Advertisement

ಫ‌ಲಿತಾಂಶ ಕುಸಿತಕ್ಕೆ ಶಿಕ್ಷಕರ ತಲೆದಂಡ!

12:55 AM May 16, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ, ಉತ್ತಮ ಫ‌ಲಿತಾಂಶ ನೀಡುವಲ್ಲಿ ವಿಫ‌ಲವಾಗಿರುವ 200ಕ್ಕೂ ಹೆಚ್ಚಿನ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ಪಾಲಿಕೆ ಮುಂದಾಗಿದೆ.

Advertisement

ಪಾಲಿಕೆ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಇಳಿಕೆಯಾಗುತ್ತಲೇ ಇದ್ದು, ಹಲವು ಬಾರಿ ಹೊರಗುತ್ತಿಗೆ ಶಿಕ್ಷಕರಿಗೆ ನೋಟಿಸ್‌ ಜಾರಿಗೊಳಿಸದರೂ ಹೆಚ್ಚಿನ ಪ್ರಯೋಜನವಾಗಿಲ್ಲ.

ಆ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ. ಜತೆಗೆ ಫ‌ಲಿತಾಂಶ ಸುಧಾರಣೆಗೆ ಶ್ರಮ ಹಾಕದ ಖಾಯಂ ಶಿಕ್ಷಕರ ವೇತನ ಹೆಚ್ಚಳ ಕಡಿತಗೊಳಿಸುವುದು ಹಾಗೂ ಬೇರೊಂದು ಶಾಲೆಗೆ ವರ್ಗಾಹಿಸಲು ಪಾಲಿಕೆ ಸಜ್ಜಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 156 ಶಾಲೆ, ಕಾಲೇಜುಗಳಿಗೆ ಖಾಸಗಿ ಸಂಸ್ಥೆ ಮೂಲಕ ಹೊರ ಗುತ್ತಿಗೆ ಆಧಾರದಲ್ಲಿ 560 ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿದೆ. ಇದರೊಂದಿಗೆ ಪಾಲಿಕೆಯ 205 ಮಂದಿ ಖಾಯಂ ಶಿಕ್ಷಕರಿದ್ದರೂ, ಶಾಲೆಗಳಲ್ಲಿ ನಿರೀಕ್ಷಿತ ಫ‌ಲಿತಾಂಶ ಬರುತ್ತಿಲ್ಲ.

ಹೀಗಾಗಿ ಶೇ.50ಕ್ಕಿಂತ ಕಡಿಮೆ ಫ‌ಲಿತಾಂಶ ಬಂದಿರುವ ವಿಷಯ ಬೋಧಿಸುವ ಹೊರಗುತ್ತಿಗೆ ಶಿಕ್ಷಕರನ್ನು ಕೆಲಸದಿಂದ ತೆಗೆದು ಹೊಸಬರನ್ನು ನಿಯೋಜಿಸಿಕೊಳ್ಳಲಾಗುತ್ತದೆ. ಇದರೊಂದಿಗೆ ಪಾಲಿಕೆ ಶಿಕ್ಷಕರನ್ನು ವರ್ಗಾವಣೆ, ವೇತನ ಹೆಚ್ಚಳ ಕಡಿತ ಕುರಿತೂ ಚಿಂತನೆ ನಡೆಸಲಾಗಿದೆ.

Advertisement

ಉತ್ತಮ ಫ‌ಲಿತಾಂಶ ತರುವುದರಲ್ಲಿ ಹೊರಗುತ್ತಿಗೆ ಶಿಕ್ಷಕರಿಗಿಂತಲೂ ಪಾಲಿಕೆಯ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಅವರಿಗೂ ಶಿಕ್ಷೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈಗಾಗಲೇ ಬಿಬಿಎಂಪಿ ಶಾಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಫ‌ಲಿತಾಂಶ ಬಂದಿರುವ ವಿಷಯಗಳ ಶಿಕ್ಷಕರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ.

ಜತೆಗೆ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ಪೂರೈಕೆ ಮಾಡುವ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದು, ಯುವ ಹಾಗೂ ಕೌಶಲ್ಯ ಹೊಂದಿರುವ ಶಿಕ್ಷಕರನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಜ್ಞಾನ, ಗಣಿತದಲ್ಲಿ ಹಿಂದೆ: ಬಿಬಿಎಂಪಿ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಎರಡೂ ವಿಷಯಗಳಲ್ಲಿ ಹೆಚ್ಚಿನ ಅನುಭವ ಹೊಂದಿರುವ ಹಾಗೂ ಸುಲಭವಾಗಿ ಮಕ್ಕಳಿಗೆ ಕಲಿಸುವಂತಹ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ.

ಜತೆಗೆ ಪೂರ್ವ ವಲಯದ ಶಾಲೆಗಳಲ್ಲಿ ಭಾಷಾ ವಿಷಯಗಳನ್ನು ಬೋಧಿಸುವ ಶಿಕ್ಷಕರನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ ಎಂದು ಹೆಚ್ಚುವರಿ ಉಪಆಯುಕ್ತೆ (ಶಿಕ್ಷಣ) ಕೆ.ಆರ್‌.ಪಲ್ಲವಿ ತಿಳಿಸಿದರು.

ಪಾಲಿಕೆಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಹಾಗೂ ಉತ್ತಮ ಫ‌ಲಿತಾಂಶ ತರುವ ಉದ್ದೇಶ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಶೇ.50ಕ್ಕೂ ಕಡಿಮೆ ಫ‌ಲಿತಾಂಶ ನೀಡಿದ ಹೊರಗುತ್ತಿಗೆ ಶಿಕ್ಷಕರನ್ನು ತೆಗೆದು ಹೊಸಬರನ್ನು ನಿಯೋಜಿಸಿಕೊಳ್ಳಲಾಗುವುದು.
-ಅಬ್ದುಲ್‌ ವಾಜೀದ್‌, ಪಾಲಿಕೆ ಆಡಳಿತ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next