ದಾವಣಗೆರೆ: ವೇತನ ಶ್ರೇಣಿ ನಿಗದಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು. 9 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ತಿಪ್ಪೇಶಪ್ಪ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ 4,500ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸುವರು. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಈವರೆಗೆ ಶಾಂತಿಯುತ ಹೋರಾಟ ನಡೆಸಲಾಗಿದೆ.
ಸರ್ಕಾರ ಸ್ಪಂದಿಸದೇ ಇರುವ ಕಾರಣಕ್ಕೆ ಶಾಲೆಗಳ ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿದ್ದೇವೆ. ಈಗಲೂ ಸರ್ಕಾರ ಬೇಡಿಕೆ ಈಡೇರಿಸದಿದ್ದಲ್ಲಿ ಸೆ.5 ರಂದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ, ವಿಧಾನ ಸೌಧ ಚಲೋ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರು ಪದವಿ ಪೂರೈಸಿದ್ದಾರೆ. ಈವರೆಗೂ ಅವರನ್ನ ಪದವೀಧರ ಶಿಕ್ಷಕರು ಎಂದು ಪರಿಗಣಿಸಿಯೇ ಇಲ್ಲ. ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ ಮಾಡುವ ಮೂಲಕ ಅವರನ್ನು ಪದವೀಧರ ಶಿಕ್ಷಕರು ಎಂದು ಪರಿಗಣಿಸಿ, ಸೂಕ್ತ ವೇತನಶ್ರೇಣಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಈಗಿರುವ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಮುಂದುವರೆಸಬೇಕು. ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಅಕ್ಟೋಬರ್‌ನಲ್ಲಿ ಬರೀ ಕೋರಿಕೆ ಮೇರೆಗೆ ವರ್ಗಾವಣೆ ಮಾಡಬೇಕು. ಗ್ರಾಮೀಣ ಕೃಪಾಂಕ ನೌಕರರು, ಶಿಕ್ಷಕರ ಸಮಸ್ಯೆ ಬಗೆ ಹರಿಸಬೇಕು. ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆಯಲ್ಲಿನ ನ್ಯೂನತೆ ಸರಿಪಡಿಸಬೇಕು. 6ನೇ ವೇತನ ಆಯೋಗದ ಶಿಫಾರಸಿನಂತೆ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸಿದ್ದೇಶಿ, ಉಪಾಧ್ಯಕ್ಷ ಎಚ್.ಕೆ. ಚಂದ್ರಶೇಖರಪ್ಪ, ಸಹ ಕಾರ್ಯದರ್ಶಿ ಎಚ್. ಚಂದ್ರಪ್ಪ, ಖಜಾಂಚಿ ಕೆ. ಶಿವಮೂರ್ತಿ, ಶಿವಲಿಂಗಪ್ಪ, ಶಾಮಣ್ಣ, ಪ್ರಕಾಶ್ ಮಡಿವಾಳ್, ಕರಿಬಸವಯ್ಯ, ವೇದಮೂರ್ತಿ, ಎಜಾಜ್ ಅಹಮ್ಮದ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.