ಶಿರಸಿ: ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ನೆಪದಲ್ಲಿ ಸುಣ್ಣ ಬೆಣ್ಣೆ ನೀತಿಯನ್ನು ಶಿಕ್ಷಣ ಇಲಾಖೆ ಅನುಸರಿಸುತ್ತಿದೆ. ಶಿಕ್ಷಕ ವೃತ್ತಿಯಲ್ಲಿ ಇರದ ಕುಟುಂಬದ ಪತಿ ಅಥವಾ ಪತ್ನಿಗೆ ವಿನಾಯತಿಯಿಂದಲೂ ವಂಚನೆ ಮಾಡಿದ್ದು ಈಗ ಇಲಾಖೆಯ ಮೇಲೆ ಆರೋಪದ ತೂಗು ಕತ್ತಿಯಾಗಿದೆ. ನಿತ್ಯ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲೂ ಆಗದೇ ವರ್ಗಾವಣೆ ಸಂಕಟ ಅನುಭವಿಸುವಂತೆ ಆಗಿದೆ. ಕೌಟುಂಬಿಕ ನೆಮ್ಮದಿಗೂ ಕೊಡಲಿ ಏಟು ಬೀಳುವಂತಾಗಿದೆ.
2017ರಲ್ಲಿ ಜಾರಿಗೆ ತರಲಾದ ವರ್ಗಾವಣೆ ಕಾಯಿದೆ ಅನ್ವಯ ಶಿಕ್ಷಕರನ್ನು ಎಬಿಸಿ ಎಂದು ವಿಂಗಡನೆ ಮಾಡಲಾಗಿದ್ದು, ಇದು ಶಿಕ್ಷಕರ ಸಂಘಟನೆಗೂ, ಶಿಕ್ಷಕರ ಕುಟುಂಬದಲ್ಲೂ ಸಮಸ್ಯೆ ಸೃಷ್ಟಿಸಿದೆ ಎಂದು ಶಿಕ್ಷಣ ತಜ್ಞ ಎಂ.ಎಂ. ಭಟ್ಟ ಕಾರೇಕೊಪ್ಪ, ಪಿ.ಬಿ. ಹೊಸೂರು, ಬಾಬು ನಾಯ್ಕ ಹಾಗೂ ಇತರರು ಆರೋಪಿಸಿದ್ದಾರೆ.
ಶನಿವಾರ ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸರಕಾರಿ, ಬ್ಯಾಂಕ್ ಉದ್ಯೋಗಿ ಪತಿ ಇದ್ದರೆ ಶಿಕ್ಷಕಿಯಾಗಿ ಪತ್ನಿ ಇದ್ದರೆ ಪತ್ನಿ ಪತಿ, ಅನಾರೋಗ್ಯ ಸೇರಿದಂತೆ ಅನೇಕ ಕಾರಣಗಳನ್ನು ಇಟ್ಟು ವರ್ಗಾವಣೆಯಿಂದ ಕೈ ಬಿಡಲಾಗಿದೆ. ಆದರೆ, ಪತಿ ಅಥವಾ ಪತ್ನಿ ಖಾಸಗಿ ನೌಕರಿ, ಅರೆ ಸರಕಾರಿ, ರೈತಾಪಿಯಲ್ಲಿದ್ದರೆ ಅವರಿಗೆ ವಿನಾಯತಿ ಇಲ್ಲವಾಗಿದೆ ಎಂದೂ ದೂರಿದರು.
ಪತಿ ವಿಕಲಚೇತನರಿದ್ದವರು, ಪತ್ನಿಗೆ ಅನಾರೋಗ್ಯ ಉಳ್ಳವರು, ಸಣ್ಣ ಸಣ್ಣ ಮಕ್ಕಳು ಇದ್ದವರನ್ನು ಕೂಡ ಬೇಕಾಬಿಟ್ಟಿ ವರ್ಗಾವಣೆ ಮಾಡಲಾಗಿದೆ. ಸೈನ್ಯದಲ್ಲಿ ಕೆಲಸ ಮಾಡಿ ಬಂದ ಸೈನಿಕನ ಪತ್ನಿಗೂ ವಿನಾಯತಿ ಇಲ್ಲವಾಗಿದೆ. ಕಡ್ಡಾಯ ವರ್ಗಾವಣೆ ಹೆಸರಿನಲ್ಲಿ ಅವೈಜ್ಞಾನಿಕ ವರ್ಗಾವಣೆ ಮಾಡಲಾಗುತ್ತಿದ್ದು, ಬೆಂಗಳೂರಿನಲ್ಲಿ ಕುಳಿತ ಅಧಿಕಾರಿಗಳು ಮಾಡುವ ನಿಯಮಕ್ಕೆ ಇಲಾಖೆಯ ಕೆಳ ಸ್ಥರದಲ್ಲಿ ಸಮಸ್ಯೆ ಆಗಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ಒಮ್ಮೆ ವರ್ಗಾವಣೆ ಮಾಡುವದಿದ್ದರೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. ಈ ಮೊದಲು ಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದನ್ನೂ ಪರಿಗಣಿಸಬೇಕು. ಕೊರತೆ ಇರುವ ಶಿಕ್ಷಕರನ್ನು ನೇಮಕಗೊಳಿಸಿಕೊಂಡು ಹೊಸಬರಿಗೆ ಅವಕಾಶ ನೀಡಬೇಕು. ಪತಿ ಪತ್ನಿ ಶಿಕ್ಷಕರಾಗಿ ನಗರದಲ್ಲೇ ಸೇವೆ ಸಲ್ಲಿಸುವ ಅವಕಾಶ ಇದೆ. ಆದರೆ, ಗ್ರಾಮೀಣ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅನ್ಯಾಯ ಮಾಡಿದ್ದು ಸರಿಯಲ್ಲ. ಪರಸ್ಪರ ವರ್ಗಾವಣೆ ಅವಕಾಶ ಕೊಡಬೇಕು. ಅಥವಾ ಕಡ್ಡಾಯ ವರ್ಗಾವಣೆ ಹೇಳಿಕೆಗೆ ನ್ಯಾಯ ಕೊಡಬೇಕು. ಕಡ್ಡಾಯ ವರ್ಗಾವಣೆ ನೆಪ ಹೇಳಿ ಮತ್ತೆ ವಿನಾಯತಿ ನೀಡುವುದೂ ಸರಿಯಲ್ಲ ಎಂದೂ ಆಗ್ರಹಿಸಿದರು.
ಈಗಾಗಲೇ ಈ ಸಮಸ್ಯೆಯನ್ನು ಶಿಕ್ಷಣ ಸುರೇಶಕುಮಾರ ಅವರ ಗಮನಕ್ಕೆ ತರಲಾಗಿದೆ. ಸ್ಪಂದನೆಯ ಭರವಸೆ ಸಿಕ್ಕಿದೆ ಎಂದೂ ಇದೇ ವೇಳೆ ತಿಳಿಸಿದರು.