಾವು ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದ ಕೆ.ಇ.ಬೋರ್ಡ್ ಶಾಲೆಗೆ ಭೇಟಿ ನೀಡಿ, ಪರೀಕ್ಷೆ ಸಿದ್ಧತೆಗಳನ್ನು ಪರಿಶೀಲಿಸಿದರು. ಇಲ್ಲಿ ತಾವು ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ಸಹಾಯಕ ಸಿಬ್ಬಂದಿಯಾಗಿದ್ದ ಬಾಬು ಹಾಗೂ ಹಾಜರಿದ್ದ ಶಿಕ್ಷಕರನ್ನು ಆತ್ಮೀಯವಾಗಿ ಮಾತನಾಡಿ, ಕ್ಷೇಮ ವಿಚಾರಿಸಿದರು. ಜಿಲ್ಲಾಧಿಕಾರಿಗಳ ಆಪ್ತತೆ, ಸರಳತೆ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಪುಳಕಿತರನ್ನಾಗಿಸಿತು. ಶಾಲೆಗೆ ಮತ್ತೂಮ್ಮೆ ಪ್ರತ್ಯೇಕವಾಗಿ ಆಗಮಿಸಿ, ಗೌರವ ಸ್ವೀಕರಿಸಲು ಶಿಕ್ಷಕರು ಆಹ್ವಾನ ನೀಡಿದರು.