ಮಂಗಳೂರು/ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ 3,000 ಶಿಕ್ಷಕರು ಮಂಗಳವಾರ ಶಾಲೆಗೆ ಸಾಂದರ್ಭಿಕ ರಜೆ ಮಾಡಿ ಪ್ರತಿಭಟನೆ ಸಭೆಗಳಲ್ಲಿ ಪಾಲ್ಗೊಂಡರು.
ಸರಕಾರ ಇನ್ನೂ ಬೇಡಿಕೆಯನ್ನು ಪರಿಗಣಿಸ ದಿದ್ದರೆ ಸೆ. 5ಕ್ಕೆ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಸಂಘದ ದ.ಕ. ಜಿಲ್ಲಾಧ್ಯಕ್ಷ ಶಿವಶಂಕರ ಭಟ್ ಕೆ. ಮತ್ತು ಉಡುಪಿಯ ರವೀಂದ್ರ ಹೆಗ್ಡೆ ಹೇಳಿದರು.
ಎರಡೂ ಜಿಲ್ಲೆಗಳ ಶಿಕ್ಷಕರು ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿದರು. ಮಳೆ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮಂಗಳೂರಿನಲ್ಲಿ ಜ್ಯೋತಿ ವೃತ್ತದಿಂದ ನೆಹರೂ ಮೈದಾನದವರೆಗೆ ರ್ಯಾಲಿ ನಡೆಸಿದರು.
ದ.ಕ. ಜಿಲ್ಲೆಯ ಪ್ರೌ.ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸ್ಟಾನಿ ತಾವ್ರೊ, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಬಂಟ್ವಾಳ ಪ್ರಾ. ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಶಿವ ಪ್ರಸಾದ್, ಸಂಘದ ಪ್ರ. ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ತಾಲೂಕು ವಿಭಾಗಗಳ ಪ್ರಮುಖರಾದ ಜಗದೀಶ್ ಶೆಟ್ಟಿ, ಚಂಚಲಾಕ್ಷಿ, ನಾಗೇಶ್, ಪ್ರಭಾಕರ ನಾರಾವಿ, ಶ್ರೀಧರ ಗೌಡ, ಸುರೇಶ್, ಮಾವಚ್ಚನ್, ರಮೇಶ್ ರಾಯಿ, ಉಡುಪಿ ಜಿಲ್ಲಾ ಸಮಿತಿಯ ಪ್ರ. ಕಾರ್ಯದರ್ಶಿ ಪ್ರಕಾಶ್ ಬಿ.ಬಿ., ವಿವಿಧ ವಲಯಾಧ್ಯಕ್ಷರಾದ ದಿನಕರ್ ಶೆಟ್ಟಿ, ಮಂಗಳಾ, ಕೃಷ್ಣ ಮೊಲಿ, ಯಶವಂತ್, ಸದಾರಾಮ್ ಶೆಟ್ಟಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸೂರಪ್ಪ ಉಪಸ್ಥಿತರಿದ್ದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಡಿಸಿ ವಿರುದ್ಧ ಆಕ್ರೋಶ
ಉಡುಪಿಯಲ್ಲಿ ಶಿಕ್ಷಕರ ಮನವಿ ಸ್ವೀಕರಿಸಿದ ಡಿಸಿ, ಶಾಲೆಗೆ ರಜೆ ನೀಡಿ ಪ್ರತಿಭಟನೆ ನಡೆಸಲು ಯಾರು ಅನುಮತಿ ಕೊಟ್ಟರು ಎಂದು ಪ್ರಶ್ನಿಸಿದರು. ಉಡುಪಿ ಜಿಲ್ಲಾಧಿಕಾರಿಯ ಧೋರಣೆಯ ವಿರುದ್ಧ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.