Advertisement

ಬೇಡಿಕೆ ಈಡೇರಿಕೆಗೆ ಶಿಕ್ಷಕರ ಪ್ರತಿಭಟನೆ

10:54 AM Jul 10, 2019 | Team Udayavani |

ಹಾವೇರಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಎರಡು ಸಾವಿರಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರು ಶಾಲೆಗೆ ಗೈರಾಗಿ ಜಿಲ್ಲಾಡಳಿತ ಭವನದ ಎದುರು ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Advertisement

ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಶಿಕ್ಷಕರು ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡು, ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಘೋಷಣೆ ಕೂಗಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಪದವೀಧರ ಶಿಕ್ಷಕರಿಗೆ ಶೇ. 50ರಷ್ಟು ಬಡ್ತಿ ನೀಡಬೇಕು. ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿ ಪಡಿಸಬೇಕು. ಪದವೀಧರ ಶಿಕ್ಷಕರೆಂದು ಪರಿಗಣಿಸುವ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಾಯಿಸಬೇಕು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರೆಸಬೇಕು ಎಂದು ಪ್ರತಿಭಟನಾ ಶಿಕ್ಷಕರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗದೇ ಈಗ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಈ ಪ್ರಕ್ರಿಯೆ ಮುಗಿದ ತಕ್ಷಣ ಅಕ್ಟೋಬರಲ್ಲಿ ಮತ್ತೂಮ್ಮೆ ಕೇವಲ ಕೋರಿಕೆ ವರ್ಗಾವಣೆ ನಡೆಸಬೇಕು. ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗಳಲ್ಲಿರುವ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು, ಶಿಕ್ಷಕ ಮತ್ತು ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಪ್ರಕ್ರಿಯೆ ಆರಂಭಿಸಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದರೆ ಸೆ. 5ರಂದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಸಹ ಶಿಕ್ಷಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಆರ್‌. ಅಣ್ಣಯ್ಯನವರ, ಶಿಕ್ಷಕ ಸಂಘಟನೆ ಪದಾಧಿಕಾರಿಗಳಾದ ಜೆ.ಆರ್‌. ಯಲವದಹಳ್ಳಿ, ಸಿ.ಬಿ. ಪಾಟೀಲ, ಬಿ. ಅನುರಾಧಾ, ಸಿ.ಬಿ. ಬಂಗೇರ, ವೈ.ಜಿ. ಹರಕುಣಿ, ಸಿ.ಸಿ. ಸೇಬಣ್ಣನವರ, ಕೆ.ಆರ್‌. ಬಾರ್ಕಿ, ಎಸ್‌.ಎಂ. ಕೌಸರ, ಎಂ.ಜಿ. ದೊಡ್ಡಗೌಡರ, ಎಸ್‌.ಎನ್‌. ಮುಗಳಿ, ಎ.ಎಫ್‌. ಹೊಸಮನಿ, ಎಸ್‌.ವಿ. ಇಚ್ಚಂಗಿಮಠ, ಎನ್‌.ವಿ. ಕಲಕೋಟಿ, ವಿಜಯೇಂದ್ರ ಯತ್ತಿನಹಳ್ಳಿ, ಇತರರು ಪ್ರತಿಭಟನೆಯಲ್ಲಿದ್ದರು. ಎನ್‌ಪಿಎಸ್‌. ಬಿಇಡಿ ಪದವೀಧರರು, ಗ್ರಾಮೀಣ ಕೃಪಾಂಕ ನೌಕರರು, ಮಹಿಳಾ ವೇದಿಕೆ, ಶಿಕ್ಷ‌ಕರ ಸಂಘದ ತಾಲೂಕು ಘಟಕಗಳ ಪದಾಧಿಕಾರಿಗಳು, ಮುಖ್ಯ ಶಿಕ್ಷ‌ಕರ ಸಂಘ, ದೈಹಿಕ ಶಿಕ್ಷ‌ಕರ ಸಂಘಗಳು ಬೆಂಬಲ ನೀಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next