Advertisement

ಅರ್ಧಾಂಶ ಪಠ್ಯ ಕಡಿತಕ್ಕೆ ಶಿಕ್ಷಕರ ಒತ್ತಾಯ

12:12 AM Oct 04, 2020 | mahesh |

ಬೆಂಗಳೂರು: ಕೊರೊನಾದಿಂದ ಅರ್ಧ ಶೈಕ್ಷಣಿಕ ವರ್ಷ ತರಗತಿಯಿಲ್ಲದೆ ಕಳೆದು ಹೋಗಿದ್ದು, ಉಳಿದ ಅರ್ಧ ವರ್ಷಕ್ಕೆ ಶೇ. 50ರಷ್ಟು ಪಠ್ಯ ಬೋಧನೆ ಮಾತ್ರ ಇರಬೇಕು ಎಂಬ ಪ್ರಸ್ತಾವನೆಯೊಂದನ್ನು ಕಾಲೇಜು ಮತ್ತು ಶಾಲಾ ಶಿಕ್ಷಕರ ಸಂಘವು ಸರಕಾರದ ಮುಂದಿರಿಸಿದೆ.

Advertisement

ಶೇ. 30ರಷ್ಟು ಪಠ್ಯ ಕಡಿತದ ಬಗ್ಗೆ ಸರಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡು, ಪರಿಷ್ಕರಣೆ ಪೂರ್ಣಗೊಳಿಸಿದೆ. ಶಾಲಾರಂಭ ಯಾವಾಗ ಎಂಬುದು ನಿರ್ಧಾರವಾಗಿಲ್ಲ. ಹೀಗಾಗಿ ಶೇ. 50ರಷ್ಟು ಪಠ್ಯ ಕಡಿಮೆ ಮಾಡಬೇಕು ಎಂಬುದು ಪ್ರಸ್ತಾವನೆಯ ಪ್ರಮುಖ ಅಂಶ.

ನವೆಂಬರ್‌ನಲ್ಲಿ ನೇರ ತರಗತಿಗಳು ಆರಂಭವಾದರೂ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳಿಸಬೇಕಾಗುತ್ತದೆ. ಹೀಗಾಗಿ ಶೇ. 70ರಷ್ಟು ಪಠ್ಯ ಬೋಧನೆ ಕಷ್ಟವಾಗುತ್ತದೆ. ಪಠ್ಯವನ್ನು ಶೇ.50ಕ್ಕೆ ಇಳಿಸಿ, ಮುಂದಿನ ಶೈಕ್ಷ ಣಿಕ ವರ್ಷದಲ್ಲಿ ಸರಿದೂಗಿಸಬಹುದು ಅಥವಾ ಬ್ರಿಡ್ಜ್ ಕೋರ್ಸ್‌ ಇತ್ಯಾದಿಗಳ ಮೂಲಕ ಸರಿಪಡಿಸಬಹುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಶಾಲಾ ಶಿಕ್ಷಕರು ಮತ್ತು ಕಾಲೇಜು ಉಪನ್ಯಾಸಕರ ಪ್ರತಿನಿಧಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಐದು ತಿಂಗಳು ಮಾತ್ರ ಸಮಯ
ನ. 1ರಿಂದ ಶಾಲೆ ಆರಂಭಿಸಿದರೂ ಬೋಧನೆಗೆ 5 ತಿಂಗಳು ಮಾತ್ರ ಸಿಗಲಿದೆ. ಪಾಳಿ ಪದ್ಧತಿ ಅಥವಾ ದಿನ ಬಿಟ್ಟು ದಿನ ಶಾಲೆ ನಡೆಸಬೇಕಾದಲ್ಲಿ ಪೂರ್ಣ ಪಠ್ಯಕ್ರಮ ನಿರ್ವಹಣೆ ಅಸಾಧ್ಯ. ಹೀಗಾಗಿ ಪಠ್ಯ ಕಡಿತ ಮಾಡಲೇಬೇಕು. ಶೇ. 30ರಷ್ಟು ಕಡಿತಕ್ಕೆ ಸರಕಾರವೇ ನಿರ್ಧರಿಸಿದೆ. ಈಗ ಶೇ.50ರಷ್ಟು ಪಠ್ಯ ಕಡಿತ ಸಂಬಂಧ ಸರಕಾರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ರಜಾ ದಿನಗಳ ಬಳಕೆ
ನವೆಂಬರ್‌ ತಿಂಗಳಲ್ಲಿ 23, ಡಿಸೆಂಬರ್‌ನಲ್ಲಿ 26, ಜನವರಿಯಲ್ಲಿ 25, ಫೆಬ್ರವರಿಯಲ್ಲಿ 24, ಮಾರ್ಚ್‌ನಲ್ಲಿ 26 ಮತ್ತು ಎಪ್ರಿಲ್‌ನಲ್ಲಿ 10 ಶಾಲಾ ದಿನಗಳು ಲಭ್ಯವಿರುತ್ತವೆ. ರಜಾ ದಿನಗಳನ್ನು ಬಳಸಿಕೊಂಡರೆ ಇನ್ನಷ್ಟು ಅವಧಿ ಸಿಗಲಿದೆ. ಆದರೆ ವಿದ್ಯಾರ್ಥಿಗಳಿಗೆ ಒತ್ತಡ ಹೇರಿ ಕಲಿಸಲು ಸಾಧ್ಯವಿಲ್ಲ. ಅವರ ವಯೋಮಿತಿ ಮತ್ತು ಬುದ್ಧಿಶಕ್ತಿಗೆ ಅನುಗುಣವಾಗಿಯೇ ಬೋಧನೆ ಮಾಡಬೇಕಾಗುತ್ತದೆ ಎಂಬುದು ಶಿಕ್ಷಕರು ಮತ್ತು ಉಪನ್ಯಾಸಕರ ಪ್ರತಿಪಾದನೆ.

Advertisement

ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಕಳೆದಿರುವುದರಿಂದ ಶೇ. 40ರಿಂದ 50ರಷ್ಟು ಪಠ್ಯವನ್ನು ಕಡಿತ ಮಾಡಬೇಕು. ಉಳಿದ ಅರ್ಧ ವರ್ಷದಲ್ಲಿ ಎಲ್ಲವನ್ನೂ ಬೋಧಿಸಲು ಸಾಧ್ಯವಿಲ್ಲ. ಎ.ಎಚ್‌. ನಿಂಗೇಗೌಡ, ಪ.ಪೂ. ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next