Advertisement

ವಿದ್ಯಾರ್ಥಿಗಳ ಮನೆಗೆ ಶಿಕ್ಷಕರ ಭೇಟಿ

10:58 AM Mar 05, 2018 | Team Udayavani |

ಶಹಾಬಾದ: ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅಭ್ಯಾಸದ ಸ್ಥಿತಿ ಪರಿಶೀಲಿಸುತ್ತಿದ್ದಾರೆ.

Advertisement

ಹಬ್ಬ-ಹರಿದಿನಗಳೆನ್ನದೇ, ತಮ್ಮ ಕುಟುಂಬದ ಕೆಲಸ ಸ್ವಲ್ಪ ಸಮಯದವರೆಗೆ ಬದಿಗಿಟ್ಟು, ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುವ ವಿನೂತನ ಕಾರ್ಯಕ್ರಮದ ಮೂಲಕ ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಾದ ತೆಗನೂರ, ಅಲ್ದಿಹಾಳ, ತರಿತಾಂಡಾ, ಮುತ್ತಗಾ ಹಾಗೂ ಭಂಕೂರ ಗ್ರಾಮದಿಂದ ಆಗಮಿಸುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪಾಲಕರ ಜತೆಗೆ ಮಕ್ಕಳ ಕಲಿಕೆ ಕುರಿತು ಚರ್ಚಿಸುತ್ತಿದ್ದಾರೆ. ಈ ಹಿಂದೆ ಪ್ರತಿ ತಿಂಗಳು ಶಾಲೆಯಲ್ಲಿ ತೆಗೆದುಕೊಂಡ ಪರೀಕ್ಷೆಗಳಲ್ಲಿ ಪಡೆದುಕೊಂಡ ಅಂಕಗಳ ವಿವರ ಹಾಗೂ ವಾರ್ಷಿಕ ಪರೀಕ್ಷೆ ಯಾವ ರೀತಿ ಮಕ್ಕಳನ್ನು ಸಿದ್ಧಗೊಳಿಸಬೇಕು ಎಂದು ಪಾಲಕರಿಗೆ ತಿಳಿಸುತ್ತಿದ್ದಾರೆ. ಎಸ್‌ ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಣೆ ಮತ್ತು ಫಲಿತಾಂಶ ಸುಧಾರಣೆಗಾಗಿ ಈ ರೀತಿಯ ಯೋಜನೆಯನ್ನು ಶಿಕ್ಷಕರು ರೂಪಿಸಿದ್ದಾರೆ.
ಶಾಲೆ ಬಿಟ್ಟ ನಂತರ ಸಂಜೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ 7 ಗಂಟೆಯವರೆಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದಾರೆ.

ಈ ಬಾರಿ ನಮ್ಮ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳೇ ಹೆಚ್ಚಾಗಿರುವುದರಿಂದ ಫಲಿತಾಂಶದಲ್ಲಿ ಇಳಿ ಮುಖವಾಗಬಹುದು.ಆದರೆ ಏನಾದರೂ ಮಾಡಿ ಫಲಿತಾಂಶವನ್ನು ಆದಷ್ಟು ಕಾಪಾಡಿಕೊಳ್ಳಬೇಕೆಂದು ಸದುದ್ದೇಶದಿಂದ ಸಾಕಷ್ಟು ಶ್ರಮ ಹಾಕಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಓದುವ ಸ್ಥಿತಿಗತಿ ಕುರಿತು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದೇವೆ ಎಂದು
ಹೇಳುತ್ತಾರೆ ಶಿಕ್ಷಕ ದತ್ತಪ್ಪ ಕೊಟನೂರ್‌, ಈರಣ್ಣ ಕೆಂಬಾವಿ ಹಾಗೂ ವಿಷ್ಣುತೀರ್ಥ ಆಲೂರ.ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದಾಗ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸುವ, ಪರೀಕ್ಷೆ ಬಗ್ಗೆ ಇರುವ ಆತಂಕ ನಿವಾರಣೆ, ಓದುವ ವಿಧಾನ, ವಿಷಯ ಮನದಟ್ಟು ಮಾಡಿಕೊಳ್ಳುವ ವಿಧಾನ ಹಾಗೂ ಮಕ್ಕಳ ಓದುವ ಪೂರಕವಾದ ರೀತಿಯಲ್ಲಿ ಪ್ರೋತ್ಸಾಹ ನೀಡುವಂತೆ ಪಾಲಕರು ವಿನಂತಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. 

ಸುಮಾರು ಎರಡು ತಿಂಗಳಿನಿಂದ ಪಾಲಕರಿಗೆ ಭೇಟಿ ನೀಡಿದ್ದರಿಂದ ಪಾಲಕರು ಸಹ ತಮ್ಮ ಮಕ್ಕಳ ಬಗ್ಗೆ ಕಾಳಜಿ ಹೊಂದಲು ಸಹಾಯವಾಗಿದೆ.ಇದರಿಂದ ಫಲಿತಾಂಶ ಉತ್ತಮವಾದರೆ ಮುಂದಿನ ವರ್ಷದಿಂದ ಯೋಜನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next