ಹಾಸನ: ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಮೆರವಣಿಗೆ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಶಿಕ್ಷಕರು, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿದಸಿ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ವರ್ಗಾವಣೆ ಮಾಡಿ: ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆಯಾಗದೇ ಇರುವು ದರಿಂದ ವರ್ಗಾವಣೆ ಪ್ರಕ್ರಿಯೆ ಈಗ ಆರಂಭವಾಗಿದೆ. ಪ್ರಕ್ರಿಯೆ ಮುಗಿದ ಬಳಿಕ ಅಕ್ಟೋಬರ್ ತಿಂಗಳಲ್ಲಿ ಮತ್ತೂಮ್ಮೆ ಕೋರಿಕೆ ವರ್ಗಾವಣೆ ನಡೆಸಬೇಕು. ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು ಎಂದು ಆಗ್ರಸಿದರು.
ಬಡ್ತಿ ನೀಡಿ: 6ನೇ ವೇತನ ಆಯೋಗದ ಅಂತಿಮ ವರದಿ ಶಿಪಾರಸ್ಸಿನ ಪ್ರಕಾರ ಮುಖ್ಯ ಶಿಕ್ಷಕರಿಗೆ 10, 15, 20, 25, 30 ವರ್ಷದ ಬಡ್ತಿಗಳನ್ನು ನೀಡಬೇಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೆಶಕರ ಹುದ್ದೆಯ ವರೆಗೂ ಬಡ್ತಿಯನ್ನು ನೀಡಬೇಕು. ಕೃಪಾಂಕ ಶಿಕ್ಷಕರ ಮತ್ತು ನೌಕರರ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಯನ್ನು ಈಡೇರಿಸದ್ದರೇ ಸೆಪ್ಟಂಬರ್ 9 ರಂದು ಶಿಕ್ಷಕರ ದಿನಾ ಚರಣೆಯನ್ನು ಬಹಿಷ್ಕರಿಸಿ ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಜಿ. ದ್ಯಾವೇಗೌಡ, ಖಜಾಂಚಿ ಎಂ.ಎಸ್. ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಅಣ್ಣಪ್ಪ, ನಾಯಕರಹಳ್ಳಿ ಮಂಜೇಗೌಡ, ಸರಕಾರಿ ನೌಕರರ ಸಂಘದ ನಿರ್ದೇಶಕ ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.