ಧಾರವಾಡ: ಬೆಳಗಾವಿ ವಿಭಾಗದ ಶಿಕ್ಷಕರ ಅಮಾನತ್ತಿನ ಎಲ್ಲಾ ಪ್ರಕರಣ ರದ್ದುಪಡಿಸುವುದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಭಯಮುಕ್ತ ವಾತಾವರಣಕ್ಕೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬೆಳಗಾವಿ ವಿಭಾಗ ಮಟ್ಟದ ಶಿಕ್ಷಕರ ಬೃಹತ್ ಪ್ರತಿಭಟನಾ ರ್ಯಾಲಿ ನಗರದಲ್ಲಿ ಸೋಮವಾರ ಜರುಗಿತು.
ನಗರದ ರಾಜ್ಯ ಸರ್ಕಾರಿ ನೌಕರರ ಭವನದಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡ ಶಿಕ್ಷಕರು, ಸರ್. ಸಿದ್ದಪ್ಪ ಕಂಬಳಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಬಳಿಕ ಜಿಲ್ಲಾ ಧಿಕಾರಿ ಮೂಲಕ ಸಿಎಂ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಅಖೀಲ ಭಾರತ ಪ್ರಾಥಮಿಕ ಶಿಕ್ಷಕರ ಫೇಡರೇಶನ್ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ಮಾತನಾಡಿ, ಬೆಳಗಾವಿ ವಿಭಾಗ ಮಟ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ನೆಮ್ಮದಿಯಿಂದ ಕಾರ್ಯ ನಿರ್ವಹಿಸದ ಪರಿಸ್ಥಿತಿ ನಿರ್ಮಾಣವಾಗಿರುವುದು ಖೇದಕರ ಸಂಗತಿ. ಶಿಕ್ಷಣ ಇಲಾಖೆ ಮೇಲಧಿ ಕಾರಿಗಳು ವಿನಾಕಾರಣ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಸಣ್ಣ-ಪುಟ್ಟ ತಪ್ಪುಗಳಿಗೂ ಶಿಕ್ಷಕರನ್ನು ಹುದ್ದೆಯಿಂದ ಅಮಾನತುಗೊಳಿಸುವ ಕಾರ್ಯವನ್ನು ಮಾಡಲಾಗಿದೆ. ಕೆಳಹಂತದ ಶಿಕ್ಷಕರ ಮೇಲೆ ಇಲಾಖೆ ಅಧಿ ಕಾರಿಗಳ ಈ ಕ್ರಮ ಅಕ್ಷಮ ಎಂದು ದೂರಿದರು.
ಸಂಘಟನೆ ಹಿರಿಯ ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಬೆಳಗಾವಿ ವಿಭಾಗ ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಇಲಾಖೆಯ ಮೇಲ ಧಿಕಾರಿಗಳು ಭಯದ ವಾತಾವರಣ ನಿರ್ಮಿಸಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಪಾಠ ಬೋಧಿಸುವುದು ದುಸ್ತರವಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ, ಸರ್ಕಾರಿ ಶಾಲೆಗಳ ಸಬಲೀಕರಣ, ಬೆಳಗಾವಿ ವಿಭಾಗ ಮಟ್ಟದ ಎಲ್ಲ ಅಮಾನತು ಪ್ರಕರಣಗಳನ್ನು ತಕ್ಷಣವೇ ರದ್ದುಪಡಿಸುವುದು, ತಡೆಹಿಡಿದ ವೇತನ ಬಡ್ತಿಯನ್ನು ಶಿಕ್ಷಕರಿಗೆ ವಾಪಸ್ ನೀಡಬೇಕು. ಇದಲ್ಲದೇ ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಪದಾಧಿಕಾರಿಗಳಾದ ಚಂದ್ರಶೇಖರ್ ಎನ್.ಎಸ್, ಅರುಣಪ್ರತಾಪ ರೆಡ್ಡಿ, ಎಸ್.ಡಿ. ಗಂಗಣ್ಣವರ, ಯುವರಾಜ ಕೆ, ಜಿ.ಪದ್ಮಲತಾ, ಭಾರತಿ, ವಿವಿಧ ಜಿಲ್ಲಾ ಪದಾ ಧಿಕಾರಿಗಳಾದ ಜಯಕುಮಾರ ಹೆಬಳಿ, ಮಲ್ಲಿಕಾರ್ಜುನ ಸಿದ್ದನಗೌಡ್ರ, ಸಿ.ವಿ. ಹಿರೇಮಠ, ಸದ್ದರಾಮ ಲೋಕಣ್ಣವರ, ಬಸವರಾಜ ಬಾಗೇನವರ, ಅರ್ಜುನ ಲಮಾಣಿ, ವೈ.ಎಚ್. ಬಣವಿ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.