Advertisement

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಪ್ರಯತ್ನಿಸುವುದು ಅವಶ್ಯ

12:11 PM Jul 30, 2018 | |

ವಿಜಯಪುರ: ಶಿಕ್ಷಕರು ತಮ್ಮ ವೃತ್ತಿಯನ್ನು ಸಂತೋಷದಿಂದ ಹಾಗೂ ಶ್ರದ್ಧೆಯಿಂದ ನಿರ್ವಹಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಕೆಎಎಸ್‌ ಅಧಿಕಾರಿ ಎಸ್‌.ಎಸ್‌. ಬೀಳಗಿಪೀರ ಅಭಿಪ್ರಾಯಪಟ್ಟರು.

Advertisement

ನಗರದ ಸಿಕ್ಯಾಬ್‌ ಶಿಕ್ಷಣ ಸಂಸ್ಥೆಯ ಎಆರ್‌ ಎಸ್‌ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ನ್ಯಾಕ್‌ ಪರಿಷ್ಕೃತ ಮೌಲ್ಯಮಾಪನ ಹಾಗೂ ಮಾನ್ಯತೆಯ ಹೊಸ ಮಾನದಂಡಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಹಾಗೂ ಶಿಕ್ಷಣದಲ್ಲಿ ಗುಣಾತ್ಮಕತೆ ಕುರಿತಾದ ಚಿಂತನಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ಕೃಷ್ಟತೆ ಮತ್ತು ಶ್ರೇಷ್ಠತೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಕಾಲ ಕಾಲಕ್ಕೆ ಅಂತರಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಶಿಕ್ಷಣವು ಆದ್ಯತೆಯ ಕ್ಷೇತ್ರವಾಗಬೇಕು. ಗುಣಾತ್ಮಕ ಸಂಸ್ಥೆ ತನ್ನಷ್ಟಕ್ಕೆ ತಾನು ಮೌಲ್ಯಮಾಪನ ಮಾಡಿಕೊಳ್ಳಬೇಕು. ಇದು ಸ್ವಯಂ ಗುಣಮಟ್ಟವಿದ್ದಾಗ ಮಾತ್ರ ಸಾಧ್ಯವಾಗಲಿದೆ. ಶಿಕ್ಷಕರು ತಮ್ಮ ವೃತ್ತಿಯನ್ನು ಸಂತೋಷದಿಂದ ಅನುಭವಿಸಿದಾಗ ಮಾತ್ರ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ. ಕಾಟಾಚಾರದ ಉದ್ಯೋಗ ಗುಣಮಟ್ಟವನ್ನೂ ಎಂದಿಗೂ ತರುವುದಿಲ್ಲ ಎಂದು ಅಭಿಪ್ರಾಯಪಟ್ಟರು. 

ಸಿಕ್ಯಾಬ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್‌. ಪಾಟೀಲ ಮಾತನಾಡಿ, ತಾತ್ವಿಕ ಸಿದ್ಧಾಂತದ ಮೇಲೆ ಶಿಕ್ಷಣ ಕ್ಷೇತ್ರ ಕಾರ್ಯ ನಿರ್ವಹಿಸಬೇಕಾಗಿದೆ. ಇಂದಿನ ದಿನಗಳಲ್ಲಿ ಪರಿಮಾಣಕ್ಕಿಂತ ಗುಣಾತ್ಮಕತೆಗೆ ಮಹತ್ವ ಇರಬೇಕು. ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಪದವಿ ಪ್ರಮಾಣ ಪತ್ರ ನೀಡುವ ಸಂಸ್ಥೆಗಳು ಹುಟ್ಟಿಕೊಂಡಿದ್ದು ಗುಣಾತ್ಮಕ ಕಲಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಜ್ಯ ಸರ್ಕಾರದ ಗುಣಮಟ್ಟ ಭರವಸೆ ಕೋಶದ ಮಾಜಿ ಸಂಯೋಜಕ ಡಾ| ಎಲ್‌.ಎನ್‌. ಶೇಷಗಿರಿ ಮಾತನಾಡಿ, ಗುಣಾತ್ಮಕವಿಲ್ಲದ ಶಿಕ್ಷಣ ಖಾಲಿ ಕೊಡವಿದ್ದಂತೆ. ಪ್ರತಿಯೊಬ್ಬ ಶಿಕ್ಷಕ ಜೀವನ ಪೂರ್ತಿ ವಿದ್ಯಾರ್ಥಿಯಾಗಿರಬೇಕು. ಕಲಿಕೆ ಶಿಕ್ಷಕನ ಗುಣಶಕ್ತಿಯಾಗಬೇಕು. ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕನಲ್ಲಿರುವ ಶೈಕ್ಷಣಿಕ ಶಕ್ತಿ ಸಾಧ್ಯವಾಗುತ್ತದೆ ಎಂದರು.

Advertisement

ಸಮಾಜದಲ್ಲಿ ದುಡಿಮೆ ಪ್ರತಿಯೊಬ್ಬರ ಸಹಜ ಗುಣವಾಗಬೇಕು. ವಿಶ್ವದ ಅನ್ಯ ದೇಶಗಳಿಗೆ ಹೋಲಿಸಿದರೆ ದುಡಿಯವವರಿಗಿಂತ ಬೆವರಿನ ಶ್ರಮವಿಲ್ಲದೇ ಫಲ ಉಣ್ಣಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವುದಕ್ಕಿಂತ ಅದುವೇ ಜವನ ಕ್ರಮವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಜಗತ್ತಿನ ಯಾವುದೇ ಮೂಲೆಗೆ ಹೋದರೂ ಭಾರತೀಯರಿಗೆ ವಿಶೇಷ ಗೌರವ ಸ್ಥಾನವಿರುವುದ ಅವರಲ್ಲಿರುವ ದುಡಿಮೆಯ ಗುಣದಿಂದಲೇ ಎಂಬುದನ್ನು ನಾವೆಲ್ಲ ಹೆಮ್ಮೆ ಪಡುವ ವಿಷಯ ಎಂದರು. ನಿದೇರ್ಶಕ ಸಲಾವುದ್ದೀನ್‌ ಅಯ್ಯೂಬಿ ಪುಣೇಕರ ಮಾತನಾಡಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್‌.ಎ. ಪುಣೇಕರ ಅಧ್ಯಕ್ಷತೆ ವಹಿಸಿದ್ದರು. ಡಾ| ರಿಯಾಜ್‌ ಫಾರೂಕಿ, ಸಂಯೋಜಕ ಸಿ.ಎಲ್‌. ಪಾಟೀಲ, ಪ್ರಾಚಾರ್ಯ ಮೊಹ್ಮದ್‌ ಅಫ್ಜಲ್‌, ಮನೋಜ್‌ ಕೊಟ್ನಿಸ್‌, ಡಾ| ಮಲ್ಲಿಕಾರ್ಜುನ ಮೇತ್ರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next